ಬ್ರಿಕ್ಸ್ ದೇಶಗಳೊಂದಿಗೆ ರಷ್ಯಾದ ಶೇ.90ರಷ್ಟು ವ್ಯಾಪಾರ ರಾಷ್ಟ್ರೀಯ ಕರೆನ್ಸಿಯಲ್ಲಿ: ಪೆಸ್ಕೋವ್
ನವದೆಹಲಿ, 08 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್: ಬ್ರಿಕ್ಸ್ ರಾಷ್ಟ್ರಗಳೊಂದಿಗೆ ರಷ್ಯಾ ನಡೆಸುತ್ತಿರುವ ವ್ಯಾಪಾರದ ಶೇ.90ರಷ್ಟು ವಹಿವಾಟು ರಾಷ್ಟ್ರೀಯ ಕರೆನ್ಸಿಗಳಲ್ಲೇ ನಡೆಯುತ್ತಿದೆ ಎಂದು ಕ್ರೆಮ್ಲಿನ್ ವಕ್ತಾರ ದಿಮಿತ್ರಿ ಪೆಸ್ಕೋವ್ ತಿಳಿಸಿದ್ದಾರೆ. ಅಮೆರಿಕವು ರಷ್ಯಾಗೆ ಡಾಲರ್ ಆಧಾರಿತ ಹಣಕಾಸು ವ್ಯವ
क्रेमलिन के प्रवक्ता दिमित्री पेस्कोव


ನವದೆಹಲಿ, 08 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:

ಬ್ರಿಕ್ಸ್ ರಾಷ್ಟ್ರಗಳೊಂದಿಗೆ ರಷ್ಯಾ ನಡೆಸುತ್ತಿರುವ ವ್ಯಾಪಾರದ ಶೇ.90ರಷ್ಟು ವಹಿವಾಟು ರಾಷ್ಟ್ರೀಯ ಕರೆನ್ಸಿಗಳಲ್ಲೇ ನಡೆಯುತ್ತಿದೆ ಎಂದು ಕ್ರೆಮ್ಲಿನ್ ವಕ್ತಾರ ದಿಮಿತ್ರಿ ಪೆಸ್ಕೋವ್ ತಿಳಿಸಿದ್ದಾರೆ. ಅಮೆರಿಕವು ರಷ್ಯಾಗೆ ಡಾಲರ್ ಆಧಾರಿತ ಹಣಕಾಸು ವ್ಯವಸ್ಥೆಯ ಪ್ರವೇಶವನ್ನು ನಿರ್ಬಂಧಿಸಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ಅವರು ಹೇಳಿದ್ದಾರೆ.

ನವದೆಹಲಿಯ ಇಂಡಿಯಾ ಹ್ಯಾಬಿಟಾಟ್ ಸೆಂಟರ್‌ನಲ್ಲಿ ಸ್ಪುಟ್ನಿಕ್ ಇಂಡಿಯಾ ಆಯೋಜಿಸಿದ್ದ ವಿಡಿಯೋ ಸಂವಾದದ ಮೂಲಕ ನಡೆದ ಸುದ್ದಿಗೋಷ್ಠಿಯಲ್ಲಿ ಪೆಸ್ಕೋವ್ ಮಾತನಾಡಿದರು. ಮುಂಬರುವ ಬ್ರಿಕ್ಸ್ ಶೃಂಗಸಭೆ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಭಾರತ ಪ್ರವಾಸದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು.

ರಷ್ಯಾ ಡಾಲರ್ ಅನ್ನು ಅಂತಾರಾಷ್ಟ್ರೀಯ ಕರೆನ್ಸಿಯಾಗಿ ಬಳಸುವುದಕ್ಕೆ ವಿರೋಧ ಹೊಂದಿಲ್ಲ. ಆದರೆ ಅಮೆರಿಕದ ನೀತಿಗಳಿಂದ ಡಾಲರ್ ಬಳಕೆ ಕಷ್ಟಕರವಾಗಿರುವ ಹಿನ್ನೆಲೆಯಲ್ಲಿ ರಷ್ಯಾ ತನ್ನ ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ರಾಷ್ಟ್ರೀಯ ಕರೆನ್ಸಿಗಳ ಬಳಕೆಯನ್ನು ಹೆಚ್ಚಿಸಬೇಕಾಗಿದೆ ಎಂದು ಪೆಸ್ಕೋವ್ ಹೇಳಿದರು.

“ನಮಗೆ ಡಾಲರ್ ಬಳಸಲು ಅವಕಾಶ ನೀಡದಿದ್ದರೆ, ನಾವು ನಮ್ಮ ರಾಷ್ಟ್ರೀಯ ಕರೆನ್ಸಿಗಳನ್ನು ಬಳಸುತ್ತೇವೆ. ನಾವು ಯಾವುದೇ ರೀತಿಯ ಡಾಲರ್ ವಿರೋಧಿ ನೀತಿಯನ್ನು ಬೆಂಬಲಿಸುವುದಿಲ್ಲ. ನಮ್ಮ ರಾಷ್ಟ್ರೀಯ ಹಿತಾಸಕ್ತಿಗೆ ಸೂಕ್ತವಾದ ಮಾರ್ಗವನ್ನು ಮಾತ್ರ ಅನುಸರಿಸುತ್ತಿದ್ದೇವೆ” ಎಂದು ಅವರು ಸ್ಪಷ್ಟಪಡಿಸಿದರು.

ಬ್ರಿಕ್ಸ್ ಯಾವುದೇ ದೇಶದ ವಿರುದ್ಧ ರಚನೆಯಾದ ಒಕ್ಕೂಟವಲ್ಲ. ಸದಸ್ಯ ರಾಷ್ಟ್ರಗಳು ತಮ್ಮ ರಾಷ್ಟ್ರೀಯ ಹಿತಾಸಕ್ತಿಗಳನ್ನು ಒಟ್ಟಾಗಿ ಸಾಧಿಸಿಕೊಳ್ಳಲು ಇದು ವೇದಿಕೆಯಾಗಿ ರೂಪುಗೊಂಡಿದೆ. ಪಾಶ್ಚಿಮಾತ್ಯ ರಾಷ್ಟ್ರಗಳೊಂದಿಗೆ ಸಂಘರ್ಷ ನಡೆಸುವುದು ಬ್ರಿಕ್ಸ್‌ನ ಉದ್ದೇಶವಲ್ಲ ಎಂದು ಅವರು ಹೇಳಿದರು.

ಮೋದಿ–ಪುಟಿನ್ ದ್ವಿಪಕ್ಷೀಯ ಮಾತುಕತೆ ಸಾಧ್ಯತೆ

ಮುಂಬರುವ ಬ್ರಿಕ್ಸ್ ಶೃಂಗಸಭೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಶುಕ್ರವಾರ ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆಯಿದೆ ಎಂದು ಪೆಸ್ಕೋವ್ ತಿಳಿಸಿದರು. ವ್ಯಾಪಾರ, ಭದ್ರತೆ ಸೇರಿದಂತೆ ಹಲವು ಪ್ರಮುಖ ವಿಚಾರಗಳು ಮಾತುಕತೆಯಲ್ಲಿ ಚರ್ಚೆಯಾಗುವ ಸಾಧ್ಯತೆಯಿದೆ. ಸೂಕ್ಷ್ಮ ಜಾಗತಿಕ ವಿಷಯಗಳ ಕುರಿತು ಉಭಯ ನಾಯಕರು ತಮ್ಮ ನಿಲುವುಗಳನ್ನು ಪರಸ್ಪರ ಹಂಚಿಕೊಳ್ಳಲಿದ್ದಾರೆ ಎಂದರು.

ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿನ ಸಹಕಾರವೂ ಮೋದಿ–ಪುಟಿನ್ ಮಾತುಕತೆಯ ಪ್ರಮುಖ ವಿಚಾರವಾಗಲಿದೆ ಎಂದು ಅವರು ತಿಳಿಸಿದರು.

ಭಾರತದ ನೇತೃತ್ವದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯ ಫಲಿತಾಂಶಗಳ ಬಗ್ಗೆ ರಷ್ಯಾ ಆಶಾವಾದ ಹೊಂದಿದೆ. ಭದ್ರತೆ, ಆರ್ಥಿಕತೆ ಹಾಗೂ ಸಾಂಸ್ಕೃತಿಕ ಸಹಕಾರ ರಷ್ಯಾದ ಬ್ರಿಕ್ಸ್ ಕಾರ್ಯಸೂಚಿಯ ಪ್ರಮುಖ ಅಂಶಗಳಾಗಿವೆ ಎಂದು ಪೆಸ್ಕೋವ್ ಹೇಳಿದರು.

ಬಹುಧ್ರುವೀಯ ವಿಶ್ವಕ್ಕೆ ಒತ್ತು

ಬ್ರಿಕ್ಸ್‌ನ ಮೂಲ ಚಿಂತನೆಯಲ್ಲೇ ಬಹುಧ್ರುವೀಯ ವಿಶ್ವದ ಪರಿಕಲ್ಪನೆ ಪ್ರಮುಖವಾಗಿದೆ. ಕೆಲವು ಶಕ್ತಿಗಳು ಏಕಧ್ರುವೀಯ ವಿಶ್ವ ವ್ಯವಸ್ಥೆಯನ್ನು ಮರುಸ್ಥಾಪಿಸಲು ಪ್ರಯತ್ನಿಸುತ್ತಿದ್ದು, ಇದಕ್ಕಾಗಿ ಅಪಾಯಕಾರಿ ಮಾರ್ಗಗಳನ್ನು ಅನುಸರಿಸುತ್ತಿವೆ ಎಂದು ಪೆಸ್ಕೋವ್ ಅಮೆರಿಕದ ಹೆಸರನ್ನು ನೇರವಾಗಿ ಉಲ್ಲೇಖಿಸದೆ ಹೇಳಿದರು.

ಜಾಗತಿಕ ಬಹುಮತ ಬಹುಧ್ರುವೀಯ ವಿಶ್ವ ವ್ಯವಸ್ಥೆಯ ಪರವಾಗಿದೆ. ಈ ದಿಕ್ಕಿನಲ್ಲಿ ಭಾರತ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಉಕ್ರೇನ್ ಸಂಘರ್ಷ ಅಂತ್ಯಕ್ಕೆ ರಷ್ಯಾ ಬಯಕೆ

ಉಕ್ರೇನ್ ಸಂಘರ್ಷದ ವಿಚಾರದಲ್ಲಿ ಭಾರತದ ಪಾತ್ರವನ್ನು ಪೆಸ್ಕೋವ್ ಶ್ಲಾಘಿಸಿದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಯತ್ನಗಳೂ ಮಹತ್ವದ್ದಾಗಿವೆ ಎಂದು ಅವರು ಹೇಳಿದರು.

ಉಕ್ರೇನ್ ಸಂಘರ್ಷವನ್ನು ರಷ್ಯಾ ಆರಂಭಿಸಿಲ್ಲ ಎಂದು ಪ್ರತಿಪಾದಿಸಿದ ಪೆಸ್ಕೋವ್, 2014ರಲ್ಲಿ ಫ್ರಾನ್ಸ್, ಬ್ರಿಟನ್, ಜರ್ಮನಿ ಮತ್ತು ಅಮೆರಿಕದ ಬೆಂಬಲದಿಂದ ಅಧಿಕಾರ ಬದಲಾವಣೆ ನಡೆದ ಬಳಿಕ ರಷ್ಯನ್ ಜನರ ಮೇಲೆ ರಾಷ್ಟ್ರೀಯವಾದಿ ಶಕ್ತಿಗಳು ದಬ್ಬಾಳಿಕೆ ನಡೆಸಲು ಆರಂಭಿಸಿದವು ಎಂದು ಆರೋಪಿಸಿದರು.

ರಷ್ಯಾ ಸಂಘರ್ಷವನ್ನು ಅಂತ್ಯಗೊಳಿಸಲು ಬಯಸುತ್ತಿದೆ. ಶಾಂತಿ ಸ್ಥಾಪನೆಗೆ ನಡೆಯುವ ಎಲ್ಲ ಪ್ರಯತ್ನಗಳನ್ನು ಬೆಂಬಲಿಸುತ್ತೇವೆ. ರಷ್ಯಾ, ಉಕ್ರೇನ್ ಮತ್ತು ಅಮೆರಿಕ ನಡುವೆ ಶೀಘ್ರದಲ್ಲೇ ಮತ್ತೆ ಮಾತುಕತೆ ಆರಂಭವಾಗಲಿದೆ ಎಂಬ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

ರಷ್ಯಾದೊಂದಿಗೆ ವ್ಯಾಪಾರ ನಡೆಸುವ ರಾಷ್ಟ್ರಗಳ ಮೇಲೆ ಅಮೆರಿಕ ವಿಧಿಸುತ್ತಿರುವ ನಿರ್ಬಂಧಗಳು ಅಕ್ರಮವಾಗಿದ್ದು, ಅಂತಾರಾಷ್ಟ್ರೀಯ ವ್ಯಾಪಾರದ ನಿಯಮಗಳಿಗೆ ವಿರುದ್ಧವಾಗಿವೆ ಎಂದು ಪೆಸ್ಕೋವ್ ಆರೋಪಿಸಿದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande