38 ವರ್ಷಗಳ ಸೇವೆಗೆ ಭಾವುಕ ಬೀಳ್ಕೊಡುಗೆ: ದಾಸ್ ಅಂಕಲ್ ಗೆ ವಿದ್ಯಾರ್ಥಿನಿಯರ ಗೌರವ
ದಾಸ್ ಅಂಕಲ್’ಗೆ ವಿದ್ಯಾರ್ಥಿನಿಯರ ಗೌರವ
bishop-cotton-girls-school-daas-uncle-gets-emotional-farewell-after-38-years-of-service


ಬೆಂಗಳೂರು, 09ಸೆಪ್ಟೆಂಬರ್(ಹಿ.ಸ.)

ಆ್ಯಂಕರ್:

ಕೆಲವು ಬೀಳ್ಕೊಡುಗೆಗಳು ಕೇವಲ ವಿದಾಯದ ಕ್ಷಣಗಳಾಗಿರುವುದಿಲ್ಲ. ಅವು ಪ್ರೀತಿ, ಗೌರವ ಹಾಗೂ ಸುದೀರ್ಘ ಸೇವೆಗೆ ಸಲ್ಲಿಸುವ ಕೃತಜ್ಞತೆಯ ಸಂಕೇತವಾಗಿರುತ್ತವೆ.

ಬೆಂಗಳೂರಿನ ಪ್ರತಿಷ್ಠಿತ ಬಿಷಪ್ ಕಾಟನ್ ಗರ್ಲ್ಸ್ ಶಾಲೆಯಲ್ಲಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿದ ‘ದಾಸ್ ಅಂಕಲ್’ ಎಂಬ ಶಾಲಾ ಸಿಬ್ಬಂದಿಗೆ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕರು ನೀಡಿದ ಭಾವುಕ ಬೀಳ್ಕೊಡುಗೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ.

ಶಾಲೆಯ ಅಟೆಂಡೆಂಟ್ ಆಗಿ ಸುದೀರ್ಘ ಸೇವೆ ಸಲ್ಲಿಸಿದ್ದ ದಾಸ್ ಅಂಕಲ್ ಅವರನ್ನು ವಿದ್ಯಾರ್ಥಿನಿಯರು ಪ್ರೀತಿಯಿಂದ ‘ದಾಸ್ ಅಂಕಲ್’ ಎಂದೇ ಕರೆಯುತ್ತಿದ್ದರು. ನಿವೃತ್ತಿಯ ಮುನ್ನ ತಮ್ಮ ಕೊನೆಯ ಕೆಲಸದ ದಿನದಂದು ಅವರು ಶಾಲೆಯ ದೊಡ್ಡ ಗಂಟೆಯನ್ನು ಕೊನೆಯ ಬಾರಿಗೆ ಬಾರಿಸಿದರು.

ದಾಸ್ ಅಂಕಲ್ ಗಂಟೆ ಬಾರಿಸುತ್ತಿದ್ದಂತೆ ಶಾಲೆಯ ನೂರಾರು ವಿದ್ಯಾರ್ಥಿನಿಯರು ಒಟ್ಟಾಗಿ ಎಣಿಕೆ ಮಾಡಿ, ಜೋರಾಗಿ ಚಪ್ಪಾಳೆ ತಟ್ಟಿ ಹರ್ಷೋದ್ಗಾರ ವ್ಯಕ್ತಪಡಿಸಿದರು.

ಶಿಕ್ಷಕರೂ ವಿದ್ಯಾರ್ಥಿನಿಯರೊಂದಿಗೆ ಸೇರಿ ಚಪ್ಪಾಳೆ ತಟ್ಟಿ ತಮ್ಮ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ದಾಸ್ ಅಂಕಲ್ ಅವರ ಮುಖದಲ್ಲಿದ್ದ ಸಂತೋಷ, ಹೆಮ್ಮೆ ಹಾಗೂ ಶಾಲೆಯೊಂದಿಗಿನ ಭಾವನಾತ್ಮಕ ನಂಟು ಎಲ್ಲರ ಗಮನ ಸೆಳೆಯಿತು.

ಆನಂದ್ ಮಹೀಂದ್ರಾ ಮೆಚ್ಚುಗೆ:ಈ ಹೃದಯಸ್ಪರ್ಶಿ ವಿಡಿಯೋವನ್ನು ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದು, ಶಾಲೆಯ ವಿದ್ಯಾರ್ಥಿಗಳು ಮತ್ತು ಅಲ್ಲಿನ ಸಂಸ್ಕೃತಿಯನ್ನು ಶ್ಲಾಘಿಸಿದ್ದಾರೆ.

‘ಒಂದು ಕೊನೆಯ ಗಂಟೆ. ಜೀವಮಾನದ ಸೇವೆ’ ಎಂದು ತಮ್ಮ ಪೋಸ್ಟ್ ಆರಂಭಿಸಿರುವ ಅವರು, 38 ವರ್ಷಗಳ ಸುದೀರ್ಘ ಸೇವೆಯ ಬಳಿಕ ಪ್ರೀತಿಯಿಂದ ‘ದಾಸ್ ಅಂಕಲ್’ ಎಂದು ಕರೆಯಲ್ಪಡುವ ಶಾಲಾ ಅಟೆಂಡೆಂಟ್ ನಿವೃತ್ತರಾಗುತ್ತಿರುವ ಸಂದರ್ಭವನ್ನು ಉಲ್ಲೇಖಿಸಿದ್ದಾರೆ.

‘ತಮ್ಮ ಕೊನೆಯ ದಿನದಂದು ಅವರು ವಾಚ್ ನೋಡಿಕೊಂಡು ಕೊನೆಯ ಬಾರಿಗೆ ಶಾಲೆಯ ದೊಡ್ಡ ಗಂಟೆಯನ್ನು ಬಾರಿಸಿದರು.

ವಿದ್ಯಾರ್ಥಿಗಳು ಪ್ರತಿ ಗಂಟೆಯ ನಾದವನ್ನು ಎಣಿಸುತ್ತಾ, ನಂತರ ಶಿಕ್ಷಕರೊಂದಿಗೆ ಸೇರಿ ಸಂಭ್ರಮದಿಂದ ಚಪ್ಪಾಳೆ ತಟ್ಟಿ ಹರ್ಷೋದ್ಗಾರ ವ್ಯಕ್ತಪಡಿಸಿದರು. ಅವರ ಮುಖದಲ್ಲಿದ್ದ ಹೆಮ್ಮೆ ಹಾಗೂ ಶಾಲೆಯೊಂದಿಗಿನ ಬಾಂಧವ್ಯದ ಆಳ ಎದ್ದು ಕಾಣುತ್ತಿತ್ತು. ಇದನ್ನು ನೋಡಿ ನಾನೂ ಭಾವುಕನಾದೆ’ ಎಂದು ಮಹೀಂದ್ರಾ ಹೇಳಿದ್ದಾರೆ.

ಸಮುದಾಯಕ್ಕೆ ಸೇವೆ ಸಲ್ಲಿಸುವ ಪ್ರತಿಯೊಬ್ಬ ವ್ಯಕ್ತಿಯನ್ನೂ ಗೌರವಿಸುವುದು ಹಾಗೂ ಅವರ ಘನತೆಯನ್ನು ಎತ್ತಿಹಿಡಿಯುವುದನ್ನು ಶಾಲೆಗಳು ಕಲಿಸಿದಾಗ, ಭವಿಷ್ಯದ ಬಗ್ಗೆ ಆಶಾವಾದ ಹೊಂದಲು ಕಾರಣಗಳಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ದಾಸ್ ಅಂಕಲ್ ಅವರ 38 ವರ್ಷಗಳ ನಿಸ್ವಾರ್ಥ ಸೇವೆಗೆ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕರು ಸಲ್ಲಿಸಿದ ಗೌರವ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

‘ಕಾಯಕವೇ ಕೈಲಾಸ’, ಕೆಲಸದ ಸ್ವರೂಪ ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ, ಪ್ರಾಮಾಣಿಕ ಸೇವೆಗೆ ದೊರೆಯುವ ಗೌರವವೇ ನಿಜವಾದ ಸಂಪತ್ತು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande