
ಬೆಂಗಳೂರು, 20 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:‘ಬಾಗಿಲಿಗೆ ಬಂತು ಸರ್ಕಾರ’ ಎಂದು ಹೇಳುತ್ತಾ ‘ಪ್ರಜಾಸೇವೆ’ ಕಾರ್ಯಕ್ರಮ ಆರಂಭಿಸಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಟೀಕಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಹೇಳಿಕೆ ನೀಡಿರುವ ಅವರು, ಸಚಿವರು ಹಾಗೂ ಶಾಸಕರೇ ಕಾರ್ಯಕ್ರಮಕ್ಕೆ ಹಾಜರಾಗದಿದ್ದರೆ ಪ್ರಜಾಸೇವೆ ನಡೆಸಿ ಏನು ಪ್ರಯೋಜನ ಎಂದು ಪ್ರಶ್ನಿಸಿದ್ದಾರೆ.
ಕೇವಲ ಪ್ರಚಾರದ ಗಿಮಿಕ್‌ಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಲು ‘ಪ್ರಜಾಸೇವೆ’ ಕಾರ್ಯಕ್ರಮ ಅಗತ್ಯವಿತ್ತೇ ಎಂದು ಪ್ರಶ್ನಿಸಿರುವ ಸಿ.ಟಿ.ರವಿ, ರಾಜ್ಯದಲ್ಲಿ ಆಡಳಿತ ಯಂತ್ರ ನಿದ್ದೆಯಲ್ಲಿದೆ ಎಂದು ಆರೋಪಿಸಿದ್ದಾರೆ. ಪ್ರಜಾಸೇವೆ ಹೆಸರಿನಲ್ಲಿ ಜಾಹೀರಾತು ನೀಡಿ, ವಾಸ್ತವದಲ್ಲಿ ಜನರಿಗೆ ಸೇವೆ ದೊರೆಯದಿದ್ದರೆ ಅದರಿಂದ ಏನು ಪ್ರಯೋಜನ ಎಂದು ಕೇಳಿದ್ದಾರೆ.
ಜನರ ಮನೆ ಬಾಗಿಲಿಗೆ ತೆರಳಿ ಅವರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಅದು ತೋರಿಕೆಯ ನಾಟಕವಾಗಬಾರದು ಎಂದು ಅವರು ಹೇಳಿದ್ದಾರೆ.
ತಕ್ಷಣ ಆಡಳಿತ ಯಂತ್ರಕ್ಕೆ ಚುರುಕು ನೀಡಿ, ನಿಜವಾಗಿಯೂ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಆಡಳಿತ ನಡೆಸಬೇಕು. ಇಲ್ಲವಾದರೆ ‘ಪ್ರಜಾಸೇವೆ’ಯಂತಹ ಗಿಮಿಕ್‌ಗಳನ್ನಾದರೂ ನಿಲ್ಲಿಸಬೇಕು ಎಂದು ಸಿ.ಟಿ.ರವಿ ಒತ್ತಾಯಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.