
ಬೆಳಗಾವಿ, 15 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:
ಗಣೇಶ ಹಬ್ಬದ ಸಂಭ್ರಮದಲ್ಲಿದ್ದ ಬೆಳಗಾವಿಯಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಒಂದೇ ಕುಟುಂಬದ ನಾಲ್ವರು ಸಜೀವ ದಹನಗೊಂಡಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯ ಚಾವ್ಹಾಟ್ ಗಲ್ಲಿಯಲ್ಲಿ ನಡೆದಿದೆ.
ತಡರಾತ್ರಿ ಮನೆಯಲ್ಲಿದ್ದ ಎಲ್ಲರೂ ನಿದ್ರಿಸುತ್ತಿದ್ದ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದ್ದು, ಕ್ಷಣಾರ್ಧದಲ್ಲೇ ಇಡೀ ಮನೆಗೆ ವ್ಯಾಪಿಸಿದೆ. ಬೆಂಕಿಯ ತೀವ್ರತೆಗೆ ಮನೆಯಲ್ಲಿದ್ದ ವಸ್ತುಗಳೆಲ್ಲ ಸುಟ್ಟು ಭಸ್ಮವಾಗಿವೆ. ಮನೆಯೊಳಗಿದ್ದವರು ಹೊರಬರಲು ಸಾಧ್ಯವಾಗದೆ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಮೃತಪಟ್ಟಿದ್ದಾರೆ.
ಮೃತರನ್ನು ಗಜಾನನ ರಾಜಾರಾಮ ದಮೋನೆ (65), ಶಾರದಾ ದಮೋನೆ (45), ಭಾರತಿ ರಾಜಾರಾಮ ದಮೋನೆ (50) ಹಾಗೂ ರೋಷನ್ ಗಜಾನನ ದಮೋನೆ (21) ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಪ್ರಿಯಾ ಗಜಾನನ ದಮೋನೆ (28) ಹಾಗೂ ಗಂಗಾ ಗಜಾನನ ದಮೋನೆ (25) ತೀವ್ರ ಸುಟ್ಟ ಗಾಯಗಳಿಗೆ ಒಳಗಾಗಿದ್ದು, ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರ ಸ್ಥಿತಿಯೂ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಮೃತ ಕುಟುಂಬ ದಿನಗೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಮಾರ್ಕೆಟ್ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಗ್ನಿ ಅವಘಡದ ಕಾರಣ ಹಾಗೂ ಘಟನೆಯ ಕುರಿತು ಮುಂದಿನ ತನಿಖೆ ಕೈಗೊಂಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.