
ಬೆಂಗಳೂರು, 20 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
2027ರಲ್ಲಿ ನಡೆಯಲಿರುವ ಎರಡನೇ ‘ಕ್ವಾಂಟಂ ಇಂಡಿಯಾ ಬೆಂಗಳೂರು ಸಮಿಟ್’ ಅನ್ನು ಜಾಗತಿಕ ಮಟ್ಟದ ಪ್ರಮುಖ ಕ್ವಾಂಟಂ ವೇದಿಕೆಯಾಗಿ ವಿಸ್ತರಿಸಲು ಕರ್ನಾಟಕ ಸರ್ಕಾರ ಉದ್ದೇಶಿಸಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಧರ್ಮಸಿಂಗ್ ಹೇಳಿದರು.
ಬೆಂಗಳೂರಿನಲ್ಲಿ ನಡೆದ QNu Labsನ 10ನೇ ವಾರ್ಷಿಕೋತ್ಸವ ಹಾಗೂ QShield 2.0 ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ಸಮಾವೇಶದಲ್ಲಿ ಜಾಗತಿಕ ಸಂಶೋಧಕರು, ತಂತ್ರಜ್ಞಾನ ಕಂಪನಿಗಳು, ಸ್ಟಾರ್ಟ್ಅಪ್ಗಳು, ಹೂಡಿಕೆದಾರರು ಹಾಗೂ ನೀತಿನಿರ್ಧಾರಕರ ಹೆಚ್ಚಿನ ಪಾಲ್ಗೊಳ್ಳುವಿಕೆಗೆ ಒತ್ತು ನೀಡಲಾಗುವುದು ಎಂದರು.
“2027ರ ಸಮಿಟ್ ಕೇವಲ ಸಮ್ಮೇಳನವಾಗಿರಬಾರದು. ಸಂಶೋಧನೆ, ಉದ್ಯಮ, ಸ್ಟಾರ್ಟ್ಅಪ್ಗಳು, ಹೂಡಿಕೆ ಮತ್ತು ಅಂತರರಾಷ್ಟ್ರೀಯ ಸಹಭಾಗಿತ್ವಗಳನ್ನು ಒಂದೇ ವೇದಿಕೆಯಲ್ಲಿ ಸಂಪರ್ಕಿಸುವ ಜಾಗತಿಕ ಕ್ವಾಂಟಂ ವೇದಿಕೆಯಾಗಬೇಕು” ಎಂದು ಸಚಿವರು ಹೇಳಿದರು.
ರಾಜ್ಯದ ಪ್ರಸ್ತಾವಿತ ಕ್ವಾಂಟಂ ಸಿಟಿ ನಿರ್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ QNu Labsಗೆ ಆಹ್ವಾನ ನೀಡಿದ ಅವರು, ಕ್ವಾಂಟಂ ಸಂಶೋಧನೆ, ಹಾರ್ಡ್ವೇರ್, ಸ್ಟಾರ್ಟ್ಅಪ್ಗಳು, ಪ್ರತಿಭೆ, ಉದ್ಯಮ ಹಾಗೂ ವಾಣಿಜ್ಯೀಕರಣವನ್ನು ಒಂದೇ ವ್ಯವಸ್ಥೆಯಲ್ಲಿ ಒಗ್ಗೂಡಿಸುವುದು ಕ್ವಾಂಟಂ ಸಿಟಿಯ ಉದ್ದೇಶವಾಗಿದೆ ಎಂದರು.
“ಸಂಶೋಧನೆಯಿಂದ ನೈಜ ಬಳಕೆಯವರೆಗೆ ಸ್ವದೇಶಿ ಕ್ವಾಂಟಂ ತಂತ್ರಜ್ಞಾನವನ್ನು ಕೊಂಡೊಯ್ಯುವ ಸಾಮರ್ಥ್ಯವನ್ನು QNu Labs ತೋರಿಸಿದೆ. ಇಂತಹ ಸಂಸ್ಥೆಗಳು ಕರ್ನಾಟಕದ ಕ್ವಾಂಟಂ ಸಿಟಿ ನಿರ್ಮಾಣದಲ್ಲಿ ಪ್ರಮುಖ ಪಾಲುದಾರರಾಗಬೇಕು” ಎಂದು ಅವರು ತಿಳಿಸಿದರು.
₹1,000 ಕೋಟಿ ಕ್ವಾಂಟಂ ಮಿಷನ್2035ರ ವೇಳೆಗೆ 20 ಬಿಲಿಯನ್ ಡಾಲರ್ ಕ್ವಾಂಟಂ ಆರ್ಥಿಕತೆಯನ್ನು ನಿರ್ಮಿಸುವ ಗುರಿಯನ್ನು ಕರ್ನಾಟಕ ಹೊಂದಿದೆ.
ಈ ನಿಟ್ಟಿನಲ್ಲಿ ₹1,000 ಕೋಟಿ ಕರ್ನಾಟಕ ಕ್ವಾಂಟಂ ಮಿಷನ್ ಮೂಲಕ ಮೂಲಸೌಕರ್ಯ, ಮಾನವ ಸಂಪನ್ಮೂಲ, ಸ್ಟಾರ್ಟ್ಅಪ್ಗಳು, ಸಂಶೋಧನೆ ಮತ್ತು ಜಾಗತಿಕ ಸಹಭಾಗಿತ್ವಕ್ಕೆ ಒತ್ತು ನೀಡಲಾಗುತ್ತಿದೆ ಎಂದು ಸಚಿವರು ಹೇಳಿದರು.
“ಪೇಟೆಂಟ್ಗಳು, ಉತ್ಪನ್ನಗಳು, ಹೊಸ ಕಂಪನಿಗಳು, ನುರಿತ ಪ್ರತಿಭೆ, ಹೂಡಿಕೆ ಮತ್ತು ಜಾಗತಿಕ ಮಾರುಕಟ್ಟೆ ಅವಕಾಶಗಳು ನಮ್ಮ ಕ್ವಾಂಟಂ ಪ್ರಯತ್ನಗಳ ನಿಜವಾದ ಫಲಿತಾಂಶವಾಗಬೇಕು.
ಕ್ವಾಂಟಂ ಆಲೋಚನೆಗಳು ಹುಟ್ಟುವ, ತಂತ್ರಜ್ಞಾನಗಳು ನಿರ್ಮಾಣವಾಗುವ ಮತ್ತು ಕಂಪನಿಗಳು ಜಾಗತಿಕ ಮಟ್ಟಕ್ಕೆ ಬೆಳೆಯುವ ಕೇಂದ್ರವಾಗಿ ಕರ್ನಾಟಕ ಹೊರಹೊಮ್ಮಬೇಕು” ಎಂದು ಅಜಯ್ ಧರ್ಮಸಿಂಗ್ ಹೇಳಿದರು.
QNu Labs 10 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಸಂಸ್ಥೆಯ ಸ್ಥಾಪಕರು, ವಿಜ್ಞಾನಿಗಳು, ಎಂಜಿನಿಯರ್ಗಳು ಹಾಗೂ ಸಿಬ್ಬಂದಿಯನ್ನು ಸಚಿವರು ಅಭಿನಂದಿಸಿದರು.
ಭಾರತೀಯ ತಂತ್ರಜ್ಞಾನಗಳನ್ನು ಜಾಗತಿಕ ಮಾರುಕಟ್ಟೆಗೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿರುವ ಸ್ವದೇಶಿ ಡೀಪ್ಟೆಕ್ ಕಂಪನಿಗಳಿಗೆ ರಾಜ್ಯ ಸರ್ಕಾರ ನಿರಂತರ ಪ್ರೋತ್ಸಾಹ ನೀಡಲಿದೆ ಎಂದರು.
ಕಾರ್ಯಕ್ರಮದಲ್ಲಿ QNu Labs ಸಹ-ಸ್ಥಾಪಕ ಹಾಗೂ ಸಿಇಒ ಸುನಿಲ್ ಗುಪ್ತಾ ಮತ್ತು ರಾಷ್ಟ್ರೀಯ ಕ್ವಾಂಟಂ ಮಿಷನ್ನ ಮಿಷನ್ ಗವರ್ನಿಂಗ್ ಬೋರ್ಡ್ ಅಧ್ಯಕ್ಷ ಡಾ. ಅಜೈ ಚೌಧರಿ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R