
ಬೆಂಗಳೂರು, 09ಸೆಪ್ಟೆಂಬರ್(ಹಿ.ಸ.)
ಆ್ಯಂಕರ್:
ಪತ್ನಿಯನ್ನು ಬಿಯರ್ ಬಾಟಲಿಯಿಂದ ಹೊಡೆದು ಕೊಲೆ ಮಾಡಿದ ಆಟೋ ಚಾಲಕನೊಬ್ಬ ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಹೆಚ್ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿಭೂತಿಪುರದ ನಿವಾಸಿ ಆಟೋ ಚಾಲಕ ರಾಘವೇಂದ್ರ (38) ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಪತ್ನಿ ಶ್ರುತಿ (35) ಕೊಲೆಯಾಗಿದ್ದಾರೆ.
ದಾವಣಗೆರೆ ಮೂಲದ ಶ್ರುತಿ ಹಾಗೂ ರಾಘವೇಂದ್ರ ಅವರಿಗೆ 15 ವರ್ಷಗಳ ಹಿಂದೆ ವಿವಾಹವಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದು, ಅವರು ದಾವಣಗೆರೆಯಲ್ಲಿರುವ ಅಜ್ಜಿಯ ಮನೆಯಲ್ಲಿ ವಾಸವಾಗಿದ್ದಾರೆ. ಹೀಗಾಗಿ ರಾಘವೇಂದ್ರ ಮತ್ತು ಶ್ರುತಿ ಇಬ್ಬರೇ ವಿಭೂತಿಪುರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಶ್ರುತಿ ಅಪಾರ್ಟ್ಮೆಂಟ್ವೊಂದರಲ್ಲಿ ಮನೆಕೆಲಸ ಮಾಡುತ್ತಿದ್ದರು.
ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಮಂಗಳವಾರ ರಾತ್ರಿ ಕೂಡ ಇಬ್ಬರ ನಡುವೆ ಜಗಳವಾಗಿದ್ದು, ಜಗಳದ ವೇಳೆ ರಾಘವೇಂದ್ರ ಕೈಗೆ ಸಿಕ್ಕ ಬಿಯರ್ ಬಾಟಲಿಯಿಂದ ಶ್ರುತಿಯ ತಲೆಗೆ ಹೊಡೆದಿದ್ದಾನೆ.
ತೀವ್ರವಾಗಿ ಗಾಯಗೊಂಡ ಶ್ರುತಿ ಮೃತಪಟ್ಟ ಬಳಿಕ, ರಾಘವೇಂದ್ರ ಬೆಡ್ರೂಂಗೆ ತೆರಳಿ ಫ್ಯಾನ್ನ ಉಕ್ಕಿಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.ಬುಧವಾರ ಬೆಳಗ್ಗೆ ಮನೆಯ ಬಾಗಿಲು ತೆರೆಯದಿರುವುದನ್ನು ಗಮನಿಸಿದ ಅಕ್ಕಪಕ್ಕದ ನಿವಾಸಿಗಳು ಅನುಮಾನಗೊಂಡು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಮಾಹಿತಿ ಪಡೆದ ಹೆಚ್ಎಎಲ್ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದಂಪತಿ ನಡುವೆ ನಡೆದ ಜಗಳಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಶ್ರುತಿಯ ನಡತೆ ಬಗ್ಗೆ ರಾಘವೇಂದ್ರನಿಗೆ ಅನುಮಾನವಿದ್ದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಘಟನೆ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R