
ಬಳ್ಳಾರಿ, 18 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್: ಅರ್ಹ ನಾಗರಿಕರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಚುನಾವಣಾ ಆಯೋಗವು ಹಮ್ಮಿಕೊಂಡಿರುವ ಎರಡನೇ ಹಂತದ ವಿಶೇಷ ಅಭಿಯಾನವು ಸೆಪ್ಟೆಂಬರ್ 19 ಮತ್ತು 20 ರಂದು ಜಿಲ್ಲೆಯಾದ್ಯಂತ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅವರು ತಿಳಿಸಿದ್ದಾರೆ.
ಮೊದಲ ಹಂತದ ನೋಂದಣಿ ಅಭಿಯಾನವು ಈಗಾಗಲೇ ಆಗಸ್ಟ್ 29 ಮತ್ತು 30 ರಂದು ಯಶಸ್ವಿಯಾಗಿ ಪೂರ್ಣಗೊಂಡಿದೆ. ಇದೀಗ ಎರಡನೇ ಹಂತದ ಪ್ರಕ್ರಿಯೆ ಆರಂಭವಾಗುತ್ತಿದ್ದು, ಜಿಲ್ಲೆಯ ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ ಅಧಿಕಾರಿಗಳು ಹಾಜರಿರಲಿದ್ದಾರೆ.
18 ವರ್ಷ ಪೂರೈಸಿದ ಯುವಜನರು ಹಾಗೂ ಇದುವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸದ ಎಲ್ಲ ಅರ್ಹ ನಾಗರಿಕರು ಅರ್ಜಿ ಸಲ್ಲಿಸಬಹುದು. ಹೊಸದಾಗಿ ಹೆಸರು ಸೇರ್ಪಡೆ ಮಾಡುವುದರ ಜೊತೆಗೆ ಮತದಾರರ ಗುರುತಿನ ಚೀಟಿಯಲ್ಲಿ ಹೆಸರು, ವಿಳಾಸ ತಿದ್ದುಪಡಿ ಹಾಗೂ ಹೆಸರು ವರ್ಗಾವಣೆಗೂ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
*ಎಸ್ಐಆರ್:*
ಆ.24 ರ ಅಂಕಿ-ಅAಶಗಳ ಪ್ರಕಾರ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 10,06,307 ಮತದಾರರಿದ್ದು, ಅದರಲ್ಲಿ 5,11,740 ಮಹಿಳಾ ಮತದಾರರು, 4,94,371 ಪುರುಷ ಮತದಾರರು ಹಾಗೂ 196 ತೃತೀಯ ಲಿಂಗಿ ಮತದಾರರಿದ್ದಾರೆ.
*ವಿಧಾನಸಭಾವಾರು ಮತದಾರರ ವಿವರ:*
ಕಂಪ್ಲಿ (91): ಒಟ್ಟು 2,04,792 ಮತದಾರರು (ಪುರುಷರು- 1,00,706, ಮಹಿಳೆಯರು- 1,04,047, ತೃತೀಯ ಲಿಂಗಿಗಳು- 39)
ಸಿರುಗುಪ್ಪ (92): ಒಟ್ಟು 1,96,173 ಮತದಾರರು (ಪುರುಷರು- 96,963, ಮಹಿಳೆಯರು- 99,153, ತೃತೀಯ ಲಿಂಗಿಗಳು- 57)
ಬಳ್ಳಾರಿ ಗ್ರಾಮೀಣ (93): ಒಟ್ಟು 1,99,972 ಮತದಾರರು (ಪುರುಷರು- 98,214, ಮಹಿಳೆಯರು- 1,01,713, ತೃತೀಯ ಲಿಂಗಿಗಳು- 45)
ಬಳ್ಳಾರಿ ನಗರ (94): ಒಟ್ಟು 2,02,641 ಮತದಾರರು (ಪುರುಷರು- 97,298, ಮಹಿಳೆಯರು- 1,05,308, ತೃತೀಯ ಲಿಂಗಿಗಳು- 35)
ಸಂಡೂರು (95): ಒಟ್ಟು 2,02,729 ಮತದಾರರು (ಪುರುಷರು- 1,01,190, ಮಹಿಳೆಯರು- 1,01,519, ತೃತೀಯ ಲಿಂಗಿಗಳು- 20)
*1,260ಕ್ಕೆ ಏರಿಕೆಯಾದ ಮತಗಟ್ಟೆಗಳ ಸಂಖ್ಯೆ:*
ಮತದಾರರ ಅನುಕೂಲಕ್ಕಾಗಿ ಕೈಗೊಳ್ಳಲಾದ ಮತಗಟ್ಟೆಗಳ ಪುನರ್ವಿಂಗಡಣೆ ನಂತರ ಜಿಲ್ಲೆಯಲ್ಲಿ ಮತಗಟ್ಟೆಗಳ ಸಂಖ್ಯೆ 1,227 ರಿಂದ 1,260ಕ್ಕೆ (33 ಮತಗಟ್ಟೆಗಳ ಹೆಚ್ಚಳ) ಏರಿಕೆಯಾಗಿದೆ.
ಕಂಪ್ಲಿ: 242 ರಿಂದ 253ಕ್ಕೆ ಏರಿಕೆ
ಸಿರುಗುಪ್ಪ: 229 ರಿಂದ 244ಕ್ಕೆ ಏರಿಕೆ
ಬಳ್ಳಾರಿ ಗ್ರಾಮೀಣ: 236 ರಿಂದ 238ಕ್ಕೆ ಏರಿಕೆ
ಬಳ್ಳಾರಿ ನಗರ: 261
ಸಂಡೂರು: 259 ರಿಂದ 264ಕ್ಕೆ ಏರಿಕೆ
*37,869 ನೋಟಿಸ್ಗಳ ಜಾರಿ ಮತ್ತು ವಿಚಾರಣೆ ಪ್ರಕ್ರಿಯೆ:*
ಮತದಾರರ ಪಟ್ಟಿಯ ನಿಖರತೆಗಾಗಿ ಆಗಸ್ಟ್ 28 ರಿಂದಲೇ ನೋಟಿಸ್ ಜಾರಿ ಪ್ರಕ್ರಿಯೆ ಆರಂಭಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 37,869 ನೋಟಿಸ್ಗಳನ್ನು ಸೃಜಿಸಲು ಗುರುತಿಸಲಾಗಿದ್ದು, ಈ ಪೈಕಿ 37,868 ನೋಟಿಸ್ಗಳನ್ನು ಈಗಾಗಲೇ ಸೃಜಿಸಲಾಗಿದೆ. ಸೃಜಿಸಲಾದ ನೋಟಿಸ್ಗಳಲ್ಲಿ 37,768 ನೋಟಿಸ್ಗಳನ್ನು ಮತದಾರರಿಗೆ ತಲುಪಿಸಲಾಗಿದ್ದು, ಕೇವಲ 100 ನೋಟಿಸ್ಗಳ ವಿತರಣೆ ಬಾಕಿ ಇದೆ.
*ವಿಚಾರಣೆ:*
ಇದುವರೆಗೆ 21,452 ಪ್ರಕರಣಗಳಲ್ಲಿ ವಿಚಾರಣೆ ಪೂರ್ಣಗೊಂಡಿದೆ. 14,164 ಪ್ರಕರಣಗಳಲ್ಲಿ ನಿಗದಿತ ವಿಚಾರಣಾ ದಿನಾಂಕ ಮುಕ್ತಾಯಗೊಂಡಿದೆ. ಪ್ರಸ್ತುತ ಪರಿಶೀಲನೆ ಪೂರ್ಣಗೊಂಡ 13,856 ದಾಖಲೆಗಳನ್ನು ಅಂತಿಮ ಪ್ರಕಟಣೆಗಾಗಿ ಕಾಯ್ದಿರಿಸಲಾಗಿದ್ದು, 15 ಅನರ್ಹ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ.
*136 ಸಹಾಯಕ ಮತದಾರರ ನೋಂದಣಾಧಿಕಾರಿಗಳ ನೇಮಕ:*
ಮತದಾರರ ನೋಂದಣಿ ಮತ್ತು ವಿಚಾರಣಾ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಜಿಲ್ಲೆಯಾದ್ಯಂತ 6 ನಿಯಮಿತ ಸಹಾಯಕ ಮತದಾರರ ನೋಂದಣಾಧಿಕಾರಿಗಳು ಹಾಗೂ 130 ಹೆಚ್ಚುವರಿ ಸಹಾಯಕ ಮತದಾರರ ನೋಂದಣಾಧಿಕಾರಿಗಳು ಸೇರಿದಂತೆ ಒಟ್ಟು 136 ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಕಂಪ್ಲಿಯಲ್ಲಿ 28, ಸಿರುಗುಪ್ಪದಲ್ಲಿ 26, ಬಳ್ಳಾರಿ ಗ್ರಾಮೀಣದಲ್ಲಿ 25, ಬಳ್ಳಾರಿ ನಗರದಲ್ಲಿ 33 ಹಾಗೂ ಸಂಡೂರು ಕ್ಷೇತ್ರದಲ್ಲಿ 24 ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮತದಾರರು ತಮ್ಮ ಹೆಸರು, ವಿಳಾಸ ತಿದ್ದುಪಡಿ ಹಾಗೂ ಹೊಸ ನೋಂದಣಿಗಾಗಿ ಈ ವಿಶೇಷ ಅಭಿಯಾನದ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್