
ಬೆಂಗಳೂರು, 28 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:
ಗ್ಯಾರಂಟಿ ಯೋಜನೆಗಳ ಕುರಿತು ಪಕ್ಷದ ಸಚಿವರು ಹಾಗೂ ಶಾಸಕರಿಂದ ಬರುತ್ತಿರುವ ವಿಭಿನ್ನ ಅಭಿಪ್ರಾಯಗಳ ಬಗ್ಗೆ ಸದಾಶಿವ ನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಾ.ಜಿ.ಪರಮೇಶ್ವರ ಅವರು, ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಸಂದರ್ಭದಲ್ಲಿ ಅವುಗಳಿಗೆ ಹೆಚ್ಚಿನ ಹಣ ಅಗತ್ಯವಾಗುತ್ತದೆ ಎಂಬುದು ಸರ್ಕಾರಕ್ಕೆ ಮೊದಲಿನಿಂದಲೂ ತಿಳಿದಿತ್ತು ಎಂದು ಹೇಳಿದರು.
ಪ್ರಣಾಳಿಕೆ ಸಿದ್ಧಪಡಿಸುವಾಗಲೇ ಯೋಜನೆಗಳಿಗೆ ಎಷ್ಟು ಹಣ ಬೇಕಾಗಬಹುದು ಎಂಬುದರ ಕುರಿತು ಅಂದಾಜು ಮಾಡಲಾಗಿತ್ತು. ಆರಂಭದಲ್ಲಿ ಸುಮಾರು ₹40ರಿಂದ ₹45 ಸಾವಿರ ಕೋಟಿ ವೆಚ್ಚವಾಗಬಹುದು ಎಂಬ ಅಂದಾಜಿತ್ತು. ನಂತರ ವಾಸ್ತವಿಕ ವೆಚ್ಚ ಸುಮಾರು ₹50 ಸಾವಿರ ಕೋಟಿಗೂ ಹೆಚ್ಚಾಗಿದೆ. ಆದರೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ನಿರ್ಧಾರವನ್ನು ಪ್ರಜ್ಞಾಪೂರ್ವಕವಾಗಿಯೇ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಹಣಕಾಸಿನ ಮೇಲೆ ಒತ್ತಡ ಇರುವುದನ್ನು ಯಾರೂ ಮುಚ್ಚಿಡಲು ಸಾಧ್ಯವಿಲ್ಲ. ಆದರೆ, ಕಳೆದ ಮೂರು ವರ್ಷಗಳಿಂದ ಸರ್ಕಾರ ಈ ಹಣಕಾಸಿನ ಬದ್ಧತೆಯನ್ನು ನಿರ್ವಹಿಸಿಕೊಂಡು ಬಂದಿದೆ. ಮುಂದಿನ ಎರಡು ವರ್ಷಗಳಲ್ಲೂ ಅದನ್ನು ನಿರ್ವಹಿಸುವ ಸಾಮರ್ಥ್ಯ ಸರ್ಕಾರಕ್ಕಿದೆ ಎಂದು ಅವರು ಹೇಳಿದರು.
ಪಿಂಚಣಿ ವಿಚಾರವಾಗಿ ಮಾತನಾಡಿದ ಅವರು, ಈ ಹಿಂದೆ ₹32 ಸಾವಿರ ಇದ್ದ ಆದಾಯದ ಮೇಲಿನ ಮಿತಿಯನ್ನು ಈಗ ₹1.20 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಹಿಂದೆ ಪಿಂಚಣಿಯಿಂದ ಹೊರಗುಳಿದಿದ್ದ ಹಲವು ಅರ್ಹರು ಮತ್ತೆ ಯೋಜನೆಯ ವ್ಯಾಪ್ತಿಗೆ ಬರಲಿದ್ದಾರೆ ಎಂದು ತಿಳಿಸಿದರು.
ಹಿಂದೆ ಸುಮಾರು 23 ಲಕ್ಷ ಜನರ ಪಿಂಚಣಿ ರದ್ದಾಗಿತ್ತು. ಈಗ ಆದಾಯದ ಮಿತಿಯನ್ನು ಹೆಚ್ಚಿಸಿರುವುದರಿಂದ ಅರ್ಹ ಫಲಾನುಭವಿಗಳಿಗೆ ಮತ್ತೆ ಪಿಂಚಣಿ ದೊರೆಯಲಿದೆ. ಅದೇ ಸಂದರ್ಭದಲ್ಲಿ ಸೂಕ್ತ ಪ್ರಮಾಣಪತ್ರ ಸಲ್ಲಿಸದವರು ಹಾಗೂ ವಯೋಮಿತಿ ಪೂರೈಸದವರ ಅರ್ಜಿಗಳನ್ನು ಪರಿಶೀಲಿಸಿ ಅನರ್ಹರನ್ನು ಹೊರಗಿಡುವ ಮೂಲಕ ವ್ಯವಸ್ಥೆಯಲ್ಲಿ ಶುದ್ಧೀಕರಣ ಮಾಡಲಾಗುವುದು ಎಂದು ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.