
ಬೆಂಗಳೂರು, 12 ಸೆಪ್ಟೆಂಬರ್(ಹಿ.ಸ.)
ಆ್ಯಂಕರ್:
ಪ್ರಯಾಣಿಕರನ್ನು ಹೊತ್ತು ಚಲಿಸುತ್ತಿದ್ದ ಬಿಎಂಟಿಸಿ ಬಸ್ನ ಸ್ಟೇರಿಂಗ್ ಚಕ್ರವೇ ಕಿತ್ತುಬಂದು ಚಾಲಕನ ಕೈಗೆ ಬಂದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಅದೃಷ್ಟವಶಾತ್ ಚಾಲಕ ಸಮಯಪ್ರಜ್ಞೆಯಿಂದ ಬಸ್ ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ಯಾವುದೇ ಅಪಘಾತ ಅಥವಾ ಪ್ರಯಾಣಿಕರಿಗೆ ಗಾಯವಾಗಿಲ್ಲ.
ಆರ್.ಆರ್.ನಗರ ಬಿಎಂಟಿಸಿ ಡಿಪೋಗೆ ಸೇರಿದ ಡಿಪೋ–21ರ ಬಸ್ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಬಸ್ ಸಂಚಾರದಲ್ಲಿದ್ದ ವೇಳೆ ಸ್ಟೇರಿಂಗ್ ಬೇರ್ಪಟ್ಟು ಚಾಲಕನ ಕೈಗೆ ಬಂದಿರುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಘಟನೆಯಿಂದ ಬಸ್ನಲ್ಲಿದ್ದ ಪ್ರಯಾಣಿಕರು ಕೆಲಕಾಲ ಆತಂಕಕ್ಕೆ ಒಳಗಾದರು.
ವಿಡಿಯೊ ವೈರಲ್ ಆಗುತ್ತಿದ್ದಂತೆ ಬಿಎಂಟಿಸಿ ಬಸ್ಗಳ ನಿರ್ವಹಣೆ ಹಾಗೂ ಪ್ರಯಾಣಿಕರ ಸುರಕ್ಷತೆ ಕುರಿತು ಸಾರ್ವಜನಿಕರಿಂದ ಪ್ರಶ್ನೆಗಳು ಕೇಳಿಬಂದಿವೆ. ಪ್ರಮುಖ ಯಾಂತ್ರಿಕ ಭಾಗವಾಗಿರುವ ಸ್ಟೇರಿಂಗ್ ದೋಷಪೂರಿತವಾಗಿದ್ದರೂ ಬಸ್ ಅನ್ನು ಸೇವೆಗೆ ನಿಯೋಜಿಸಲಾಗಿತ್ತೇ ಎಂಬ ಅನುಮಾನವೂ ವ್ಯಕ್ತವಾಗಿದೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಎಂಟಿಸಿ ಆಡಳಿತ, ಬಸ್ನ ಯಾಂತ್ರಿಕ ಸ್ಥಿತಿಯನ್ನು ಪರಿಶೀಲಿಸದೆ ಸೇವೆಗೆ ಬಿಡುಗಡೆ ಮಾಡಿರುವ ಬಗ್ಗೆ ತನಿಖೆ ನಡೆಸಲು ಮುಂದಾಗಿದೆ. ಡಿಪೋ ಮ್ಯಾನೇಜರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಬಿಎಂಟಿಸಿ ಅಧಿಕಾರಿಗಳ ಹೇಳಿಕೆ: “ಘಟನೆ ಕುರಿತು ಗಂಭೀರವಾಗಿ ಪರಿಗಣಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಬಸ್ನ ನಿರ್ವಹಣೆ ಮತ್ತು ತಾಂತ್ರಿಕ ತಪಾಸಣೆಯಲ್ಲಿ ಯಾವುದೇ ಲೋಪವಾಗಿದೆಯೇ ಎಂಬುದನ್ನು ಪರಿಶೀಲಿಸಲಾಗುವುದು.
ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಯ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಬಸ್ನ ತಾಂತ್ರಿಕ ಸ್ಥಿತಿ ಸೇರಿದಂತೆ ಅಗತ್ಯ ತಪಾಸಣೆಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಇಂತಹ ಘಟನೆಗಳು ಮರುಕಳಿಸದಂತೆ ನಿಯಮಿತ ನಿರ್ವಹಣೆ, ಸಮಗ್ರ ತಾಂತ್ರಿಕ ಪರಿಶೀಲನೆ ಹಾಗೂ ಗುಣಮಟ್ಟದ ಬಿಡಿಭಾಗಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R