
ಶ್ರೀನಗರ, 12 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಗಡಿಯಾಚೆಗಿನ ಭಯೋತ್ಪಾದಕ ಸಂಚಿಗೆ ಸಂಬಂಧಿಸಿದ ತನಿಖೆಯ ಭಾಗವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶನಿವಾರ ಕಾಶ್ಮೀರದ ಏಳು ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.
ಅಧಿಕಾರಿಗಳ ಪ್ರಕಾರ, ಕುಲ್ಗಾಮ್‌ನಲ್ಲಿ ಎರಡು, ಬಂಡಿಪೋರಾದಲ್ಲಿ ಮೂರು ಹಾಗೂ ಸೋಪೋರ್‌ನಲ್ಲಿ ಎರಡು ಸ್ಥಳಗಳಲ್ಲಿ ಎನ್‌ಐಎ ತಂಡಗಳು ಏಕಕಾಲದಲ್ಲಿ ಶೋಧ ನಡೆಸಿವೆ. ಕಾರ್ಯಾಚರಣೆಗೆ ಸ್ಥಳೀಯ ಪೊಲೀಸರು ಹಾಗೂ ಭದ್ರತಾ ಪಡೆಗಳು ಅಗತ್ಯ ಸಹಕಾರ ಒದಗಿಸಿವೆ.
ಪಾಕಿಸ್ತಾನದಲ್ಲಿರುವ ಶಂಕಿತ ಭಯೋತ್ಪಾದಕ ನಿರ್ವಾಹಕರು ಹಾಗೂ ಸ್ಥಳೀಯ ಭೂಗತ ಬೆಂಬಲಿಗರ ಜಾಲದ ಪಾತ್ರದ ಕುರಿತು ತನಿಖೆ ನಡೆಸಲಾಗುತ್ತಿದೆ. ಗಡಿಯಾಚೆಯಿಂದ ಒಳನುಸುಳುವ ಭಯೋತ್ಪಾದಕರಿಗೆ ಸ್ಥಳೀಯವಾಗಿ ಅಗತ್ಯ ಸೌಲಭ್ಯ, ಸಂಪನ್ಮೂಲ ಹಾಗೂ ಇತರ ನೆರವು ಒದಗಿಸಲಾಗುತ್ತಿತ್ತೆ ಎಂಬುದನ್ನು ತನಿಖಾ ಸಂಸ್ಥೆ ಪರಿಶೀಲಿಸುತ್ತಿದೆ.
ಸ್ಥಳೀಯ ಮಟ್ಟದಲ್ಲಿ ಭಯೋತ್ಪಾದಕರಿಗೆ ಯಾವ ರೀತಿಯ ನೆರವು ನೀಡಲಾಗಿದೆ ಮತ್ತು ಈ ಜಾಲಕ್ಕೆ ಸಂಬಂಧಿಸಿದ ಇತರ ವ್ಯಕ್ತಿಗಳ ಪಾತ್ರವೇನು ಎಂಬುದನ್ನು ಪತ್ತೆಹಚ್ಚಲು ಎನ್‌ಐಎ ಅಧಿಕಾರಿಗಳು ಮುಂದಾಗಿದ್ದಾರೆ.
ಈ ಪ್ರಕರಣವು ಮೂಲತಃ ಶ್ರೀನಗರದ ಜಕೂರಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಸಂಖ್ಯೆ 0024/2026ರಿಂದ ಆರಂಭವಾಗಿತ್ತು. ಬಳಿಕ ಎನ್‌ಐಎ ಪ್ರಕರಣವನ್ನು ತನ್ನ ವಶಕ್ಕೆ ಪಡೆದು ಆರ್‌ಸಿ-02/2026/ಎನ್‌ಐಎ/ಜಮ್ಮು ಎಂದು ಮರುದಾಖಲಿಸಿತ್ತು.
ಪ್ರಕರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ, 1967ರ ಕಲಂ 23, ಶಸ್ತ್ರಾಸ್ತ್ರ ಕಾಯ್ದೆ, 1959ರ ಕಲಂ 7 ಮತ್ತು 25 ಹಾಗೂ ಸ್ಫೋಟಕ ವಸ್ತುಗಳ ಕಾಯ್ದೆ, 1908ರ ಕಲಂ 4ರ ಅಡಿಯಲ್ಲಿ ಆರೋಪಗಳನ್ನು ದಾಖಲಿಸಲಾಗಿದೆ.
ಶೋಧ ಕಾರ್ಯಾಚರಣೆ ವೇಳೆ ಯಾವುದೇ ವಸ್ತುಗಳು ಅಥವಾ ದಾಖಲೆಗಳು ಪತ್ತೆಯಾಗಿವೆಯೇ ಎಂಬ ಕುರಿತು ಈವರೆಗೆ ಅಧಿಕೃತವಾಗಿ ವಿವರಗಳು ಹೊರಬಿದ್ದಿಲ್ಲ. ಶೋಧ ಹಾಗೂ ಸಂಭವನೀಯ ವಶಪಡಿಸಿಕೊಳ್ಳುವಿಕೆಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾದ ಬಳಿಕ ಪ್ರಕರಣದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.