
ಬೆಂಗಳೂರು, 21 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ದೇಶದ ರೇಷ್ಮೆ ಉತ್ಪಾದನೆಯನ್ನು 2030–31ರ ವೇಳೆಗೆ 60 ಸಾವಿರ ಮೆಟ್ರಿಕ್ ಟನ್ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಜವಳಿ ಸಚಿವ ಗಿರಿರಾಜ್ ಸಿಂಗ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಕೇಂದ್ರ ರೇಷ್ಮೆ ಮಂಡಳಿಯ 77ನೇ ಸಂಸ್ಥಾಪನಾ ದಿನಾಚರಣೆ ಹಾಗೂ ರೇಷ್ಮೆ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“2014ರಲ್ಲಿ ದೇಶದ ರೇಷ್ಮೆ ಉತ್ಪಾದನೆ 26 ಸಾವಿರ ಮೆಟ್ರಿಕ್ ಟನ್ ಇತ್ತು. ಪ್ರಸ್ತುತ ಅದು 42 ಸಾವಿರ ಮೆಟ್ರಿಕ್ ಟನ್ಗೆ ಏರಿಕೆಯಾಗಿದೆ. 2030–31ರ ವೇಳೆಗೆ 60 ಸಾವಿರ ಮೆಟ್ರಿಕ್ ಟನ್ ಉತ್ಪಾದನೆ ಸಾಧಿಸುವ ಗುರಿ ಹೊಂದಿದ್ದೇವೆ. 2028–29ರ ವೇಳೆಗೆ ಜಾಗತಿಕವಾಗಿ ರೇಷ್ಮೆ ಉತ್ಪಾದನೆಯಲ್ಲಿ ಭಾರತವನ್ನು ಮೊದಲ ಸ್ಥಾನಕ್ಕೆ ತರುವ ಸಂಕಲ್ಪವಿದೆ,” ಎಂದು ಗಿರಿರಾಜ್ ಸಿಂಗ್ ಹೇಳಿದರು.
ರೇಷ್ಮೆ ಬೆಳೆಗಾರರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಹಿಪ್ಪುನೇರಳೆ ಎಲೆಗಳ ಇಳುವರಿ ಹೆಚ್ಚಿಸುವುದು, ರೇಷ್ಮೆ ಹುಳು ಸಾಕಾಣಿಕೆಯ ಚಕ್ರಗಳನ್ನು ಹೆಚ್ಚಿಸುವುದು ಹಾಗೂ ಆಧುನಿಕ ತಂತ್ರಜ್ಞಾನಗಳನ್ನು ರೈತರಿಗೆ ತಲುಪಿಸುವ ಅಗತ್ಯವಿದೆ ಎಂದು ಸಚಿವರು ಹೇಳಿದರು.
ಉತ್ತಮ ರೇಷ್ಮೆ ಬೆಳೆಗಾರರಿಗೆ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಸ್ಪರ್ಧೆಗಳನ್ನು ಆಯೋಜಿಸುವಂತೆ ಅವರು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ದೇಶದ ಒಟ್ಟು ರೇಷ್ಮೆ ಉತ್ಪಾದನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.
ಆಧುನಿಕ ತಂತ್ರಜ್ಞಾನ ಹಾಗೂ ಹೆಚ್ಚಿನ ಸಾಂದ್ರತೆಯ ಉತ್ಪಾದನಾ ವಿಧಾನಗಳ ಮೂಲಕ ಜಾಗತಿಕ ಗುಣಮಟ್ಟದ ರೇಷ್ಮೆ ಉತ್ಪಾದನೆಗೆ ಒತ್ತು ನೀಡಲಾಗುತ್ತಿದೆ ಎಂದರು.
ರೇಷ್ಮೆ ಉತ್ಪಾದನೆ ಹೆಚ್ಚಿಸಲು ಉತ್ತಮ ಇಳುವರಿ ನೀಡುವ ರೇಷ್ಮೆ ಹುಳುಗಳ ಹೈಬ್ರಿಡ್ ತಳಿಗಳು, ಆಧುನಿಕ ಯಂತ್ರೋಪಕರಣಗಳು ಹಾಗೂ ಎಐ, ಜಿಐಎಸ್ ಮತ್ತು ಮೆಷಿನ್ ಲರ್ನಿಂಗ್ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಜವಳಿ ಸಚಿವಾಲಯ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R