ಯಡಿಯೂರು ವ್ಯಾಪ್ತಿಯ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಜಿಬಿಎ ಆಯುಕ್ತ ಮಹೇಶ್ವರ್ ರಾವ್ ಭೇಟಿ
ಬೆಂಗಳೂರು, 12 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಹಾಗೂ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಆಯುಕ್ತ ಡಾ. ರಾಜೇಂದ್ರ ಕೆ.ವಿ. ಅವರು ಇಂದು ಪಶ್ಚಿಮ ನಗರ ಪಾಲಿಕೆಯ ಯಡಿಯೂರು ವಿಭಾಗದ ವ್ಯಾಪ್ತಿಯಲ್ಲಿರುವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸು
Visit


ಬೆಂಗಳೂರು, 12 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಹಾಗೂ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಆಯುಕ್ತ ಡಾ. ರಾಜೇಂದ್ರ ಕೆ.ವಿ. ಅವರು ಇಂದು ಪಶ್ಚಿಮ ನಗರ ಪಾಲಿಕೆಯ ಯಡಿಯೂರು ವಿಭಾಗದ ವ್ಯಾಪ್ತಿಯಲ್ಲಿರುವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಜೈವಿಕ ಅನಿಲ ಘಟಕ ಹಾಗೂ ಯಡಿಯೂರು ಕೆರೆ ಏರಿಯಲ್ಲಿರುವ ಸಾವಯವ ಗೊಬ್ಬರ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪಾಲಿಕೆಯ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಘನತ್ಯಾಜ್ಯವನ್ನು ಜೈವಿಕ ಅನಿಲ ಘಟಕದಲ್ಲಿ ಸಂಸ್ಕರಿಸಲಾಗುತ್ತಿದ್ದು, ಅದರಿಂದ ಉತ್ಪತ್ತಿಯಾಗುವ ಅನಿಲದ ಮೂಲಕ 106 ಉದ್ಯಾನಗಳಿಗೆ ಅಗತ್ಯವಿರುವ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ತ್ಯಾಜ್ಯ ಸಂಸ್ಕರಣೆಯ ಸಂದರ್ಭದಲ್ಲಿ ಉತ್ಪತ್ತಿಯಾಗುವ ಕಲ್ಮಷಯುಕ್ತ ದ್ರವ ಪದಾರ್ಥವನ್ನು ಯಡಿಯೂರು ಕೆರೆ ಏರಿಯಲ್ಲಿರುವ ಸಾವಯವ ಗೊಬ್ಬರ ಉತ್ಪಾದನಾ ಘಟಕಕ್ಕೆ ಸರಬರಾಜು ಮಾಡಲಾಗುತ್ತಿದೆ.

ಅಲ್ಲಿ ಈ ದ್ರವವನ್ನು ಸಂಸ್ಕರಿಸಿ ಸಾವಯವ ಗೊಬ್ಬರ ತಯಾರಿಸಲು ಬಳಸಲಾಗುತ್ತಿದ್ದು, ಈ ಮೂಲಕ ಉತ್ಪಾದನೆಯಾಗುವ ಗೊಬ್ಬರವನ್ನು 256 ಉದ್ಯಾನಗಳ ನಿರ್ವಹಣೆಗೆ ಬಳಸಲಾಗುತ್ತಿದೆ.

ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಮುಖ್ಯ ಆಯುಕ್ತರು ಹಾಗೂ ಆಯುಕ್ತರು, ಜೈವಿಕ ಅನಿಲ ಉತ್ಪಾದನಾ ಘಟಕದಲ್ಲಿ ಸ್ವಚ್ಛತೆ, ವ್ಯವಸ್ಥೆ ಹಾಗೂ ದಾಖಲೆಗಳ ನಿರ್ವಹಣೆಯನ್ನು ಸಮರ್ಪಕವಾಗಿ ಮುಂದುವರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಯಡಿಯೂರು ಕೆರೆ ಪರಿಶೀಲನೆ

ಬಳಿಕ ಯಡಿಯೂರು ಕೆರೆ ಏರಿಗೆ ಭೇಟಿ ನೀಡಿದ ಅಧಿಕಾರಿಗಳು, ವಲಸೆ ಹಕ್ಕಿಗಳ ಸಂತಾನೋತ್ಪತ್ತಿಗೆ ಪೂರಕವಾಗುವಂತೆ ‘ಬಾನಾಡಿ ಮರಳಿ ಬಾ ಗೂಡಿಗೆ’ ಯೋಜನೆಯಡಿ ಕೈಗೊಂಡಿರುವ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಇದೇ ವೇಳೆ ವನ್ಯಪ್ರಾಣಿಗಳ ಚಿಕಿತ್ಸಾ ಕೇಂದ್ರದ ಬಗ್ಗೆಯೂ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಅನಕೃ ಸಮುದಾಯ ಭವನ ವೀಕ್ಷಣೆ

ಯಡಿಯೂರು ಕೆರೆ ಸಮೀಪದಲ್ಲಿರುವ ಅನಕೃ ಸಮುದಾಯ ಭವನಕ್ಕೂ ಭೇಟಿ ನೀಡಿದ ಅವರು, ಅಲ್ಲಿನ ಡಾ. ಪುನೀತ್ ರಾಜ್‌ಕುಮಾರ್ ಸಭಾಂಗಣದ ನಿರ್ವಹಣೆ ಕುರಿತು ಮಾಹಿತಿ ಪಡೆದರು. ಸಭಾಂಗಣದಲ್ಲಿನ ಆಸನ ವ್ಯವಸ್ಥೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪರಿಶೀಲಿಸಿ ಅಗತ್ಯ ಸೂಚನೆಗಳನ್ನು ನೀಡಿದರು.

ನವತಾರೆ ಬ್ಯಾಡ್ಮಿಂಟನ್ ಅಕಾಡೆಮಿ ಪರಿಶೀಲನೆ

ನಂತರ ಜೈವಿಕ ಅನಿಲ ಉತ್ಪಾದನಾ ಘಟಕದ ಸಮೀಪದಲ್ಲಿರುವ ನವತಾರೆ ಬ್ಯಾಡ್ಮಿಂಟನ್ ಅಕಾಡೆಮಿಗೆ ಭೇಟಿ ನೀಡಿದ ಮುಖ್ಯ ಆಯುಕ್ತರು ಹಾಗೂ ಆಯುಕ್ತರು, ಅಲ್ಲಿನ ವಿವಿಧ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಮಾಜಿ ಅಧ್ಯಕ್ಷರು ಹಾಗೂ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ರಮೇಶ್ ಎನ್.ಆರ್., ಮುಖ್ಯ ಅಭಿಯಂತರ ಜಯಶಂಕರ್, ಡಿಜಿಎಂ ಮಾಳಗಾವಿ, ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande