ನಾಗಮಂಗಲದಲ್ಲಿ ಆನ್ಲೈನ್ ಹೂಡಿಕೆ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ
ಎಫ್ಬಿಟಿ ಕಂಪನಿಯಿಂದ ಸಾವಿರಾರು ಜನರಿಗೆ ಮೋಸ
ನಾಗಮಂಗಲದಲ್ಲಿ ಆನ್ಲೈನ್ ಹೂಡಿಕೆ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ


ನಾಗಮಂಗಲ,05ಸೆಪ್ಟೆಂಬರ್(ಹಿ.ಸ.)

ಆ್ಯಂಕರ್

ಜಿಲ್ಲಾ ಉಸ್ತುವಾರಿ ಸಚಿವರ ಸ್ವಗ್ರಾಮವಿರುವ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಆನ್ಲೈನ್ ಹೂಡಿಕೆಯ ಆಮಿಷವೊಡ್ಡಿ ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಜಾಲವೊಂದು ಬೆಳಕಿಗೆ ಬಂದಿದೆ.

ಎಫ್ಬಿಟಿ ಎಂಬ ಖಾಸಗಿ ಆನ್ಲೈನ್ ಕಂಪನಿಯು ಹೆಚ್ಚು ಹಣದಾಸೆ ತೋರಿಸಿ ತಾಲೂಕಿನ ಗ್ರಾಮೀಣ ಜನರಿಂದ ಬರೋಬ್ಬರಿ 5 ರಿಂದ 10 ಕೋಟಿ ರೂಪಾಯಿಗೂ ಹೆಚ್ಚು ಹಣ ಸಂಗ್ರಹಿಸಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಆಮಿಷಕ್ಕೆ ಬಿದ್ದ ಅಮಾಯಕರುಕಂಪನಿಯು ಸಾಮಾಜಿಕ ಜಾಲತಾಣಗಳು ಹಾಗೂ ಆನ್ಲೈನ್ ಮೂಲಕ ಸಾರ್ವಜನಿಕರಿಗೆ ಭಾರೀ ಲಾಭದ ಆಮಿಷವೊಡ್ಡಿತ್ತು.16,000 ರೂ. ಹೂಡಿಕೆ ಮಾಡಿದರೆ ಪ್ರತಿದಿನದಂತೆ 100 ದಿನಗಳ ಕಾಲ 600 ರೂ. ನೀಡುವುದಾಗಿ ಭರವಸೆ ನೀಡಲಾಗಿತ್ತು.50,000 ರೂ. ಹೂಡಿಕೆಗೆ ಪ್ರತಿದಿನ 1,000 ರೂ. ಹಾಗೂ 1 ಲಕ್ಷ ರೂ. ಹೂಡಿಕೆ ಮಾಡಿದರೆ ಪ್ರತಿದಿನ 1,800 ರೂ. ನೀಡುವುದಾಗಿ ನಂಬಿಸಲಾಗಿತ್ತು.

ಆರಂಭದ ದಿನಗಳಲ್ಲಿ ಕೆಲವರಿಗೆ ಹಣ, ಬೈಕ್ ಹಾಗೂ ಇತರೆ ಉಡುಗೊರೆಗಳನ್ನು ನೀಡಿ ಜನರನ್ನು ನಂಬಿಸುವಲ್ಲಿ ವಂಚಕರು ಯಶಸ್ವಿಯಾಗಿದ್ದರು. ಇದನ್ನು ನಂಬಿ ತಾಲೂಕಿನ ಸುಮಾರು 1,000ಕ್ಕೂ ಅಧಿಕ ಜನರು ಹಣ ಹೂಡಿಕೆ ಮಾಡಿದ್ದರು. ಮೋಸ ಹೋದವರಲ್ಲಿ ಬಹುತೇಕರು ವಿದ್ಯಾವಂತ ಸ್ತ್ರೀಯರು, ಉದ್ಯೋಗಸ್ಥರು ಹಾಗೂ ವಿದ್ಯಾರ್ಥಿಗಳೇ ಆಗಿದ್ದಾರೆ. ವಿಶೇಷವಾಗಿ, ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರ ಸ್ವಗ್ರಾಮ ಇಜ್ಜಲಘಟ್ಟದಲ್ಲೇ ಹೆಚ್ಚಿನ ಸಂಖ್ಯೆಯ ಜನರು ಈ ಜಾಲಕ್ಕೆ ಬಲಿಪಶುವಾಗಿದ್ದಾರೆ.

ಪೊಲೀಸ್ ಠಾಣೆಗೆ ದೂರು:

ತಮ್ಮ ಹಣ ಕಳೆದುಕೊಂಡಿರುವುದು ಮತ್ತು ಕಂಪನಿ ಮಾಲೀಕರು ನಾಪತ್ತೆಯಾಗಿರುವುದು ಅರಿವಿಗೆ ಬರುತ್ತಿದ್ದಂತೆ ಕಂಗಾಲಾದ ಹೂಡಿಕೆದಾರರು ನಾಗಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಾರ್ವಜನಿಕರ ದೂರುಗಳನ್ನು ಸ್ವೀಕರಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಆನ್ಲೈನ್ ಹೂಡಿಕೆಯ ಹೆಸರಿನಲ್ಲಿ ನಡೆದಿರುವ ಈ ಬೃಹತ್ ಜಾಲದ ಹಿಂದೆ ಯಾರಿದ್ದಾರೆ ಮತ್ತು ಎಷ್ಟು ಹಣ ಸಂಗ್ರಹವಾಗಿದೆ ಎಂಬುದರ ಕುರಿತು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande