
ಬೆಂಗಳೂರು, 18 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ಗುತ್ತಿಗೆ ಪೌರಕಾರ್ಮಿಕರ ಕುರಿತು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ಹೇಳಿಕೆಯನ್ನು ಖಂಡಿಸಿರುವ ಪೌರಕಾರ್ಮಿಕರು ಹಾಗೂ ಬೀದಿ ವ್ಯಾಪಾರಿಗಳು, ಸಚಿವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ನಗರದ ಐಪಿಡಿ ಸಾಲಪ್ಪ ಅವರ ಪ್ರತಿಮೆ ಬಳಿ ಶುಕ್ರವಾರ ಪೌರಕಾರ್ಮಿಕರು ಹಾಗೂ ಬೀದಿ ವ್ಯಾಪಾರಿಗಳು ಸಭೆ ಸೇರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಬಹಿರಂಗ ಪತ್ರ ಸಲ್ಲಿಸಿದರು.
ಗುತ್ತಿಗೆ ಪೌರಕಾರ್ಮಿಕರು ಸೇವಾ ಕಾಯಂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟಾಗ ಸಚಿವರು ಅವರ ಕೆಲಸದ ಬದ್ಧತೆಯನ್ನು ಪ್ರಶ್ನಿಸಿದ್ದಾರೆ ಎಂದು ಕಾರ್ಮಿಕರು ಆರೋಪಿಸಿದರು. ಕೆಲವು ವಾರ್ಡ್ಗಳಲ್ಲಿ ಶೇ.70ರಷ್ಟು ಹಾಜರಾತಿ ಇದೆ ಎಂದು ಸಚಿವರು ಉಲ್ಲೇಖಿಸಿದ್ದನ್ನು ಕಾರ್ಮಿಕರು ಪ್ರಶ್ನಿಸಿದ್ದಾರೆ.
ಪೌರಕಾರ್ಮಿಕರ ಸಾರ್ವಜನಿಕ ಕ್ಷಮೆಯಾಚನೆ, ಗುತ್ತಿಗೆ ಪೌರಕಾರ್ಮಿಕರನ್ನು ತಕ್ಷಣ ಕಾಯಂಗೊಳಿಸುವುದು, ಗೌರವಯುತ ಹಾಗೂ ಸುರಕ್ಷಿತ ಕೆಲಸದ ವಾತಾವರಣ ಕಲ್ಪಿಸುವುದು, ತೆರವುಗೊಳಿಸಲಾದ ಬೀದಿ ವ್ಯಾಪಾರಿಗಳನ್ನು ಅವರ ಹಿಂದಿನ ವ್ಯಾಪಾರ ಸ್ಥಳಗಳಿಗೆ ಮರುಸ್ಥಾಪಿಸುವುದು, ರಾಜ್ಯಾದ್ಯಂತ ಶೂನ್ಯ-ತೆರವು ನೀತಿ ಜಾರಿಗೊಳಿಸುವುದು ಹಾಗೂ ಬೀದಿ ವ್ಯಾಪಾರಿಗಳ ಸಮಗ್ರ ಸಮೀಕ್ಷೆ ನಡೆಸುವುದು ಸೇರಿದಂತೆ ಆರು ಪ್ರಮುಖ ಬೇಡಿಕೆಗಳನ್ನು ಕಾರ್ಮಿಕರು ಮುಂದಿಟ್ಟಿದ್ದಾರೆ.
“ಬೆಂಗಳೂರು ಶ್ರೀಮಂತರು ಮತ್ತು ಪ್ರಭಾವಿಗಳ ಖಾಸಗಿ ಆಸ್ತಿಯಲ್ಲ. ನಗರವನ್ನು ನಿರ್ಮಿಸುವ, ಸ್ವಚ್ಛಗೊಳಿಸುವ, ದುಡಿಯುವ ಮತ್ತು ಜೀವಂತವಾಗಿಡುವ ಎಲ್ಲರಿಗೂ ಬೆಂಗಳೂರು ಸೇರಿದೆ. ಪೌರಕಾರ್ಮಿಕರನ್ನು ಕಾಯಂಗೊಳಿಸುವುದಿಲ್ಲ ಎಂದು ಸಚಿವರು ಹೇಳುವಾಗ, ಅವರು ಗುತ್ತಿಗೆದಾರರ ಪರ ನಿಲ್ಲುತ್ತಿದ್ದಾರೆಯೇ ಅಥವಾ ಸಂಕಷ್ಟದಲ್ಲಿರುವ ಪೌರಕಾರ್ಮಿಕರ ಪರ ನಿಲ್ಲುತ್ತಿದ್ದಾರೆಯೇ ಎಂಬುದಕ್ಕೆ ಉತ್ತರಿಸಬೇಕು,” ಎಂದು ಸಾಮಾಜಿಕ ಕಾರ್ಯಕರ್ತ ವಿನಯ್ ಶ್ರೀನಿವಾಸ ಪ್ರಶ್ನಿಸಿದ್ದಾರೆ.
ಪೌರಕಾರ್ಮಿಕರು ಮತ್ತು ಬೀದಿ ವ್ಯಾಪಾರಿಗಳ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ತಮ್ಮ ಬೇಡಿಕೆಗಳ ಕುರಿತು ತಕ್ಷಣ ಚರ್ಚೆ ನಡೆಸಬೇಕು ಎಂದು ಒತ್ತಾಯಿಸಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R