
ನವದೆಹಲಿ, 11 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಅಮೆರಿಕದಲ್ಲಿ ನಡೆದ ಭೀಕರ 9/11 ಭಯೋತ್ಪಾದಕ ದಾಳಿಯ 25ನೇ ವರ್ಷದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದಾಳಿಯಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಭಯೋತ್ಪಾದನೆಯ ಎಲ್ಲ ರೂಪಗಳ ವಿರುದ್ಧ ಭಾರತದ ಅಚಲ ನಿಲುವನ್ನು ಪುನರುಚ್ಚರಿಸಿದ್ದಾರೆ.
ಶುಕ್ರವಾರ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸಂದೇಶ ಪ್ರಕಟಿಸಿರುವ ಮೋದಿ, 2001ರ ಸೆಪ್ಟೆಂಬರ್ 11ರಂದು ನಡೆದ ಭೀಕರ ದಾಳಿಯಿಂದ ಜೀವನವೇ ಬದಲಾದ ಕುಟುಂಬಗಳೊಂದಿಗೆ ಭಾರತ ಒಗ್ಗಟ್ಟಿನಿಂದ ನಿಂತಿದೆ ಎಂದು ತಿಳಿಸಿದ್ದಾರೆ. ಭಯೋತ್ಪಾದನೆ ವಿರುದ್ಧ ನಡೆಯುತ್ತಿರುವ ಎಲ್ಲ ಪ್ರಯತ್ನಗಳಿಗೆ ಭಾರತದ ಬೆಂಬಲವಿದೆ ಎಂದು ಅವರು ಹೇಳಿದ್ದಾರೆ.
ಭಾರತ ಹಲವು ದಶಕಗಳಿಂದ ಗಡಿಯಾಚೆಗಿನ ಭಯೋತ್ಪಾದನೆಯ ಸಂತ್ರಸ್ತ ರಾಷ್ಟ್ರವಾಗಿದ್ದು, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದೆ ಎಂದು ಮೋದಿ ಹೇಳಿದ್ದಾರೆ. ಭಯೋತ್ಪಾದನೆಯ ಬೆದರಿಕೆ ನಿರಂತರವಾಗಿ ಹೊಸ ರೂಪಗಳನ್ನು ಪಡೆಯುತ್ತಿದ್ದರೂ, ಅದರ ಎಲ್ಲ ವಿಧಗಳು ಮತ್ತು ಸ್ವರೂಪಗಳ ವಿರುದ್ಧ ಭಾರತ ತನ್ನ ಹೋರಾಟವನ್ನು ಮುಂದುವರಿಸಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಭೀಕರ 9/11 ದಾಳಿ ನಡೆದು 25 ವರ್ಷಗಳಾದರೂ ಸಂತ್ರಸ್ತರನ್ನು ಸ್ಮರಿಸಿ ಗೌರವಿಸಲಾಗುತ್ತಿದೆ. ಈ ದಾಳಿಯಿಂದ ಶಾಶ್ವತವಾಗಿ ಬದಲಾಗಿರುವ ಕುಟುಂಬಗಳೊಂದಿಗೆ ಈ ಸಂದರ್ಭದಲ್ಲಿ ಮತ್ತೊಮ್ಮೆ ಒಗ್ಗಟ್ಟು ವ್ಯಕ್ತಪಡಿಸುವುದಾಗಿ ಮೋದಿ ತಿಳಿಸಿದ್ದಾರೆ.
2014ರಲ್ಲಿ ಅಮೆರಿಕ ಪ್ರವಾಸ ಕೈಗೊಂಡಿದ್ದ ವೇಳೆ ತಾವು 9/11 ಸ್ಮಾರಕ ಹಾಗೂ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭದ ಕೆಲವು ಛಾಯಾಚಿತ್ರಗಳನ್ನೂ ಪ್ರಧಾನಿ ಹಂಚಿಕೊಂಡಿದ್ದಾರೆ.
2001ರ ಸೆಪ್ಟೆಂಬರ್ 11ರಂದು ಅಮೆರಿಕದಲ್ಲಿ ನಡೆದ ಸರಣಿ ಭಯೋತ್ಪಾದಕ ದಾಳಿಗಳಲ್ಲಿ ಸಾವಿರಾರು ಮಂದಿ ಮೃತಪಟ್ಟಿದ್ದರು. ಈ ದಾಳಿಯ ಬಳಿಕ ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಹೊಸ ದಿಕ್ಕು ದೊರೆತಿತ್ತು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.