
ಮಂಗಳೂರು, 30 ಸೆಪ್ಟೆಂಬರ್ (ಹಿ.ಸ.):
ಜೋಕಟ್ಟೆ ಬಳಿಯ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್)ನ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ ಪರೀಕ್ಷೆ ನಡೆಸುತ್ತಿದ್ದ ವೇಳೆ ಬುಧವಾರ ಮಧ್ಯಾಹ್ನ ಭಾರೀ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಓರ್ವ ಕಾರ್ಮಿಕ ಸಾವನಪ್ಪಿದ್ದು, 9 ಕಾರ್ಮಿಕರು ಗಾಯಗೊಂಡಿದ್ದಾರೆ. ಸದ್ಯ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಮಂಗಳೂರು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದ್ದಾರೆ.
ಮಧ್ಯಾಹ್ನ 12.15ರ ಸುಮಾರಿಗೆ ಎಂಆರ್‌ಪಿಎಲ್‌ನ ಕೋಕರ್ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ ಪರೀಕ್ಷೆ ನಡೆಸುತ್ತಿದ್ದ ಸಂದರ್ಭದಲ್ಲಿ ಸ್ಫೋಟ ಸಂಭವಿಸಿದೆ. ಬೆಳಗ್ಗೆ 11.30ಕ್ಕೆ ಪಾಳಿಯ ಬದಲಾವಣೆ ಹಿನ್ನೆಲೆಯಲ್ಲಿ ಹಲವು ಕಾರ್ಮಿಕರು ಘಟಕದಿಂದ ಹೊರಗೆ ತೆರಳಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಘಟಕದಲ್ಲಿ ಒಂದೇ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಇದ್ದಿದ್ದರೆ ಭಾರೀ ಸಾವು-ನೋವು ಸಂಭವಿಸುವ ಸಾಧ್ಯತೆ ಇತ್ತು ಎನ್ನಲಾಗಿದೆ.
ಘಟನೆಯಲ್ಲಿ ಮನೀಶ ಎಂಬ ಕಾರ್ಮಿಕ ಮೃತ ಪಟ್ಟಿದ್ದು, 9 ಕಾರ್ಮಿಕರಿಗೆ ಗಾಯಗೊಂಡಿದ್ದಾರೆ, ಸುರತ್ಕಲ್ ನಿವಾಸಿ ರಾಜೇಶ್ ಅವರಿಗೆ ಶೇ.35ರಷ್ಟು ಸುಟ್ಟ ಗಾಯಗಳಾಗಿದ್ದು, ಶ್ರೀನಿವಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಪ್ರಸಾದ್, ಇಂದ್ರಜೀತ್ ಮತ್ತು ರಾಮನ್ ಅವರನ್ನು ಎಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೆರೋಮ್, ಜಯರಾಮ್, ಅವಿನಾಶ್ ಮತ್ತು ಅಕ್ಷಯ್ ಅವರನ್ನು ಎಂಆರ್‌ಪಿಎಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಐದು ಅಗ್ನಿಶಾಮಕ ವಾಹನಗಳು, ರಾಜ್ಯ ವಿಪತ್ತು ನಿರ್ವಹಣಾ ಪಡೆ ಹಾಗೂ ಆಂಬ್ಯುಲೆನ್ಸ್‌ಗಳು ಧಾವಿಸಿವೆ. ಪೊಲೀಸ್ ಆಯುಕ್ತ ಸುದೀರ್ ಕುಮಾರ್ ರೆಡ್ಡಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಡೆ ವಿನಾಯಕ್ ಕಾರ್ಬಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಭಾರೀ ಸ್ಫೋಟದ ಪರಿಣಾಮ ಪಣಂಬೂರು, ಕಾವೂರು, ಸುರತ್ಕಲ್ ಹಾಗೂ ಜೋಕಟ್ಟೆ ಸುತ್ತಮುತ್ತಲಿನ ಪ್ರದೇಶಗಳ ಕೆಲ ಮನೆಗಳು ಕಂಪಿಸಿದ ಅನುಭವವಾಗಿದೆ. ಸ್ಫೋಟದ ತೀವ್ರತೆ ಸಿಸಿಟಿವಿ ದೃಶ್ಯಗಳಲ್ಲೂ ಸೆರೆಯಾಗಿದೆ. ಭಾರೀ ಸ್ಫೋಟದ ಶಬ್ಧಕ್ಕೆ ಸುತ್ತಮುತ್ತಲಿನ ಗ್ರಾಮಗಳ ಜನರು ಆತಂಕಗೊಂಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.