
ವಡೋದರಾ, 08 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:
ಭಾರತವು ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಜಾಗತಿಕ ಮಹಾಶಕ್ತಿಯಾಗಬೇಕಾದರೆ ಬಲಿಷ್ಠ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
‘ನಮೋ ಫಾರ್ ವಿಕಸಿತ ಭಾರತ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೃತಕ ಬುದ್ಧಿಮತ್ತೆಯಲ್ಲಿ ಪರಿಣತಿ ಹೊಂದಿದ ಯುವಕರ ಅಗತ್ಯ ಕೇವಲ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಕೃಷಿ, ಆರೋಗ್ಯ, ಉತ್ಪಾದನೆ, ರೊಬೋಟಿಕ್ಸ್ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಕೃತಕ ಬುದ್ಧಿಮತ್ತೆ ಹೊಸ ಪರಿಹಾರಗಳು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಬಲ್ಲದು ಎಂದರು.
ಯುವಕರನ್ನು ಕೃತಕ ಬುದ್ಧಿಮತ್ತೆಗೆ ಸಿದ್ಧಪಡಿಸುವ ನಿಟ್ಟಿನಲ್ಲಿ ಸರ್ಕಾರ ದೊಡ್ಡ ಅಭಿಯಾನ ಆರಂಭಿಸಲಿದೆ. ಯುವಕರು ತಮ್ಮ ವಿಶೇಷ ಕೌಶಲ್ಯಗಳನ್ನು ಕೃತಕ ಬುದ್ಧಿಮತ್ತೆಯೊಂದಿಗೆ ಸಂಯೋಜಿಸಿ ಹೊಸ ತಂತ್ರಜ್ಞಾನ ಮತ್ತು ಪರಿಹಾರಗಳನ್ನು ಅಭಿವೃದ್ಧಿಪಡಿಸಬಹುದು. ಕೃಷಿಗಾಗಿ ಕೃತಕ ಬುದ್ಧಿಮತ್ತೆ ಆಧಾರಿತ ಪರಿಹಾರ ರೂಪಿಸುವುದು, ಆರೋಗ್ಯ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ ಅಭಿವೃದ್ಧಿಪಡಿಸುವುದು, ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವುದು ಅಥವಾ ರೊಬೋಟಿಕ್ಸ್ ಆಧಾರಿತ ನವೋದ್ಯಮ ಆರಂಭಿಸುವ ಅವಕಾಶಗಳಿವೆ ಎಂದು ಪ್ರಧಾನಿ ಹೇಳಿದರು.
ಜಗತ್ತು ವೇಗವಾಗಿ ಬದಲಾಗುತ್ತಿದ್ದು, ಜಾಗತಿಕ ಅಗತ್ಯಗಳಿಗೆ ಅನುಗುಣವಾಗಿ ಶಿಕ್ಷಣ ಮತ್ತು ಕಲಿಕೆಯ ವಿಧಾನಗಳೂ ಬದಲಾಗುತ್ತಿವೆ. ಹಿಂದೆ ಪದವಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿತ್ತು. ಈಗ ಕೌಶಲ್ಯಕ್ಕೂ ಅಷ್ಟೇ ಮಹತ್ವ ಬಂದಿದೆ. ಯುವಕರ ಕೌಶಲ್ಯಗಳನ್ನು ನಿರಂತರವಾಗಿ ಉನ್ನತೀಕರಿಸುವ ಅಗತ್ಯವಿದ್ದು, ಇದೇ ಉದ್ದೇಶದಿಂದ ಸರ್ಕಾರ ಶಿಕ್ಷಣ ನೀತಿ, ಬೋಧನೆ ಮತ್ತು ತರಬೇತಿ ಸಂಸ್ಥೆಗಳಲ್ಲಿ ಬದಲಾವಣೆಗಳನ್ನು ಮಾಡುತ್ತಿದೆ ಎಂದರು.
ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ದುಡಿಮೆಯ ಹಣ ಉಳಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ದೇಶದ ಅತ್ಯುತ್ತಮ ಶಿಕ್ಷಕರಿಂದ ಉಚಿತ ಆನ್‌ಲೈನ್ ತರಬೇತಿ ಒದಗಿಸುವ ನಿಟ್ಟಿನಲ್ಲೂ ಸರ್ಕಾರ ಮುಂದುವರಿಯುತ್ತಿದೆ ಎಂದು ಮೋದಿ ತಿಳಿಸಿದರು.
2,800 ಕಿ.ಮೀ. ಸರಕು ಸಾಗಣೆ ರೈಲು ಮಾರ್ಗ ಪೂರ್ಣ
ವಿಕಸಿತ ಭಾರತಕ್ಕೆ ಸುಗಮ ಮತ್ತು ವೇಗದ ಸಂಪರ್ಕ ವ್ಯವಸ್ಥೆ ಅಗತ್ಯ ಎಂದು ಪ್ರಧಾನಿ ಹೇಳಿದರು. ವಡೋದರಾ ಗತಿಶಕ್ತಿ ವಿಶ್ವವಿದ್ಯಾಲಯದ ನಗರವಾಗಿದ್ದು, ಇಲ್ಲಿ ಸಮರ್ಪಿತ ಸರಕು ಸಾಗಣೆ ರೈಲು ಮಾರ್ಗದ ಅಂತಿಮ ಸಂಪರ್ಕವೂ ಪೂರ್ಣಗೊಂಡಿದೆ. ಇದರೊಂದಿಗೆ ದೇಶದಲ್ಲಿ 2,800 ಕಿಲೋಮೀಟರ್‌ಗೂ ಅಧಿಕ ಉದ್ದದ ಸಮರ್ಪಿತ ಸರಕು ಸಾಗಣೆ ರೈಲು ಮಾರ್ಗದ ಕಾಮಗಾರಿ ಪೂರ್ಣಗೊಂಡಿದೆ. ಇದು 21ನೇ ಶತಮಾನದ ಭಾರತದ ಐತಿಹಾಸಿಕ ಸಾಧನೆ ಎಂದರು.
2004ರಲ್ಲಿ ಸಮರ್ಪಿತ ಸರಕು ಸಾಗಣೆ ಮಾರ್ಗದ ಬಗ್ಗೆ ಚಿಂತನೆ ಆರಂಭವಾಗಿತ್ತು. 2006ರಲ್ಲಿ ವಿಶೇಷ ಸಂಸ್ಥೆ ರಚಿಸಲಾಗಿತ್ತು. ಆದರೆ 2014ರವರೆಗೆ ಕಡತಗಳು ಒಂದು ಕಚೇರಿಯಿಂದ ಮತ್ತೊಂದು ಕಚೇರಿಗೆ ಸುತ್ತಾಡುತ್ತಿದ್ದವು ಎಂದು ಹಿಂದಿನ ಸರ್ಕಾರದ ವಿರುದ್ಧ ಮೋದಿ ಟೀಕಿಸಿದರು. 2014ರ ನಂತರ ತಮ್ಮ ಸರ್ಕಾರ ಯೋಜನೆಗೆ ವೇಗ ನೀಡಿದ್ದು, ಇದೀಗ 2,800 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ ಎಂದರು.
ಪೂರ್ವ ಮತ್ತು ಪಶ್ಚಿಮ ಸಮರ್ಪಿತ ಸರಕು ಸಾಗಣೆ ಮಾರ್ಗಗಳು ದೇಶದ ವ್ಯಾಪಾರ-ವಹಿವಾಟಿನ ಪ್ರಮುಖ ಆಧಾರವಾಗುತ್ತಿವೆ. ಪ್ರತಿದಿನ 430ಕ್ಕೂ ಅಧಿಕ ಸರಕು ರೈಲುಗಳು ಸಂಚರಿಸುತ್ತಿವೆ. ಹಿಂದೆ ಸರಕು ರೈಲು 100 ಕಿ.ಮೀ. ಕ್ರಮಿಸಲು ಸುಮಾರು ಆರೂವರೆ ಗಂಟೆ ತೆಗೆದುಕೊಳ್ಳುತ್ತಿತ್ತು. ಈಗ ಅದೇ ದೂರವನ್ನು ಅರ್ಧಕ್ಕಿಂತ ಕಡಿಮೆ ಸಮಯದಲ್ಲಿ ಕ್ರಮಿಸುತ್ತಿದೆ ಎಂದು ಹೇಳಿದರು.
ಟ್ರಕ್ ಮೂಲಕ ಸರಕು ಸಾಗಿಸಲು ಸುಮಾರು 30 ಗಂಟೆ ಬೇಕಾಗುವ ದೂರವನ್ನು ಸರಕು ಸಾಗಣೆ ಮಾರ್ಗದ ಮೂಲಕ 10ರಿಂದ 12 ಗಂಟೆಗಳಲ್ಲಿ ಕ್ರಮಿಸಬಹುದಾಗಿದೆ. ಇದರಿಂದ ಇಂಧನ, ಸಮಯ ಮತ್ತು ಸಾಗಣೆ ವೆಚ್ಚ ಉಳಿತಾಯವಾಗುವುದರ ಜೊತೆಗೆ ಪರಿಸರಕ್ಕೂ ಪ್ರಯೋಜನವಾಗಿದೆ ಎಂದರು.
ಇತ್ತೀಚೆಗೆ ಮುಂಬೈನ ಜೆಎನ್‌ಪಿಟಿ ಬಂದರಿನಿಂದ ವಡೋದರಾಕ್ಕೆ ಸಂಚರಿಸಿದ ಎರಡು ಹಂತದ ಸರಕು ಸಾಗಣೆ ರೈಲಿನಲ್ಲಿ ಒಂದೇ ಬಾರಿ 250ಕ್ಕೂ ಅಧಿಕ ಟ್ರಕ್‌ಗಳಿಗೆ ಸಮಾನವಾದ ಸರಕು ಸಾಗಿಸಲಾಯಿತು ಎಂದು ಮೋದಿ ತಿಳಿಸಿದರು.
ರೈಲ್ವೆ ಆಧುನೀಕರಣದಿಂದ ಉದ್ಯೋಗ ಸೃಷ್ಟಿ
ಸರಕು ಸಾಗಣೆ ಮಾರ್ಗದ ಜೊತೆಗೆ ದಶಕಗಳಿಂದ ರೈಲು ಸಂಪರ್ಕವಿಲ್ಲದ ಬುಡಕಟ್ಟು ಪ್ರದೇಶಗಳಿಗೂ ರೈಲು ಸಂಪರ್ಕ ಕಲ್ಪಿಸಲಾಗುತ್ತಿದೆ. ಗುಜರಾತ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಇಂತಹ ಪ್ರದೇಶಗಳನ್ನು ರೈಲ್ವೆಗೆ ಸಂಪರ್ಕಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.
ಈ ವರ್ಷ ರೈಲ್ವೆ ಬಜೆಟ್ 2.75 ಲಕ್ಷ ಕೋಟಿ ರೂ.ಗಿಂತ ಹೆಚ್ಚಾಗಿದೆ. 12 ವರ್ಷಗಳ ಹಿಂದಿನ ಮೊತ್ತಕ್ಕೆ ಹೋಲಿಸಿದರೆ ಇದು ಹಲವು ಪಟ್ಟು ಹೆಚ್ಚಾಗಿದೆ. ರೈಲ್ವೆ ಆಧುನೀಕರಣಕ್ಕೆ ಮಾಡಲಾಗುತ್ತಿರುವ ವೆಚ್ಚದಿಂದ ಸಾವಿರಾರು ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿವೆ ಎಂದರು.
2014ರ ನಂತರ ಭಾರತದಲ್ಲಿ ಸುಮಾರು 50 ಸಾವಿರ ಆಧುನಿಕ ರೈಲು ಬೋಗಿಗಳನ್ನು ನಿರ್ಮಿಸಲಾಗಿದೆ ಎಂದು ಅವರು ತಿಳಿಸಿದರು.
‘ಚಿಪ್‌ನಿಂದ ಹಡಗಿನವರೆಗೆ’ ಉತ್ಪಾದನೆ
ಭಾರತ ಈಗ ‘ಚಿಪ್‌ನಿಂದ ಹಡಗಿನವರೆಗೆ’ ಉತ್ಪಾದನೆಯ ಹೊಸ ಅಧ್ಯಾಯ ಬರೆಯುತ್ತಿದೆ ಎಂದು ಮೋದಿ ಹೇಳಿದರು. ಅಂತಿಮ ಉತ್ಪನ್ನಗಳಷ್ಟೇ ಅಲ್ಲದೆ ಅವುಗಳ ಬಿಡಿಭಾಗಗಳು ಮತ್ತು ಸಂಪೂರ್ಣ ಪೂರೈಕೆ ಸರಪಳಿಯನ್ನು ಭಾರತದಲ್ಲೇ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ ಎಂದರು.
ದೇಶದಲ್ಲಿ ಸೌರ ವಿದ್ಯುತ್ ಫಲಕಗಳ ದೇಶೀಯ ಉತ್ಪಾದನೆ ಹೆಚ್ಚಿದ್ದು, 200 ಗಿಗಾವಾಟ್‌ಗಿಂತ ಹೆಚ್ಚಿನ ಸಾಮರ್ಥ್ಯ ಅಭಿವೃದ್ಧಿಯಾಗಿದೆ. ಇದೇ ಆತ್ಮನಿರ್ಭರತೆ ‘ಪ್ರಧಾನಮಂತ್ರಿ ಸೂರ್ಯ ಮನೆ: ಉಚಿತ ವಿದ್ಯುತ್ ಯೋಜನೆ’ಗೆ ದಾರಿ ಮಾಡಿಕೊಟ್ಟಿದೆ ಎಂದು ಹೇಳಿದರು.
ದೇಶದಲ್ಲಿ ಇದುವರೆಗೆ 55 ಲಕ್ಷ ಕುಟುಂಬಗಳು ತಮ್ಮ ಮನೆಗಳ ಮೇಲ್ಛಾವಣಿಯಲ್ಲಿ ಸೌರ ವಿದ್ಯುತ್ ಘಟಕಗಳನ್ನು ಅಳವಡಿಸಿಕೊಂಡಿದ್ದು, ಈ ಪೈಕಿ 11 ಲಕ್ಷ ಕುಟುಂಬಗಳು ಗುಜರಾತ್‌ನಲ್ಲಿವೆ. ಈ ಕುಟುಂಬಗಳು ವಿದ್ಯುತ್ ಉತ್ಪಾದಕರಾಗುವುದರಿಂದ ಉತ್ಪಾದನೆ, ಅಳವಡಿಕೆ ಮತ್ತು ಸೇವಾ ಕ್ಷೇತ್ರಗಳಲ್ಲಿ ಯುವಕರಿಗೆ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ ಎಂದು ಪ್ರಧಾನಿ ತಿಳಿಸಿದರು.
ಕೃತಕ ಬುದ್ಧಿಮತ್ತೆಗೆ ಬಲಿಷ್ಠ ವಿದ್ಯುತ್ ವ್ಯವಸ್ಥೆ ಅಗತ್ಯ
ಸೌರ, ಪವನ, ಜಲವಿದ್ಯುತ್ ಮತ್ತು ಅಣುಶಕ್ತಿ ಸೇರಿದಂತೆ ಎಲ್ಲ ಇಂಧನ ಕ್ಷೇತ್ರಗಳಲ್ಲೂ ಸರ್ಕಾರ ವೇಗವಾಗಿ ಕೆಲಸ ಮಾಡುತ್ತಿದೆ. ಭವಿಷ್ಯದ ಆಧುನಿಕ ಕ್ಷೇತ್ರಗಳು ವಿದ್ಯುತ್ ವ್ಯವಸ್ಥೆಯ ಮೇಲೆ ಅವಲಂಬಿತವಾಗಿರಲಿವೆ. ಚಿಪ್ ಉದ್ಯಮ, ದತ್ತಾಂಶ ಕೇಂದ್ರಗಳು ಮತ್ತು ಕೃತಕ ಬುದ್ಧಿಮತ್ತೆಯಂತಹ ಕ್ಷೇತ್ರಗಳಿಗೆ ವಿದ್ಯುತ್ ಜೀವನಾಡಿಯಾಗಿದೆ ಎಂದರು.
ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಜಾಗತಿಕ ಮಹಾಶಕ್ತಿಯಾಗಲು ಭಾರತವು ಬಲಿಷ್ಠ ಪರಿಸರ ವ್ಯವಸ್ಥೆಯನ್ನು ನಿರ್ಮಿಸಬೇಕು. ಯುರೇನಿಯಂ ಹಾಗೂ ಪ್ರಮುಖ ಮತ್ತು ಅಪರೂಪದ ಖನಿಜಗಳ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ವಿವಿಧ ದೇಶಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಮೋದಿ ಹೇಳಿದರು.
ವಿರೋಧ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸುಳ್ಳಿನ ಪ್ರತಿಧ್ವನಿಯಿಂದ ಜನರನ್ನು ಗೊಂದಲಕ್ಕೀಡುಮಾಡುವವರು ಎಲ್ಲೆಡೆ ಸಿಗುತ್ತಾರೆ. ಆದರೆ ಭಾರತದ ಯುವಕರು ಸತ್ಯದ ಧೈರ್ಯದೊಂದಿಗೆ ಮುನ್ನಡೆಯುತ್ತಿದ್ದಾರೆ ಎಂದರು.
ವಡೋದರಾ ಶಿಕ್ಷಣ, ಕೌಶಲ್ಯ ಮತ್ತು ಕೈಗಾರಿಕೆಗಳ ನಡುವಿನ ದೀರ್ಘಕಾಲದ ಸಹಭಾಗಿತ್ವಕ್ಕೆ ಹೆಸರುವಾಸಿಯಾಗಿದೆ. 150 ವರ್ಷಗಳಿಂದ ಈ ನಗರ ಈ ಸಹಭಾಗಿತ್ವದ ಪ್ರತಿಬಿಂಬವಾಗಿದೆ. ಇದೀಗ ವಡೋದರಾ ಭಾರತದ ಮೊದಲ ಸ್ವದೇಶಿ ನಿರ್ಮಿತ ಸಿ-295 ಸೇನಾ ಸಾರಿಗೆ ವಿಮಾನದ ನಿರ್ಮಾಣಕ್ಕೂ ಹೆಸರುವಾಸಿಯಾಗುತ್ತಿದೆ. ಅದರ ಮೊದಲ ಹಾರಾಟ ವಡೋದರಾ ಆಕಾಶದಲ್ಲಿ ನಡೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.