
ನವದೆಹಲಿ, 29 ಸೆಪ್ಟೆಂಬರ್ (ಹಿ.ಸ.):
ಏಷ್ಯನ್ ಗೇಮ್ಸ್ 2026ರಲ್ಲಿ ಪದಕ ಗೆದ್ದ ಭಾರತೀಯ ಕ್ರೀಡಾಪಟುಗಳಾದ ನೀರೂ ಧಂಡಾ, ಆಶಿಮಾ ಅಹ್ಲಾವತ್, ಮನೀಷಾ ಕೀರ್ ಹಾಗೂ ಪುರುಷರ ಉದ್ದ ಜಿಗಿತದಲ್ಲಿ ಬೆಳ್ಳಿ ಪದಕ ಗೆದ್ದ ಮುರಳಿ ಶ್ರೀಶಂಕರ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಸಾಮಾಜಿಕ ಜಾಲತಾಣ ಎಕ್ಸ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಮಹಿಳೆಯರ ಟ್ರ್ಯಾಪ್ ತಂಡ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ನೀರೂ ಧಂಡಾ, ಆಶಿಮಾ ಅಹ್ಲಾವತ್ ಮತ್ತು ಮನೀಷಾ ಕೀರ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಶುಭಾಶಯ ಕೋರಿದ್ದಾರೆ. ತಮ್ಮ ನಿಖರತೆ ಮತ್ತು ಏಕಾಗ್ರತೆಯಿಂದ ಈ ಸಾಧನೆ ಸಾಧ್ಯವಾಗಿದ್ದು, ಭವಿಷ್ಯದಲ್ಲಿಯೂ ಇದೇ ರೀತಿಯ ಹಲವು ಸ್ಮರಣೀಯ ಸಾಧನೆಗಳನ್ನು ಮಾಡಲಿ ಎಂದು ಅವರು ಆಶಿಸಿದ್ದಾರೆ.
ಪುರುಷರ ಉದ್ದ ಜಿಗಿತ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಮುರಳಿ ಶ್ರೀಶಂಕರ್ ಅವರ ಸಾಧನೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದನೆ ಸಲ್ಲಿಸಿದ್ದಾರೆ. ಇದು ಭಾರತಕ್ಕೆ ಹೆಮ್ಮೆಯ ಕ್ಷಣವಾಗಿದ್ದು, ಶ್ರೀಶಂಕರ್ ಇನ್ನಷ್ಟು ಎತ್ತರದ ಸಾಧನೆಗಳನ್ನು ಮಾಡಬೇಕು, ಹೊಸ ದಾಖಲೆಗಳನ್ನು ನಿರ್ಮಿಸಬೇಕು ಹಾಗೂ ತಮ್ಮ ಅತ್ಯುತ್ತಮ ಪ್ರದರ್ಶನದ ಮೂಲಕ ಯುವಕರಿಗೆ ಸ್ಫೂರ್ತಿ ನೀಡಬೇಕು ಎಂದು ಅವರು ಶುಭ ಹಾರೈಸಿದ್ದಾರೆ.
ಮಂಗಳವಾರ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಮಹಿಳಾ ಟ್ರ್ಯಾಪ್ ಶೂಟಿಂಗ್ ತಂಡ ಬೆಳ್ಳಿ ಪದಕ ಗೆದ್ದಿದೆ. ಇದೇ ವೇಳೆ ನೀರೂ ಧಂಡಾ ವೈಯಕ್ತಿಕ ಸ್ಪರ್ಧೆಯ ಫೈನಲ್‌ಗೆ ಅರ್ಹತೆ ಪಡೆಯುವ ಮೂಲಕ ಭಾರತಕ್ಕೆ ಮತ್ತೊಂದು ಪದಕದ ನಿರೀಕ್ಷೆ ಮೂಡಿಸಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.