ಕಲ್ಯಾಣ ಕರ್ನಾಟಕದ ಕಲ್ಯಾಣವೇ ಸರ್ಕಾರದ ಆದ್ಯತೆ: ಡಿ.ಕೆ. ಶಿವಕುಮಾರ್
ಕಲಬುರಗಿ, 17 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ಬಸವಣ್ಣನವರ ಸಾಮಾಜಿಕ ಕ್ರಾಂತಿಯ ನೆಲ, ಸಮಾನತೆ, ಮಾನವೀಯತೆ ಹಾಗೂ ಸಹಬಾಳ್ವೆಯ ಸಂದೇಶ ಸಾರಿದ ಪುಣ್ಯಭೂಮಿ ಕಲ್ಯಾಣ ಕರ್ನಾಟಕದ ಕಲ್ಯಾಣವೇ ಸರ್ಕಾರದ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಕಲಬುರಗಿಯಲ್ಲಿ ನಡೆದ ಕಲ್ಯಾಣ ಕರ್ನಾಟ
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ (ಪೋಟೋ ಕೃಪೆ ಸಿಎಂ ಮಾಧ್ಯಮ ಕಚೇರಿ)


ಕಲಬುರಗಿ, 17 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ಬಸವಣ್ಣನವರ ಸಾಮಾಜಿಕ ಕ್ರಾಂತಿಯ ನೆಲ, ಸಮಾನತೆ, ಮಾನವೀಯತೆ ಹಾಗೂ ಸಹಬಾಳ್ವೆಯ ಸಂದೇಶ ಸಾರಿದ ಪುಣ್ಯಭೂಮಿ ಕಲ್ಯಾಣ ಕರ್ನಾಟಕದ ಕಲ್ಯಾಣವೇ ಸರ್ಕಾರದ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಕಲಬುರಗಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ವಿಮೋಚನಾ ದಿನ ಹಾಗೂ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಬಸವಣ್ಣನವರು ಸಾಮಾಜಿಕ ಕ್ರಾಂತಿ ಮಾಡಿದ ನೆಲ ಇದು. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷ ರಕ್ತ ಮತ್ತು ಬೆವರು ಹರಿಸಿದೆ ಎಂದು ಹೇಳಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದರೂ ಕಲ್ಯಾಣ ಕರ್ನಾಟಕಕ್ಕೆ ನಿಜಾಮರಿಂದ ಸ್ವಾತಂತ್ರ್ಯ ದೊರೆತಿರಲಿಲ್ಲ. ಕಾಂಗ್ರೆಸ್ ಪಕ್ಷದ ಹೋರಾಟದಿಂದ ಈ ಭಾಗಕ್ಕೆ ವಿಮೋಚನೆ ದೊರೆಯಿತು. ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ಜವಾಹರಲಾಲ್ ನೆಹರು ಅವರು ಕಲ್ಯಾಣ ಕರ್ನಾಟಕವನ್ನು ಕಾಪಾಡಿದರು. ಧರಂಸಿಂಗ್ ಅವರ ವರದಿ ಆಧಾರದ ಮೇಲೆ 1990ರಲ್ಲಿ ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪನೆಯಾಯಿತು ಎಂದು ಹೇಳಿದರು.

371(ಜೆ)ಯಿಂದ ಯುವಕರಿಗೆ ಅವಕಾಶ

ಸಂವಿಧಾನದ 371(ಜೆ) ತಿದ್ದುಪಡಿ ಜಾರಿಯಾಗಲು ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕೊಡುಗೆ ಮಹತ್ವದ್ದಾಗಿದೆ ಎಂದು ಶಿವಕುಮಾರ್ ಹೇಳಿದರು. ಒಂದು ಮನೆಯಲ್ಲಿ ಒಬ್ಬರಾದರೂ ಸರ್ಕಾರಿ ನೌಕರ ಇರಬೇಕು, ಊರಿಗೆ ಒಬ್ಬರಾದರೂ ವೈದ್ಯ ಇರಬೇಕು, ಐದು ಮಂದಿಯಾದರೂ ಎಂಜಿನಿಯರ್‌ಗಳು ಇರಬೇಕು ಎಂಬುದು 371(ಜೆ)ಯ ನಿಜವಾದ ಉದ್ದೇಶವಾಗಿದೆ ಎಂದರು.

371(ಜೆ) ಜಾರಿಯಾಗಿ 12 ವರ್ಷಗಳಾಗಿದ್ದು, ಕಲ್ಯಾಣ ಕರ್ನಾಟಕಕ್ಕೆ ನೀಡಲಾದ ಸುಮಾರು ₹25 ಸಾವಿರ ಕೋಟಿ ವಿಶೇಷ ಅನುದಾನದಲ್ಲಿ ಈಗಾಗಲೇ ₹14 ಸಾವಿರ ಕೋಟಿ ಖರ್ಚಾಗಿದೆ. 41,103 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, 32,985 ಕಾಮಗಾರಿಗಳು ಪೂರ್ಣಗೊಂಡಿವೆ. 8,118 ಕಾಮಗಾರಿಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ ಎಂದು ತಿಳಿಸಿದರು.

ಇಲ್ಲಿಯವರೆಗೆ 79,383 ಯುವಕರಿಗೆ ಉದ್ಯೋಗ ಕಲ್ಪಿಸಲಾಗಿದೆ. ಪ್ರಸ್ತುತ 72 ಸಾವಿರ ಹುದ್ದೆಗಳ ನೇಮಕಾತಿ ನಡೆಯುತ್ತಿದ್ದು, ಇದರಲ್ಲಿ 32 ಸಾವಿರ ಹುದ್ದೆಗಳು ಕಲ್ಯಾಣ ಕರ್ನಾಟಕದ ಜನರಿಗೆ ದೊರೆಯಲಿವೆ ಎಂದು ಹೇಳಿದರು. 371(ಜೆ)ಯಿಂದ ವೈದ್ಯಕೀಯ ಕ್ಷೇತ್ರದಲ್ಲಿ 10 ಸಾವಿರಕ್ಕೂ ಹೆಚ್ಚು ಹಾಗೂ ಎಂಜಿನಿಯರಿಂಗ್‌ನಲ್ಲಿ 31 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರವೇಶದ ಅವಕಾಶ ಕಲ್ಪಿಸಲಾಗಿದೆ ಎಂದರು.

₹11,770 ಕೋಟಿ ಮೊತ್ತದ ಯೋಜನೆಗಳಿಗೆ ನಿರ್ಧಾರ

ಕಲಬುರಗಿಯಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ₹11,770 ಕೋಟಿ ಮೊತ್ತದ ಬೃಹತ್ ಯೋಜನೆಗಳಿಗೆ ನಿರ್ಧಾರ ಕೈಗೊಳ್ಳಲಾಗಿದೆ. 350 ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ಮಾಣದ ಗುರಿ ಹೊಂದಲಾಗಿದೆ. ಆರೋಗ್ಯ ಕ್ಷೇತ್ರಕ್ಕೆ ₹1,797 ಕೋಟಿ ಹಾಗೂ ಸಣ್ಣ ಕೈಗಾರಿಕೆಗಳಿಗೆ ₹200 ಕೋಟಿ ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಕಲ್ಯಾಣ ಕರ್ನಾಟಕ ಆರೋಗ್ಯ ಕೇಂದ್ರವಾಗಿ ರೂಪುಗೊಳ್ಳುತ್ತಿದೆ. ಯಾದಗಿರಿ, ಕೊಪ್ಪಳ ಹಾಗೂ ಬೀದರ್‌ನಲ್ಲಿ ಅತಿವಿಶೇಷ ಚಿಕಿತ್ಸಾ ಆಸ್ಪತ್ರೆಗಳನ್ನು ಸ್ಥಾಪಿಸಲಾಗುತ್ತಿದೆ. ಇಂದಿರಾಗಾಂಧಿ ತಾಯಿ-ಮಕ್ಕಳ ಆಸ್ಪತ್ರೆ, ಕಿದ್ವಾಯಿ ಹಾಗೂ ಜಯದೇವ ಆಸ್ಪತ್ರೆಗಳನ್ನು ಇನ್ನಷ್ಟು ಜನರ ಸೇವೆಗೆ ಸಜ್ಜುಗೊಳಿಸಲಾಗುತ್ತಿದ್ದು, ಈ ಆಸ್ಪತ್ರೆಗಳಿಗೆ ₹423 ಕೋಟಿ ವೆಚ್ಚ ಮಾಡಲಾಗುತ್ತಿದೆ. ಇದರಿಂದ ಈ ಭಾಗದ ಜನರು ಚಿಕಿತ್ಸೆಗಾಗಿ ಬೆಂಗಳೂರು ಹಾಗೂ ಹೈದರಾಬಾದ್‌ಗೆ ತೆರಳುವ ಅಗತ್ಯ ಕಡಿಮೆಯಾಗಲಿದೆ ಎಂದರು.

ರೈಲು, ರಸ್ತೆ ಅಭಿವೃದ್ಧಿಗೆ ಒತ್ತು

ಮಲ್ಲಿಕಾರ್ಜುನ ಖರ್ಗೆ ಅವರ ಪ್ರಯತ್ನದಿಂದ ಈ ಭಾಗಕ್ಕೆ 27 ಹೊಸ ರೈಲುಗಳು ಮಂಜೂರಾಗಿವೆ. ಗುಲಬರ್ಗಾ-ವಾಡಿ ಹಾಗೂ ಬೀದರ್-ಗುಲಬರ್ಗಾ ಹೊಸ ರೈಲು ಮಾರ್ಗಗಳ ಅಭಿವೃದ್ಧಿಗೂ ಅವರ ಕೊಡುಗೆ ಇದೆ ಎಂದು ಶಿವಕುಮಾರ್ ಹೇಳಿದರು.

ಕಲ್ಯಾಣಪಥ ಯೋಜನೆಯಡಿ 38 ವಿಧಾನಸಭಾ ಕ್ಷೇತ್ರಗಳಲ್ಲಿ 1,150 ಕಿ.ಮೀ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ₹1 ಸಾವಿರ ಕೋಟಿ ನೀಡಲಾಗಿದೆ. ಪ್ರತಿ ಕ್ಷೇತ್ರಕ್ಕೆ ₹120 ಕೋಟಿ ಮೀಸಲಿಡಲಾಗಿದೆ ಎಂದರು.

ಕೊಪ್ಪಳದ ನವಲಿಯಲ್ಲಿ ತುಂಗಭದ್ರಾ ಅಣೆಕಟ್ಟಿಗೆ ಸಮತೋಲನ ಜಲಾಶಯ ನಿರ್ಮಿಸಲು ನಿರ್ಧರಿಸಲಾಗಿದೆ. ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲರ ನೇತೃತ್ವದಲ್ಲಿ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ಮುಖ್ಯಮಂತ್ರಿಗಳನ್ನು ಒಂದೇ ವೇದಿಕೆಗೆ ಕರೆತಂದು ಈ ಐತಿಹಾಸಿಕ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕಲಬುರಗಿಯಲ್ಲಿ ನವೋದ್ಯಮಗಳಿಗೆ ಉತ್ತೇಜನ

ಕಲಬುರಗಿಯಲ್ಲಿ ಈಗಾಗಲೇ 120ಕ್ಕೂ ಹೆಚ್ಚು ನವೋದ್ಯಮಗಳು ಸ್ಥಾಪನೆಯಾಗಿದ್ದು, 2030ರ ವೇಳೆಗೆ 500ಕ್ಕೂ ಹೆಚ್ಚು ನವೋದ್ಯಮಗಳ ಸ್ಥಾಪನೆಯ ಗುರಿ ಹೊಂದಲಾಗಿದೆ. ಕಲ್ಯಾಣ ಕರ್ನಾಟಕದ ಕುಡಿಯುವ ನೀರಿನ ಯೋಜನೆಗಳಿಗೆ ₹7,200 ಕೋಟಿ ವಿನಿಯೋಗಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಈ ಭಾಗದ 25.74 ಲಕ್ಷ ಕುಟುಂಬಗಳ ಯಜಮಾನಿಯರಿಗೆ ಗೃಹಲಕ್ಷ್ಮಿ ಯೋಜನೆಯಡಿ ಹಣ ನೀಡಲಾಗಿದೆ. 23 ಲಕ್ಷ ಮನೆಗಳಿಗೆ ಗೃಹಜ್ಯೋತಿ ಯೋಜನೆಯ ಮೂಲಕ ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದೆ. ನಿರುದ್ಯೋಗಿ ಯುವಕ-ಯುವತಿಯರಿಗೆ ಒಟ್ಟು ₹382 ಕೋಟಿ ನೀಡಲಾಗಿದೆ ಎಂದರು.

ಮಹಿಳೆಯರು ಉಚಿತವಾಗಿ 93.06 ಕೋಟಿ ಬಾರಿ ಪ್ರಯಾಣಿಸಿದ್ದು, ಇದಕ್ಕಾಗಿ ₹3,452.90 ಕೋಟಿ ವೆಚ್ಚ ಮಾಡಲಾಗಿದೆ. ಇದೇ ಕಾಂಗ್ರೆಸ್‌ನ ಜನಪರ ಹಾಗೂ ಅಭಿವೃದ್ಧಿಪರ ಗ್ಯಾರಂಟಿ ಎಂದು ಹೇಳಿದರು.

ಜನರ ಮನೆಬಾಗಿಲಿಗೆ ಸರ್ಕಾರ

ಪ್ರಜಾಸೇವೆಯೇ ದೇವರ ಸೇವೆ ಎಂಬ ಉದ್ದೇಶದಿಂದ ಪ್ರಜಾಸೇವೆ ಇಲಾಖೆಯನ್ನು ಸ್ಥಾಪಿಸಲಾಗಿದೆ. ಸರ್ಕಾರವನ್ನೇ ಜನರ ಮನೆಬಾಗಿಲಿಗೆ ತಂದು ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆ. ಪ್ರತಿ ಎರಡನೇ ಹಾಗೂ ನಾಲ್ಕನೇ ಶನಿವಾರ ತಮ್ಮನ್ನೂ ಒಳಗೊಂಡಂತೆ ಸಚಿವರು, ಶಾಸಕರು ಜಿಲ್ಲೆ, ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಪ್ರಜಾಸೇವೆ ಅಭಿಯಾನ ನಡೆಸುತ್ತಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.

ಯುವಕರಲ್ಲಿ ನಾಯಕತ್ವ ಗುಣ ಬೆಳೆಸಲು ಹಾಗೂ ಅವರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯಲು 10 ಸಾವಿರ ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸಲಾಗುತ್ತಿದೆ. ಕ್ರೀಡೆ, ಕಲೆ ಹಾಗೂ ಸಂಗೀತ ಕ್ಷೇತ್ರಗಳಲ್ಲಿ ಯುವಕರ ಪ್ರತಿಭೆ ಅರಳಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.

ಬೆಂಗಳೂರು ಕರ್ನಾಟಕದ ಕಿರೀಟವಾದರೆ, ಕಲ್ಯಾಣ ಕರ್ನಾಟಕ ರಾಜ್ಯದ ಶಕ್ತಿಪೀಠವಾಗಿದೆ. ತುಂಗಭದ್ರಾ ಹಾಗೂ ಕೃಷ್ಣೆಯಂತೆ ಈ ಭಾಗದಲ್ಲಿ ಅಭಿವೃದ್ಧಿಯೂ ತುಂಬಿ ಹರಿಯಬೇಕು ಎಂಬುದು ಸರ್ಕಾರದ ಆಶಯವಾಗಿದೆ ಎಂದು ಹೇಳಿದರು.

“ನಾವು ಮತಕ್ಕಾಗಿ ಅಲ್ಲ, ರಾಜ್ಯದ ಹಿತಕ್ಕಾಗಿ ಕೆಲಸ ಮಾಡುತ್ತೇವೆ. ಇಡುವ ಹೆಜ್ಜೆ ಚಿಕ್ಕದಿರಬಹುದು, ಆದರೆ ಆಲೋಚನೆ ದೊಡ್ಡದಿರಬೇಕು. ಕಟ್ಟಡಗಳ ನಿರ್ಮಾಣದ ಜೊತೆಗೆ ಕಟ್ಟಕಡೆಯ ವ್ಯಕ್ತಿಯ ನೆಮ್ಮದಿಯ ಬದುಕೇ ನಿಜವಾದ ಅಭಿವೃದ್ಧಿ” ಎಂದು ಅವರು ಹೇಳಿದರು.

2028ರಲ್ಲೂ ಕಾಂಗ್ರೆಸ್ ಸರ್ಕಾರವನ್ನು ತರಬೇಕು ಹಾಗೂ 2029ರಲ್ಲಿ ಕೇಂದ್ರದಲ್ಲೂ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದ ಅವರು, “ನಮ್ಮೊಂದಿಗೆ ನೀವು, ನಿಮ್ಮೊಂದಿಗೆ ನಾವು. ಸದೃಢ ಕರ್ನಾಟಕ ನಿರ್ಮಾಣ ನಮ್ಮ ಸಂಕಲ್ಪ” ಎಂದು ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande