ವಿಟಿಯು 26ನೇ ಘಟಿಕೋತ್ಸವ: 74,763 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಬೆಳಗಾವಿ, 26 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) 26ನೇ ಘಟಿಕೋತ್ಸವವು ಬೆಳಗಾವಿಯ ವಿಟಿಯು ಆವರಣದಲ್ಲಿ ಶನಿವಾರ ನಡೆಯಿತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹಾಗೂ ಸಚಿವ ಬಸವರಾಜ ರಾಯರೆಡ್ಡಿ ಸೇರಿದಂತೆ ಗ
vtU-26th-convocation-74763-students-degree-awarded-belagavi


ಬೆಳಗಾವಿ, 26 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) 26ನೇ ಘಟಿಕೋತ್ಸವವು ಬೆಳಗಾವಿಯ ವಿಟಿಯು ಆವರಣದಲ್ಲಿ ಶನಿವಾರ ನಡೆಯಿತು.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹಾಗೂ ಸಚಿವ ಬಸವರಾಜ ರಾಯರೆಡ್ಡಿ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಘಟಿಕೋತ್ಸವದಲ್ಲಿ ಒಟ್ಟು 74,763 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಇದರಲ್ಲಿ 329 ಪಿಎಚ್ಡಿ ವಿದ್ಯಾರ್ಥಿಗಳೂ ಸೇರಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರೊ. ಟಿ.ಜಿ. ಸೀತಾರಾಮ್, ಡಾ. ಎಂ.ಪಿ. ಶ್ಯಾಮ್ ಹಾಗೂ ಡಾ. ಸಭೀತಾ ರಾಮಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ಇದೇ ವೇಳೆ 94 ಚಿನ್ನದ ಪದಕಗಳನ್ನು 45 ವಿದ್ಯಾರ್ಥಿಗಳಿಗೆ ನೀಡಲಾಯಿತು. ಸುಮಾರು 300 ವಿದ್ಯಾರ್ಥಿಗಳಿಗೆ ರ್ಯಾಂಕ್ ಗೌರವ ನೀಡಲಾಯಿತು. ದಾವಣಗೆರೆಯ ಜೈನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿ ಎಚ್.ಎಂ. ವಿಶ್ವನಾಥ್ 12 ಚಿನ್ನದ ಪದಕಗಳನ್ನು ಪಡೆದು ಅಗ್ರಸ್ಥಾನಗಳಿಸಿದರು.

ನಿಪ್ಪಾಣಿಯ ವಿಎಸ್ಎಂ ಸೋಮಶೇಖರ್ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿನಿ ಸಾಕ್ಷಿ ಎಸ್. ಹಡಲಗೆ 8 ಚಿನ್ನದ ಪದಕ ಪಡೆದು ದ್ವಿತೀಯ ಸ್ಥಾನ ಪಡೆದರು.

ಚಿನ್ಮಯಿ ಕಶ್ಯಪ್ ಹಾಗೂ ಧನ್ಯಶ್ರೀ ತಲಾ 7 ಚಿನ್ನದ ಪದಕ ಪಡೆದು ಜಂಟಿ ತೃತೀಯ ಸ್ಥಾನ ಪಡೆದರು. ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿನಿ ಎ.ಸಿ. ಕವಿನಾ 6 ಚಿನ್ನದ ಪದಕ ಪಡೆದು ಐದನೇ ಸ್ಥಾನ ಪಡೆದರು.

ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪದವಿ ಪಡೆದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. “ಜೀವನದಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಗೆದ್ದಾಗ ಹಿಗ್ಗಬೇಡಿ, ಸೋತಾಗ ಕುಗ್ಗಬೇಡಿ” ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

“ವಿಟಿಯು ಇಡೀ ದೇಶದಲ್ಲಿ ಬಹಳ ಪ್ರಸಿದ್ಧಿ ಪಡೆದಿದೆ. ವಿಟಿಯು ವಿದ್ಯಾರ್ಥಿಗಳು ಭಾರತದ ಆರ್ಥಿಕತೆಗೆ ಶಕ್ತಿ ನೀಡುವ ವಿಶ್ವಾಸವಿದೆ. ಜೀವನದಲ್ಲಿ ಎಲ್ಲರಿಗೂ ಗೆಲುವು ಹಾಗೂ ಒಳಿತಾಗಲಿ,” ಎಂದು ರಾಜ್ಯಪಾಲರು ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande