
ಬೆಂಗಳೂರು, 30 ಸೆಪ್ಟೆಂಬರ್ (ಹಿ.ಸ.):
ಉಪ್ಪು ಮತ್ತು ಸಕ್ಕರೆಯ ಮಿತಿಮೀರಿದ ಬಳಕೆಯ ನಿಯಂತ್ರಣದ ಬಳಿಕ ಇದೀಗ ಪದೇಪದೇ ಬಿಸಿ ಮಾಡಿ ಬಳಸುವ ಅಡುಗೆ ಎಣ್ಣೆಗೂ ಕಡಿವಾಣ ಹಾಕಲು ರಾಜ್ಯ ಆರೋಗ್ಯ ಇಲಾಖೆ ಹಾಗೂ ಆಹಾರ ಸುರಕ್ಷತಾ ಇಲಾಖೆ ಮುಂದಾಗಿವೆ. ಮರುಬಳಕೆಯ ಅಡುಗೆ ಎಣ್ಣೆಯಿಂದ ಉಂಟಾಗಬಹುದಾದ ಆರೋಗ್ಯ ಸಮಸ್ಯೆಗಳನ್ನು ತಡೆಯುವ ಉದ್ದೇಶದಿಂದ ಹೊಸ ಮಾರ್ಗಸೂಚಿ ರೂಪಿಸಲಾಗುತ್ತಿದೆ.
ಅಡುಗೆ ಎಣ್ಣೆಯನ್ನು ಮೂರಕ್ಕಿಂತ ಹೆಚ್ಚು ಬಾರಿ ಬಿಸಿ ಮಾಡಿ ಬಳಸಬಾರದು ಎಂದು ಪ್ರಸ್ತಾವಿತ ಮಾರ್ಗಸೂಚಿಯಲ್ಲಿ ಸೂಚಿಸುವ ಸಾಧ್ಯತೆಯಿದೆ. ಪದೇಪದೇ ಎಣ್ಣೆಯನ್ನು ಬಿಸಿ ಮಾಡುವುದರಿಂದ ‘ಟೋಟಲ್ ಪೋಲಾರ್ ಕಾಂಪೌಂಡ್ಸ್’ ಪ್ರಮಾಣ ಹೆಚ್ಚಾಗುತ್ತದೆ.
TPC ಪ್ರಮಾಣ ಶೇ.25ಕ್ಕಿಂತ ಹೆಚ್ಚಾದ ಎಣ್ಣೆಯನ್ನು ಆಹಾರ ತಯಾರಿಕೆಗೆ ಬಳಸುವುದು ಅಪಾಯಕಾರಿ ಎಂದು ಆಹಾರ ಸುರಕ್ಷತಾ ಇಲಾಖೆ ತಿಳಿಸಿದೆ.
ಹೋಟೆಲ್, ರೆಸ್ಟೋರೆಂಟ್, ಬೇಕರಿ ಸೇರಿದಂತೆ ಆಹಾರ ತಯಾರಿಕಾ ಘಟಕಗಳಲ್ಲಿ ಎಣ್ಣೆಯನ್ನು ಎಷ್ಟು ಬಾರಿ ಬಳಸಲಾಗಿದೆ ಹಾಗೂ ನಂತರ ಹೇಗೆ ವಿಲೇವಾರಿ ಮಾಡಲಾಗಿದೆ ಎಂಬುದರ ದಾಖಲೆ ನಿರ್ವಹಣೆಗೆ ಒತ್ತು ನೀಡಲಾಗುತ್ತಿದೆ. ಆಹಾರ ಸುರಕ್ಷತಾ ಅಧಿಕಾರಿಗಳಿಂದ ಈ ಕುರಿತು ತಪಾಸಣೆ ನಡೆಸುವ ವ್ಯವಸ್ಥೆಯನ್ನೂ ರೂಪಿಸಲಾಗುತ್ತಿದೆ.
ಎಣ್ಣೆಯಲ್ಲಿ ನೀಲಿ-ಬೂದು ಬಣ್ಣದ ಹೊಗೆ ಅಥವಾ ನೊರೆ ಕಾಣಿಸಿಕೊಂಡರೆ, ಎಣ್ಣೆ ಕಪ್ಪಾಗಿದ್ದರೆ ಅಥವಾ ಅದರ ಗಾಢತೆ ಬದಲಾಗಿದ್ದರೆ ಅದನ್ನು ಬಳಸಬಾರದು ಎಂದು ಇಲಾಖೆ ಸೂಚಿಸಿದೆ. ಒಮ್ಮೆ ಬಳಸಿದ ಎಣ್ಣೆಯನ್ನು ದೀರ್ಘಕಾಲ ಸಂಗ್ರಹಿಸದೆ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ತಿಳಿಸಲಾಗಿದೆ.
ಬಳಸಿದ ಅಡುಗೆ ಎಣ್ಣೆಯನ್ನು ಚರಂಡಿ ಅಥವಾ ಡ್ರೈನೇಜ್ಗೆ ಸುರಿಯುವುದನ್ನು ತಡೆಯುವ ಉದ್ದೇಶದಿಂದ ‘RUCO’ (Repurpose Used Cooking Oil) ಯೋಜನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ಹೋಟೆಲ್, ರೆಸ್ಟೋರೆಂಟ್ಗಳು ಹಾಗೂ ಆಹಾರ ತಯಾರಕರು ಬಳಸಿದ ಎಣ್ಣೆಯನ್ನು ಅಧಿಕೃತ RUCO ಸಂಗ್ರಹಣಾ ಸಂಸ್ಥೆಗಳಿಗೆ ನೀಡುವ ವ್ಯವಸ್ಥೆ ಜಾರಿಗೆ ತರಲು ಇಲಾಖೆ ಮುಂದಾಗಿದೆ.
ಮನೆಗಳಲ್ಲಿ ಉಳಿಯುವ ಬಳಸಿದ ಎಣ್ಣೆಯನ್ನು ಸಹ ವಾರ್ಡ್ ಮಟ್ಟದಲ್ಲಿ ಸಂಗ್ರಹಿಸಿ ಬಯೋಡೀಸೆಲ್ ಅಥವಾ ಬಯೋಫ್ಯುಯೆಲ್ ಉತ್ಪಾದನಾ ಸಂಸ್ಥೆಗಳಿಗೆ ಪೂರೈಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ.
ರಾಜ್ಯದಲ್ಲಿ ಈಗಾಗಲೇ 2024–25 ಮತ್ತು 2025–26ನೇ ಸಾಲಿನಲ್ಲಿ 32.68 ಲಕ್ಷ ಲೀಟರ್ ಬಳಸಿದ ಅಡುಗೆ ಎಣ್ಣೆಯನ್ನು ಸಂಗ್ರಹಿಸಿ ಪುನರ್ಬಳಕೆಗೆ ನೀಡಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಈ ಕುರಿತು ಆರೋಗ್ಯ ಸಚಿವ ಯು.ಟಿ. ಖಾದರ್ ಮಾಧ್ಯಮಗಳಿಗೆ ಮಾತನಾಡಿ, “ಸಂಸ್ಕರಿಸಿದ (ರಿಫೈಂಡ್) ಅಡುಗೆ ಎಣ್ಣೆಯನ್ನು ಎರಡನೇ ಬಾರಿಗೆ ಮರುಬಳಕೆ ಮಾಡುವುದರಿಂದ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮಗಳು ಉಂಟಾಗುತ್ತವೆ” ಎಂದು ತಿಳಿಸಿದ್ದಾರೆ.
ಎಣ್ಣೆಯ ಮರುಬಳಕೆಯಿಂದ ಉಂಟಾಗುವ ಅಪಾಯಗಳ ಕುರಿತು ಜಾಗೃತಿ ಮೂಡಿಸಲು ಸಾವಿರಕ್ಕೂ ಹೆಚ್ಚು ಅಂಗಡಿಕಾರರಿಗೆ ತರಬೇತಿ ನೀಡಲಾಗುವುದು.
ಬಳಸಿದ ಎಣ್ಣೆಯನ್ನು ಹಿಂಪಡೆದು ರಿಯಾಯಿತಿ ದರದಲ್ಲಿ ಹೊಸ ಎಣ್ಣೆ ನೀಡುವ ಹಾಗೂ ಸಂಗ್ರಹಿಸಿದ ಎಣ್ಣೆಯನ್ನು ಬಯೋಡೀಸೆಲ್ ಕಂಪನಿಗಳಿಗೆ ಪೂರೈಸುವ ‘ಕಲೆಕ್ಟಿಂಗ್ ಪಾಯಿಂಟ್’ ವ್ಯವಸ್ಥೆ ಜಾರಿಗೆ ತರಲು ಸಭೆ ಕರೆಯಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಸಾರ್ವಜನಿಕ ಆರೋಗ್ಯದ ಜತೆಗೆ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಬಳಸಿದ ಅಡುಗೆ ಎಣ್ಣೆಯ ಸೂಕ್ತ ಸಂಗ್ರಹಣೆ ಮತ್ತು ವಿಲೇವಾರಿಗೆ ಹೆಚ್ಚಿನ ಆದ್ಯತೆ ನೀಡಲು ಇಲಾಖೆ ನಿರ್ಧರಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R