ತಮಿಳುನಾಡಿಗೆ ನಿರಂತರ ನೀರು ಬಿಡುಗಡೆಗೆ ರೈತರ ಆಕ್ರೋಶ
ರೈತರ ಆಕ್ರೋಶ; ಉಗ್ರ ಹೋರಾಟದ ಎಚ್ಚರಿಕೆ
mandya-farmers-protest-cauvery-water-release-tamil-nadu


ಮಂಡ್ಯ, 04 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ಕಾವೇರಿ ಜಲಾಶಯದಿಂದ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ಧ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ನಗರದ ಪ್ರವಾಸಿ ಮಂದಿರದಲ್ಲಿ ನಡೆದ ತುರ್ತು ಸಭೆಯಲ್ಲಿ ರೈತ ಮುಖಂಡರು ಸರ್ಕಾರದ ನೀತಿಯನ್ನು ಕಟುವಾಗಿ ಟೀಕಿಸಿದ್ದು, ಕೂಡಲೇ ನೀರು ಹರಿಸುವುದನ್ನು ನಿಲ್ಲಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಮುಖಂಡರು, ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ಈಗಾಗಲೇ ತೀವ್ರ ನೀರಿನ ಕೊರತೆ ಉಂಟಾಗಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಮಂಡ್ಯ ಜಿಲ್ಲೆಯ ರೈತರ ಹಿತಾಸತಿಯನ್ನು ಬಲಿಗೈದು ತಮಿಳುನಾಡಿಗೆ ಪ್ರತಿದಿನ 9 ಸಾವಿರ ಕ್ಯೂಸೆಕ್ ನೀರು ಬಿಡುತ್ತಿರುವುದು ರೈತರಿಗೆ ಎಸಗುತ್ತಿರುವದ್ರೋಹ ಎಂದು ಕಿಡಿಕಾರಿದರು. ರಾಜ್ಯ ಸರ್ಕಾರದ ಈ ಧೋರಣೆ ಹೇಡಿತನದಿಂದ ಕೂಡಿದೆ ಎಂದು ತರಾಟೆಗೆ ತೆಗೆದುಕೊಂಡರು.

ಸಭೆಯ ಪ್ರಮುಖ ಬೇಡಿಕೆಗಳು:ಸಭೆ ಕರೆಯಲು ಆಗ್ರಹ: ತಕ್ಷಣವೇ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೃಷಿ ಸಚಿವರ ಸಮ್ಮುಖದಲ್ಲಿ ಜಿಲ್ಲಾಧಿಕಾರಿಗಳು ರೈತರೊಂದಿಗೆ ಸಭೆ ನಡೆಸಿ ಸತ್ಯ ಪರಿಸ್ಥಿತಿಯನ್ನು ವಿವರಿಸಬೇಕು.ಬೆಳೆ ನಷ್ಟ ಪರಿಹಾರ: ಕಾಲಮಿತಿಯಲ್ಲಿ ನೀರು ಸಿಗದೆ ಒಣಗಿಹೋಗುತ್ತಿರುವ ಬೆಳೆಗಳಿಗೆ ಸೂಕ್ತವಾದ ನಷ್ಟ ಪರಿಹಾರವನ್ನು ಸರ್ಕಾರ ಕೂಡಲೇ ಘೋಷಿಸಬೇಕು.

ಬ್ಯಾಂಕ್ ಸಾಲ ಮನ್ನಾ: ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರು ಮಾಡಿರುವ ಎಲ್ಲ ರೀತಿಯ ಕೃಷಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು.ಬರ ಪರಿಹಾರ: ಬರಗಾಲದ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿ, ನೀರಾವರಿ ಪ್ರದೇಶದ ಬೆಳೆಗಳನ್ನು ರಕ್ಷಿಸಲು ತುರ್ತು ಕ್ರಮ ಕೈಗೊಳ್ಳಬೇಕು.

ಸಭೆಯ ಅಧ್ಯಕ್ಷತೆಯನ್ನು ಜಿ.ಬಿ. ಶಿವಕುಮಾರ್ ವಹಿಸಿದ್ದರು. ಸಭೆಯಲ್ಲಿ ಪ್ರಮುಖ ರೈತ ನಾಯಕಿ ಸುನಂದಾ ಜಯರಾಮ್, ಕೆ. ಬೋರಯ್ಯ, ಮುದ್ದೇಗೌಡ, ಡಾ. ಎಸ್. ನಾರಾಯಣ್ ಸೇರಿದಂತೆ ಹಲವು ಮುಖಂಡರು ಮತ್ತು ನೂರಾರು ರೈತರು ಉಪಸ್ಥಿತರಿದ್ದರು. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಕಾವೇರಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande