
ವಿಜಯಪುರ, 29 ಸೆಪ್ಟೆಂಬರ್ (ಹಿ.ಸ.)
ವಿಜಯಪುರ ಜಿಲ್ಲೆಯ ಸಿಂದಗಿ ನಗರದ
ರೈತ ಸಂಪರ್ಕ ಕೇಂದ್ರದಲ್ಲಿ ಎಫ್ಐಡಿ ( ಮಾಡಿಸಿಕೊಳ್ಳಲು ಆಗಮಿಸಿದ್ದ ರೈತರು ತೀವ್ರ ಅವ್ಯವಸ್ಥೆಯಿಂದ ಪರದಾಡಿದ ಘಟನೆ ನಡೆದಿದೆ. ಬೆಳಗ್ಗೆಯೇ ಕೇಂದ್ರಕ್ಕೆ ಆಗಮಿಸಿದ್ದರೂ ಸರ್ವರ್ ಸಮಸ್ಯೆ ನೆಪದಲ್ಲಿ ಕೆಲಸ ವಿಳಂಬವಾಗುತ್ತಿದೆ ಎಂದು ಆರೋಪಿಸಿರುವ ರೈತರು, ಬಿಸಿಲಿನಲ್ಲಿ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರೈತ ಸಂಪರ್ಕ ಕೇಂದ್ರಕ್ಕೆ ವಿವಿಧ ಗ್ರಾಮಗಳಿಂದ ರೈತರು ಬೆಳಗಿನ ಜಾವವೇ ಆಗಮಿಸಿ ಎಫ್ಐಡಿ ಮಾಡಿಸಿಕೊಳ್ಳಲು ಸರದಿ ಸಾಲಿನಲ್ಲಿ ನಿಂತಿದ್ದರು. ಕೆಲ ರೈತರು ಬೆಳಿಗ್ಗೆ 6 ಗಂಟೆಗೆ ಕೇಂದ್ರಕ್ಕೆ ಬಂದಿದ್ದರೂ, ಇನ್ನೂ ಸರ್ವರ್ ಬಂದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು. ಕೃಷಿ ಸಂಬಂಧಿತ ಸೌಲಭ್ಯಗಳು ಹಾಗೂ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ಎಫ್ಐಡಿ ಅಗತ್ಯವಾಗಿರುವ ಹಿನ್ನೆಲೆಯಲ್ಲಿ ರೈತರು ಅನಿವಾರ್ಯವಾಗಿ ಕೇಂದ್ರದ ಮುಂದೆ ಕಾದು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆದರೆ, ರೈತರು ಸರದಿ ಸಾಲಿನಲ್ಲಿ ನಿಲ್ಲಲು ಸೂಕ್ತ ನೆರಳಿನ ವ್ಯವಸ್ಥೆ ಮಾಡದಿರುವುದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಬಿಸಿಲಿನ ತಾಪಮಾನ ಹೆಚ್ಚಿರುವ ಸಂದರ್ಭದಲ್ಲಿ ವಯೋವೃದ್ಧ ರೈತರು ಸೇರಿದಂತೆ ಹಲವರು ಗಂಟೆಗಟ್ಟಲೆ ನಿಂತು ಸುಸ್ತಾಗಿದ್ದಾರೆ. ಕುಡಿಯುವ ನೀರು ಹಾಗೂ ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆಯೂ ಇಲ್ಲದಿರುವ ಬಗ್ಗೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಬೆಳಿಗ್ಗೆ 6 ಗಂಟೆಗೆ ಬಂದಿದ್ದೇವೆ. ಇಷ್ಟು ಹೊತ್ತಾದರೂ ಸರ್ವರ್ ಇಲ್ಲ ಎಂದು ಹೇಳುತ್ತಿದ್ದಾರೆ. ಬಿಸಿಲಿನಲ್ಲಿ ನಿಂತು ಕಾಯಬೇಕಾಗಿದೆ. ನೆರಳಿನಲ್ಲಿ ನಿಲ್ಲಲು ಹೋದರೂ ಅಧಿಕಾರಿಗಳು ಬಿಡುತ್ತಿಲ್ಲ” ಎಂದು ರೈತ ಶಿವಪ್ಪ ಡಂಬಳ ಬೇಸರ ವ್ಯಕ್ತಪಡಿಸಿದರು.
ರೈತ ಸಂಪರ್ಕ ಕೇಂದ್ರಕ್ಕೆ ರೈತರು ತಮ್ಮ ಕೆಲಸಗಳನ್ನು ಬದಿಗೊತ್ತಿ ದೂರದ ಗ್ರಾಮಗಳಿಂದ ಆಗಮಿಸುತ್ತಿದ್ದು, ದಿನವಿಡೀ ಕಾಯುವ ಪರಿಸ್ಥಿತಿ ಎದುರಾದರೆ ಅವರ ಕೃಷಿ ಚಟುವಟಿಕೆಗಳ ಮೇಲೂ ಪರಿಣಾಮ ಬೀರುತ್ತದೆ ಎಂದು ರೈತರು ತಿಳಿಸಿದ್ದಾರೆ. ತಾಂತ್ರಿಕ ಸಮಸ್ಯೆ ಉಂಟಾದರೆ ಅದನ್ನು ಶೀಘ್ರವಾಗಿ ಪರಿಹರಿಸುವುದರ ಜೊತೆಗೆ, ಸಮಸ್ಯೆ ಬಗೆಹರಿಯುವವರೆಗೆ ರೈತರಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ರೈತರು ಬಿಸಿಲಿನಲ್ಲಿ ನಿಂತಿರುವುದನ್ನು ಗಮನಿಸಿ, ಸರದಿ ವ್ಯವಸ್ಥೆಯನ್ನು ಸುಗಮಗೊಳಿಸುವುದು, ನೆರಳಿನ ವ್ಯವಸ್ಥೆ ಮಾಡುವುದು ಹಾಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ರೈತರು ಹೇಳಿದ್ದಾರೆ. ರೈತರಿಗೆ ತೊಂದರೆಯಾಗದಂತೆ ಎಫ್ಐಡಿ ನೋಂದಣಿ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಮತ್ತು ಸರ್ವರ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಘಟನೆಯಿಂದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ರೈತರಿಗೆ ಸೌಲಭ್ಯ ಕಲ್ಪಿಸಬೇಕಾದ ಕೇಂದ್ರದಲ್ಲೇ ರೈತರು ಬಿಸಿಲಿನಲ್ಲಿ ಪರದಾಡುವಂತಾಗಿರುವುದು ಏಕೆ? ಎಂಬ ಪ್ರಶ್ನೆ ಎದ್ದಿದೆ. ಸಂಬಂಧಿಸಿದ ಮೇಲಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿ, ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande