ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ 10 ಹೊಸ ಘೋಷಣೆಗಳು
ಆರ್ಥಿಕ ಮಿಷನ್, ಜೈವಿಕ ಆರ್ಥಿಕತೆ, ಐಟಿ ಪಾರ್ಕ್, ಕ್ರೀಡಾ ನಗರ, ಕೋಟಿ ವೃಕ್ಷ ಅಭಿಯಾನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ (ಪೋಟೋ ಕೃಪೆ ಸಿಎಂ ಮಾಧ್ಯಮ ಕಚೇರಿ)


ಕಲಬುರಗಿ, 17 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:

ಕಲ್ಯಾಣ ಕರ್ನಾಟಕ ಪ್ರದೇಶದ ಕೈಗಾರಿಕಾ, ಕೃಷಿ, ಆರೋಗ್ಯ, ಮೂಲಸೌಕರ್ಯ, ಮಾಹಿತಿ ತಂತ್ರಜ್ಞಾನ, ಪ್ರವಾಸೋದ್ಯಮ, ಕ್ರೀಡೆ ಹಾಗೂ ಪರಿಸರ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಹಲವು ಹೊಸ ಯೋಜನೆಗಳನ್ನು ಘೋಷಿಸಿದರು.

ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಹೂಡಿಕೆಗಳನ್ನು ಆಕರ್ಷಿಸಿ ಹೊಸ ಆರ್ಥಿಕ ಅವಕಾಶಗಳನ್ನು ಸೃಷ್ಟಿಸಲು ಕಲ್ಯಾಣ ಕರ್ನಾಟಕ ಆರ್ಥಿಕ ಮಿಷನ್ ಸ್ಥಾಪಿಸುವುದಾಗಿ ಅವರು ಘೋಷಿಸಿದರು. ವಿಭಾಗದಲ್ಲಿ ಕೈಗಾರಿಕಾ ಬೆಳವಣಿಗೆ ಮತ್ತು ಹೂಡಿಕೆಗೆ ವೇಗ ನೀಡುವ ಉದ್ದೇಶದಿಂದ ಈ ಮಿಷನ್ ಅನ್ನು ಸೆಕ್ಷನ್ 8 ಕಂಪನಿಯಾಗಿ ಸ್ಥಾಪಿಸಲಾಗುವುದು.

ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಮೂಲಕ ರೈತರ ಆದಾಯ ಹೆಚ್ಚಿಸಲು ಜೈವಿಕ ಆರ್ಥಿಕ ಮಿಷನ್ ಸ್ಥಾಪಿಸಲಾಗುವುದು. ತೊಗರಿ ಬೇಳೆ, ಕಮಲಾಪುರ ಬಾಳೆಹಣ್ಣು, ಒಣದ್ರಾಕ್ಷಿ ಹಾಗೂ ಸಿರಿಧಾನ್ಯ ಸೇರಿದಂತೆ ಕಲ್ಯಾಣ ಕರ್ನಾಟಕದ ಪ್ರಮುಖ ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ ಕಲ್ಪಿಸುವುದಕ್ಕೆ ಮಿಷನ್ ಒತ್ತು ನೀಡಲಿದೆ.

ರಕ್ತಹೀನತೆ ವಿರುದ್ಧ ವಿಶೇಷ ಅಭಿಯಾನ

ಕಲ್ಯಾಣ ಕರ್ನಾಟಕದಲ್ಲಿ ರಕ್ತಹೀನತೆ ಪ್ರಮಾಣವನ್ನು ಕಡಿಮೆ ಮಾಡಲು ಮುಂದಿನ ಎರಡು ವರ್ಷಗಳ ಕಾಲ ವಿಶೇಷ ಅಭಿಯಾನ ಕೈಗೊಳ್ಳಲಾಗುವುದು. ತಪಾಸಣೆ, ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗೆ ಒತ್ತು ನೀಡಲಾಗುತ್ತಿದ್ದು, ಗರ್ಭಿಣಿಯರು, ಹದಿಹರೆಯದವರು ಹಾಗೂ ಹಾಲುಣಿಸುವ ತಾಯಂದಿರಿಗೆ ವಿಶೇಷ ಗಮನ ನೀಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

ಕಲಬುರಗಿ ಮೂಲಸೌಕರ್ಯಕ್ಕೆ ಆದ್ಯತೆ

ವೇಗವಾಗಿ ಬೆಳೆಯುತ್ತಿರುವ ಕಲಬುರಗಿ ನಗರದಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಸೇಡಂ ರಸ್ತೆಯ ರಿಂಗ್ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಿಸಲಾಗುವುದು. ಹೊಸ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದ್ದು, ಅದರ ವಿವರವಾದ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ.

ನಗರದ ಹಸಿರು ವಾತಾವರಣ ಹಾಗೂ ಸಾರ್ವಜನಿಕ ವಿಹಾರಕ್ಕೆ ಉತ್ತೇಜನ ನೀಡಲು ₹30 ಕೋಟಿ ವೆಚ್ಚದಲ್ಲಿ ಹೊಸ ಕೆರೆ ಮತ್ತು ಮನರಂಜನಾ ಉದ್ಯಾನವನ್ನು ಅಭಿವೃದ್ಧಿಪಡಿಸಲಾಗುವುದು. ನಿವೇಶನರಹಿತ ಕುಟುಂಬಗಳಿಗೆ ವಸತಿ ಕಲ್ಪಿಸುವ ಉದ್ದೇಶದಿಂದ ಕಲಬುರಗಿ ಜಿಲ್ಲೆಯಲ್ಲಿ 50 ಸಾವಿರ ವಸತಿ ನಿವೇಶನಗಳನ್ನು ಅಭಿವೃದ್ಧಿಪಡಿಸಲಾಗುವುದು.

30 ಎಕರೆ ಪ್ರದೇಶದಲ್ಲಿ ಐಟಿ ಪಾರ್ಕ್

ಮಾಹಿತಿ ತಂತ್ರಜ್ಞಾನ ಹಾಗೂ ನಾವೀನ್ಯತಾ ಕ್ಷೇತ್ರದ ಬೆಳವಣಿಗೆಯನ್ನು ಬೆಂಗಳೂರಿನಾಚೆಗೂ ವಿಸ್ತರಿಸುವ ಉದ್ದೇಶದಿಂದ ಕಲಬುರಗಿಯಲ್ಲಿ 30 ಎಕರೆ ಪ್ರದೇಶದಲ್ಲಿ ಐಟಿ ಪಾರ್ಕ್ ಅಭಿವೃದ್ಧಿಪಡಿಸಲಾಗುವುದು. ನಾವೀನ್ಯತೆ, ಹೊಸ ಉದ್ಯಮಗಳು ಹಾಗೂ ಯುವ ಉದ್ಯಮಿಗಳನ್ನು ಉತ್ತೇಜಿಸಲು ಕೆಆರ್‌ಐಯಎ (ಕಲಬುರಗಿ ಸಂಶೋಧನೆ, ನಾವೀನ್ಯತೆ ಮತ್ತು ಯುವ ವೇಗವರ್ಧಕ) ಸ್ಥಾಪಿಸಲಾಗುವುದು.

ಸಾರ್ವಜನಿಕ ಸುರಕ್ಷತೆ, ಅಪರಾಧ ತಡೆ ಹಾಗೂ ಸಂಚಾರ ನಿರ್ವಹಣೆಯನ್ನು ಬಲಪಡಿಸಲು ಕಲಬುರಗಿ ನಗರ ಮತ್ತು ತಾಲೂಕು ಕೇಂದ್ರಗಳಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಸಿಸಿಟಿವಿ ವ್ಯವಸ್ಥೆ ಅಳವಡಿಸಲಾಗುವುದು. ತ್ಯಾಜ್ಯ ನಿರ್ವಹಣೆ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ನಾಗರಿಕ ಸೇವೆಗಳ ಮೇಲ್ವಿಚಾರಣೆಗೂ ಈ ವ್ಯವಸ್ಥೆಯನ್ನು ಬಳಸಲಾಗುವುದು.

ಪ್ರವಾಸೋದ್ಯಮ, ಪಾರಂಪರಿಕ ತಾಣಗಳ ಅಭಿವೃದ್ಧಿ

ಕಲಬುರಗಿ ಕೋಟೆ, ಶರಣಬಸವೇಶ್ವರ ದೇವಸ್ಥಾನ, ಖ್ವಾಜಾ ಬಂದೇ ನವಾಜ್ ದರ್ಗಾ, ಬುದ್ಧ ವಿಹಾರ, ಮಳಖೇಡ, ಸನ್ನತಿ ಹಾಗೂ ಗಾಣಗಾಪುರವನ್ನು ಸಂಪರ್ಕಿಸುವ ಪುಣ್ಯಯಾತ್ರಾ ಪ್ರವಾಸಿ ವಲಯ ಅಭಿವೃದ್ಧಿಪಡಿಸಲಾಗುವುದು.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನದ ಮೂಲಕ ಮಳಖೇಡ, ನಾಗಾವಿ, ಕಾಳಗಿ ಮತ್ತು ಸನ್ನತಿ ಸೇರಿದಂತೆ ಹಲವು ಪಾರಂಪರಿಕ ತಾಣಗಳ ಪುನರಾಭಿವೃದ್ಧಿ ಕೈಗೊಳ್ಳಲಾಗುತ್ತಿದೆ. ಗಾಣಗಾಪುರವನ್ನು ಮೊದಲ ಹಂತದಲ್ಲಿ ₹50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಬಸವಣ್ಣನವರ ತತ್ವಗಳು ಹಾಗೂ ವಚನ ಪರಂಪರೆಯನ್ನು ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಕಲಬುರಗಿಯಲ್ಲಿ ವಚನ ಮಂಟಪ ಸ್ಥಾಪಿಸಲಾಗುವುದು ಎಂದು ಘೋಷಿಸಲಾಯಿತು.

ಕ್ರೀಡಾ ಮೂಲಸೌಕರ್ಯಕ್ಕೆ ಹೊಸ ರೂಪ

ಮುಂದಿನ ಎರಡು ವರ್ಷಗಳಲ್ಲಿ ಚಂದ್ರಶೇಖರ ಪಾಟೀಲ ಕ್ರೀಡಾಂಗಣವನ್ನು ಆಧುನಿಕ ಕ್ರೀಡಾ ಮೂಲಸೌಕರ್ಯದೊಂದಿಗೆ ಸಮಗ್ರವಾಗಿ ಪುನರಾಭಿವೃದ್ಧಿಪಡಿಸಲಾಗುವುದು. ಇಡೀ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಅನುಕೂಲವಾಗುವಂತೆ ಕ್ರಿಕೆಟ್ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯೊಂದಿಗೆ ಸರ್ಕಾರ ಒಡಂಬಡಿಕೆ ಮಾಡಿಕೊಳ್ಳಲಿದೆ.

ಕ್ರೀಡಾ ಶ್ರೇಷ್ಠತೆಯನ್ನು ಉತ್ತೇಜಿಸುವ ಉದ್ದೇಶದಿಂದ ಕಲಬುರಗಿ ತಾಲೂಕಿನ ಹಡಗಿಲ ಹಾರುತಿ ಗ್ರಾಮದಲ್ಲಿ ಕ್ರೀಡಾ ನಗರ ಸ್ಥಾಪಿಸಲಾಗುವುದು. ವಿವಿಧ ಕ್ರೀಡೆಗಳಿಗೆ ಅಂತರರಾಷ್ಟ್ರೀಯ ಮಟ್ಟದ ಒಳಾಂಗಣ ಮತ್ತು ಹೊರಾಂಗಣ ಸೌಲಭ್ಯಗಳನ್ನು ಇಲ್ಲಿ ಅಭಿವೃದ್ಧಿಪಡಿಸಲಾಗುವುದು.

ಎರಡು ವರ್ಷಗಳಲ್ಲಿ ಕೋಟಿ ಗಿಡಗಳ ನೆಡುವಿಕೆ

ಕಲ್ಯಾಣ ಕರ್ನಾಟಕದ ಹಸಿರು ಹೊದಿಕೆಯನ್ನು ಹೆಚ್ಚಿಸಿ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸುವ ಸಾಮರ್ಥ್ಯವನ್ನು ಬಲಪಡಿಸಲು ಮುಂದಿನ ಎರಡು ವರ್ಷಗಳಲ್ಲಿ ಪ್ರದೇಶದಾದ್ಯಂತ ಕೋಟಿ ವೃಕ್ಷ ಅಭಿಯಾನ ಕೈಗೊಳ್ಳಲಾಗುವುದು. ಇದರಡಿ ಒಂದು ಕೋಟಿ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಗುರಿ ಹೊಂದಲಾಗಿದೆ.

ಕಲ್ಯಾಣ ಕರ್ನಾಟಕದ ಆರ್ಥಿಕ ಅಭಿವೃದ್ಧಿಯಿಂದ ಹಿಡಿದು ಆರೋಗ್ಯ, ನಗರ ಮೂಲಸೌಕರ್ಯ, ತಂತ್ರಜ್ಞಾನ, ಪ್ರವಾಸೋದ್ಯಮ, ಕ್ರೀಡೆ ಹಾಗೂ ಪರಿಸರ ಸಂರಕ್ಷಣೆಯವರೆಗೆ ವಿವಿಧ ಕ್ಷೇತ್ರಗಳನ್ನು ಒಳಗೊಂಡಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಹತ್ತು ಪ್ರಮುಖ ಘೋಷಣೆಗಳನ್ನು ಮಾಡಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande