
ಕೋಲಾರ, 20 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ :ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತರದೆ ಹಾಗೂ ಶಿಷ್ಟಾಚಾರ ಪಾಲಿಸದೆ ಏಕಾಏಕಿ ಕಾಮಗಾರಿಗಳನ್ನು ಆರಂಭಿಸಿದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ, ಎಂದು ಕೋಲಾರ ಶಾಸಕ ಡಾ. ಕೊತ್ತೂರು ಜಿ. ಮಂಜುನಾಥ್ ಅವರು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಭಾನುವಾರ ನಡೆದ ಕೋಲಾರ ನಗರಸಭೆಯ ಸಾಮಾನ್ಯ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಅಭಿವೃದ್ಧಿ ಕಾರ್ಯಗಳಲ್ಲಿ ಜನಪ್ರತಿನಿಧಿಗಳನ್ನು ಕಡೆಗಣಿಸುವ ಪ್ರವೃತ್ತಿಯನ್ನು ನಿಲ್ಲಿಸಬೇಕೆಂದು ಸೂಚಿಸಿದರು.
ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಶಾಸಕರು, ನಗರದಲ್ಲಿ ೧.೪ ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಅನುಮೋದನೆ ಸಿಕ್ಕಿದ್ದರೂ, ಜನಪ್ರತಿನಿಧಿಗಳಿಗೆ ಮಾಹಿತಿ ನೀಡದೆ ಹಾಗೂ ಶಿಷ್ಟಾಚಾರ ಪಾಲಿಸದೆ ಗುಪ್ತವಾಗಿ ಕಾಮಗಾರಿ ಆರಂಭಿಸಲು ಯತ್ನಿಸಲಾಗುತ್ತಿದೆ. ಇಂತಹ ಕಾಮಗಾರಿಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ತಾಕೀತು ಮಾಡಿದರು. ಅಭಿವೃದ್ಧಿ ಕಾಮಗಾರಿಗಳ ಕುರಿತು ಅಧಿಕಾರಿಗಳು ಪಾರದರ್ಶಕತೆ ಕಾಯ್ದುಕೊಳ್ಳಬೇಕು; ಯುಜಿಡಿ ಲೈನ್ ಅಳವಡಿಕೆ ಸೇರಿದಂತೆ ಯಾವುದೇ ಕಾಮಗಾರಿಗಳ ಅಂದಾಜು ಪಟ್ಟಿ ಮತ್ತು ಪ್ರಗತಿಯ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಒದಗಿಸಬೇಕು. ಅಧಿಕಾರಿಗಳು ಮುಕ್ತವಾಗಿ ಮಾಹಿತಿ ಹಂಚಿಕೊಂಡರೆ, ಕಾಮಗಾರಿಗಳಿಗೆ ಎದುರಾಗುವ ಯಾವುದೇ ಅಡೆತಡೆಗಳನ್ನು ನಿವಾರಿಸಲು ನಾವು ಸಿದ್ಧರಿದ್ದೇವೆ ಎಂದು ಶಾಸಕರು ಸಭೆಯಲ್ಲಿ ಭರವಸೆ ನೀಡಿದರು.
ಶಾಸಕರ ಈ ಕಟ್ಟುನಿಟ್ಟಿನ ನಿಲುವಿಗೆ ದನಿಗೂಡಿಸಿದ ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಅವರು, ಗುತ್ತಿಗೆದಾರರು ಮತ್ತು ಅಧಿಕಾರಿಗಳಿಗೆ ಎಚ್ಚರಿಕೆ ರವಾನಿಸಿದರು. ಯಾವುದೇ ಕಾಮಗಾರಿ ಪ್ರಾರಂಭಿಸುವ ಮುನ್ನ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಉಸ್ತುವಾರಿ ಸಚಿವರ ಗಮನಕ್ಕೆ ತರುವುದು ಕಡ್ಡಾಯ ಎಂದು ಅವರು ಸ್ಪಷ್ಟಪಡಿಸಿದರು.
ಜನಪ್ರತಿನಿಧಿಗಳಿಗೆ ಅಧಿಕೃತ ಆಹ್ವಾನ ನೀಡಿ, ಪೂಜೆ ನೆರವೇರಿಸಿದ ಬಳಿಕವೇ ಕಾಮಗಾರಿ ಆರಂಭಿಸಬೇಕು. ಇದನ್ನು ಮೀರಿ ಕಾಮಗಾರಿ ಆರಂಭಿಸುವ ಗುತ್ತಿಗೆದಾರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಬಂಧಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ, ಗುತ್ತಿಗೆದಾರರ ಹಿನ್ನೆಲೆ, ಜಿಎಸ್ಟಿ ಐಟಿ ರಿಟರ್ನ್ಸ್ ಮತ್ತು ವಿಳಾಸವನ್ನು ಕಡ್ಡಾಯವಾಗಿ ಪರಿಶೀಲಿಸಿದ ನಂತರವೇ ಕಾರ್ಯಾದೇಶ ನೀಡಬೇಕು ಎಂದು ತಾಕೀತು ಮಾಡಿದರು.
ಇದೇ ವೇಳೆ ನಗರದ ನೈರ್ಮಲ್ಯ ಮತ್ತು ಸಾರ್ವಜನಿಕರ ಆರೋಗ್ಯದ ಬಗ್ಗೆಯೂ ಮಹತ್ವದ ನಿರ್ಣಯ ಕೈಗೊಳ್ಳಲಾಯಿತು. ನಗರದ ಹಲವು ಖಾಲಿ ನಿವೇಶನಗಳಲ್ಲಿ ಗಿಡಗಂಟಿಗಳು ಬೆಳೆದು ಸೊಳ್ಳೆ ಹಾಗೂ ಹಾವುಗಳ ಹಾವಳಿ ಹೆಚ್ಚಾಗುತ್ತಿದೆ. ಅಕ್ಕಪಕ್ಕದ ನಿವಾಸಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಕಳವಳ ವ್ಯಕ್ತಪಡಿಸಿದರು.
ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಆದೇಶಗಳ ಅನ್ವಯ, ಇಂತಹ ಖಾಲಿ ನಿವೇಶನಗಳನ್ನು ಮಾಲೀಕರೆ ಸ್ವತಃ ತ್ವರಿತವಾಗಿ ಸ್ವಚ್ಛಗೊಳಿಸಿಕೊಳ್ಳಬೇಕು; ಒಂದು ವೇಳೆ ತಪ್ಪಿದಲ್ಲಿ, ನಗರಸಭೆಯಿಂದಲೇ ಆ ಕಾರ್ಯವನ್ನು ನಡೆಸಿ, ಅದಕ್ಕೆ ತಗಲುವ ವೆಚ್ಚದ ಜೊತೆಗೆ ೨೦೦೦ ದಿಂದ ೩೦೦೦ ರೂ.ಗಳವರೆಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು. ಈ ದಂಡದ ಮೊತ್ತವನ್ನು ಮಾಲೀಕರ ಆಸ್ತಿ ತೆರಿಗೆಯೊಂದಿಗೆ ಸೇರಿಸಿ ಕಟ್ಟುನಿಟ್ಟಾಗಿ ವಸೂಲಿ ಮಾಡುವಂತೆ ಅಧಿಕಾರಿಗಳಿಗೆ ಸಭೆಯಲ್ಲಿ ನಿರ್ಣಯದ ಮೂಲಕ ಆದೇಶಿಸಲಾಯಿತು.
ಸಭೆಯಲ್ಲಿ ವಿಧಾನ ಪರಿಷತ್ ಶಾಸಕರಾದ ಎಂ ಎಲ್ ಅನಿಲ್ ಕುಮಾರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಧಿಕಾರದ ಅಧ್ಯಕ್ಷರು ವೈ ಶಿವಕುಮಾರ್, ನಗರಸಭೆ ಆಯುಕ್ತರು ವೆಂಕಟೇಶ್ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್