ಸೆಮಿಕಾನ್ ಇಂಡಿಯಾ: 10 ಕಂಪನಿಗಳೊಂದಿಗೆ ಎಂ.ಬಿ. ಪಾಟೀಲ ಮಾತುಕತೆ
10 ಕಂಪನಿಗಳೊಂದಿಗೆ ಎಂ.ಬಿ. ಪಾಟೀಲ ಮಾತುಕತೆ
semicon-india-2026-day-2-mb-patil-holds-talks-with-10-companies


ನವದೆಹಲಿ, 19 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ಸೆಮಿಕಾನ್ ಇಂಡಿಯಾ–2026 ಸಮಾವೇಶದ ಎರಡನೇ ದಿನ ಕರ್ನಾಟಕದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ನೇತೃತ್ವದ ರಾಜ್ಯದ ನಿಯೋಗವು 10ಕ್ಕೂ ಹೆಚ್ಚು ಜಾಗತಿಕ ಸೆಮಿಕಂಡಕ್ಟರ್ ಹಾಗೂ ಎಲೆಕ್ಟ್ರಾನಿಕ್ಸ್ ಕಂಪನಿಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿತು. ರಾಜ್ಯದಲ್ಲಿ ಹೊಸ ಹೂಡಿಕೆ ಮತ್ತು ತಯಾರಿಕಾ ಘಟಕಗಳನ್ನು ಸ್ಥಾಪಿಸುವಂತೆ ಕಂಪನಿಗಳಿಗೆ ಮನವಿ ಮಾಡಲಾಯಿತು.

ನೆದರ್ಲೆಂಡ್ಸ್ನ ಎಎಸ್ಎಂಎಲ್, ನೆಕ್ಸ್ಪೀರಿಯಾ, ಅಮೆರಿಕದ 3ಡಿ ಗ್ಲಾಸ್ ಸೊಲ್ಯೂಷನ್ಸ್, ಎಟಿ&ಎಸ್, ಜಪಾನ್ನ ಫ್ಯೂಜಿ ಫಿಲಂ, ಲ್ಯಾಮ್ ರೀಸರ್ಚ್ ಸೇರಿದಂತೆ ಅಪ್ಲೈಡ್ ಮೆಟೀರಿಯಲ್ಸ್, ಎಸ್ಎಫ್ಎಎಲ್, ಗೋದಾವರಿ ಕಮಾಡಿಟೀಸ್, ಟೋಕಿಯೋ ಎಲೆಕ್ಟ್ರಾನ್ ಮತ್ತು ಸಿರ್ಮಾ ಎಸ್ಜಿಎಸ್ ಕಂಪನಿಗಳೊಂದಿಗೆ ಹೂಡಿಕೆ ಕುರಿತು ಚರ್ಚೆ ನಡೆಯಿತು.

₹10 ಸಾವಿರ ಕೋಟಿ ಹೂಡಿಕೆ: ಲ್ಯಾಮ್ ರೀಸರ್ಚ್ ಈಗಾಗಲೇ ಕರ್ನಾಟಕದಲ್ಲಿ ₹10 ಸಾವಿರ ಕೋಟಿ ಹೂಡಿಕೆಯ ಯೋಜನೆ ಘೋಷಿಸಿದ್ದು, ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಅಗತ್ಯ ಕ್ರಮಗಳ ಕುರಿತು ಸಚಿವರು ಚರ್ಚಿಸಿದರು.

ಅಪ್ಲೈಡ್ ಮೆಟೀರಿಯಲ್ಸ್ನ ಹೂಡಿಕೆಯಿಂದ ರಾಜ್ಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ತಯಾರಿಕಾ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದೆ ಎಂದು ಸಚಿವರು ತಿಳಿಸಿದರು.

ನಂಜನಗೂಡಿನಲ್ಲಿ ಕಳೆದ 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಎಟಿ&ಎಸ್ ಘಟಕವನ್ನು ವಿಸ್ತರಿಸಿ ಹೆಚ್ಚಿನ ಹೂಡಿಕೆ ಮಾಡುವಂತೆ ಮನವಿ ಮಾಡಲಾಗಿದೆ. ಫ್ಯೂಜಿ ಫಿಲಂ ಕಂಪನಿಗೆ ರಾಜ್ಯದಲ್ಲಿ ತಯಾರಿಕಾ ಘಟಕ ಹಾಗೂ ಬೆಂಗಳೂರಿನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಘಟಕ ಸ್ಥಾಪಿಸುವಂತೆ ಕೋರಲಾಗಿದೆ ಎಂದು ಎಂ.ಬಿ. ಪಾಟೀಲ ಹೇಳಿದರು.

ಸಚಿವ ಎಂ.ಬಿ. ಪಾಟೀಲ ಹೇಳಿಕೆ: “ಕರ್ನಾಟಕದಲ್ಲಿ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಹೂಡಿಕೆಗೆ ಇರುವ ಅವಕಾಶಗಳನ್ನು ಕಂಪನಿಗಳ ಗಮನಕ್ಕೆ ತರಲಾಗಿದೆ. ಈಗಾಗಲೇ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಘಟಕಗಳ ವಿಸ್ತರಣೆ ಹಾಗೂ ಹೊಸ ತಯಾರಿಕಾ ಸ್ಥಾವರಗಳ ಸ್ಥಾಪನೆಗೆ ಅಗತ್ಯ ಸಹಕಾರ ನೀಡಲಾಗುವುದು” ಎಂದು ಅವರು ತಿಳಿಸಿದರು.

ಸೆಮಿಕಾನ್ ಇಂಡಿಯಾ–2026ರ ಎರಡನೇ ದಿನ ದೇಶದ ಸೆಮಿಕಂಡಕ್ಟರ್ ವಲಯದಲ್ಲಿ 25 ಪ್ರಮುಖ ಘೋಷಣೆಗಳು ಮತ್ತು ಸಹಯೋಗಗಳು ನಡೆದಿದ್ದು, ತಯಾರಿಕೆ, ವಸ್ತುಗಳು, ಲಾಜಿಸ್ಟಿಕ್ಸ್, ಚಿಪ್ ವಿನ್ಯಾಸ, ಅಡ್ವಾನ್ಸ್ಡ್ ಪ್ಯಾಕೇಜಿಂಗ್ ಸೇರಿದಂತೆ ವಿವಿಧ ಕ್ಷೇತ್ರಗಳು ಒಳಗೊಂಡಿವೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande