
ಬೆಂಗಳೂರು, 01 ಸೆಪ್ಟೆಂಬರ್(ಹಿ.ಸ.)
ಆ್ಯಂಕರ್:
ಬೆಂಗಳೂರು ಹೊರವಲಯದ ನೆಲಮಂಗಲ–ಹಾಸನ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ವಾಹನ ಸವಾರರಿಗೆ ಮತ್ತೊಂದು ದರ ಏರಿಕೆ ಶಾಕ್ ಎದುರಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಸೆಪ್ಟೆಂಬರ್ 1ರಿಂದ ಈ ಮಾರ್ಗದ ಟೋಲ್ ಶುಲ್ಕವನ್ನು ಪರಿಷ್ಕರಿಸಿದ್ದು, ಕಾರು, ಜೀಪ್, ವ್ಯಾನ್, ಲಘು ವಾಣಿಜ್ಯ ವಾಹನ, ಬಸ್, ಟ್ರಕ್ ಸೇರಿದಂತೆ ವಿವಿಧ ಮಾದರಿಯ ವಾಹನಗಳ ಶುಲ್ಕ ಹೆಚ್ಚಳವಾಗಿದೆ.
ನೆಲಮಂಗಲ–ದೇವಿಹಳ್ಳಿ ಎಕ್ಸ್ಪ್ರೆಸ್ವೇ ಪ್ರೈವೇಟ್ ಲಿಮಿಟೆಡ್ ವ್ಯಾಪ್ತಿಯ ಟೋಲ್ಗಳಲ್ಲಿ ಸೆಪ್ಟೆಂಬರ್ 1ರ ಮಧ್ಯರಾತ್ರಿಯಿಂದ ಪರಿಷ್ಕೃತ ದರ ಜಾರಿಗೆ ಬಂದಿದೆ. ದೊಡ್ಡಕರೇನಹಳ್ಳಿ ಹಾಗೂ ಕಾರಬೈಲು ಟೋಲ್ ಪ್ಲಾಜಾಗಳಲ್ಲಿಯೂ ಶುಲ್ಕ ಹೆಚ್ಚಳ ಮಾಡಲಾಗಿದೆ.
ಕಾರು, ಜೀಪ್, ವ್ಯಾನ್ ಹಾಗೂ ಲಘು ವಾಹನಗಳಿಗೆ ಫಾಸ್ಟ್ಟ್ಯಾಗ್ ಮೂಲಕ ಏಕಮುಖ ಸಂಚಾರದ ಶುಲ್ಕ ₹60ಕ್ಕೆ ನಿಗದಿಪಡಿಸಲಾಗಿದೆ. ಅದೇ ದಿನದ ಮರು ಸಂಚಾರಕ್ಕಾಗಿ ಇರುವ ರಿಟರ್ನ್ ಪಾಸ್ ಶುಲ್ಕವನ್ನು ₹85ರಿಂದ ₹90ಕ್ಕೆ ಹೆಚ್ಚಿಸಲಾಗಿದೆ.
ಲಘು ವಾಣಿಜ್ಯ ಹಾಗೂ ಸರಕು ಸಾಗಣೆ ವಾಹನಗಳಿಗೆ ಏಕಮುಖ ಸಂಚಾರದ ಶುಲ್ಕ ₹100ರಿಂದ ₹105ಕ್ಕೆ ಏರಿಕೆಯಾಗಿದ್ದು, ದಿನದ ಸಂಚಾರದ ಶುಲ್ಕ ₹155ಕ್ಕೆ ನಿಗದಿಯಾಗಿದೆ.
ಬಸ್ ಮತ್ತು ಟ್ರಕ್ಗಳಿಗೆ ಏಕಮುಖ ಸಂಚಾರಕ್ಕೆ ₹205 ಹಾಗೂ ದಿನದ ಸಂಚಾರಕ್ಕೆ ₹310 ಶುಲ್ಕ ವಿಧಿಸಲಾಗುತ್ತದೆ. ಮಲ್ಟಿ ಆಕ್ಸಲ್ ಮತ್ತು ಬೃಹತ್ ವಾಹನಗಳಿಗೆ ಏಕಮುಖ ಸಂಚಾರಕ್ಕೆ ₹330 ಹಾಗೂ ದಿನದ ಸಂಚಾರಕ್ಕೆ ₹495 ಶುಲ್ಕ ನಿಗದಿಪಡಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಕಾರ, ಟೋಲ್ ಶುಲ್ಕ ಪರಿಷ್ಕರಣೆ ವಾರ್ಷಿಕ ದರ ಪರಿಷ್ಕರಣೆಯ ಭಾಗವಾಗಿದೆ. ಹಣದುಬ್ಬರ ಹಾಗೂ ಹೆದ್ದಾರಿ ನಿರ್ವಹಣೆ ಮತ್ತು ದುರಸ್ತಿ ವೆಚ್ಚದಲ್ಲಿ ಉಂಟಾಗಿರುವ ಏರಿಕೆಯನ್ನು ಪರಿಗಣಿಸಿ ಶುಲ್ಕ ಪರಿಷ್ಕರಿಸಲಾಗಿದೆ. ಹೆದ್ದಾರಿಯ ನಿರ್ವಹಣೆ ಹಾಗೂ ದುರಸ್ತಿಗೆ ಹೆಚ್ಚುವರಿ ಹಣಕಾಸಿನ ಅಗತ್ಯವಿರುವ ಹಿನ್ನೆಲೆಯಲ್ಲಿ ದರ ಏರಿಕೆ ಮಾಡಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.
ಟೋಲ್ ದರ ಏರಿಕೆಗೆ ವಾಹನ ಸವಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ, ಪೆಟ್ರೋಲ್ ಮತ್ತು ಡೀಸೆಲ್ ದರಗಳಿಂದ ಜನಸಾಮಾನ್ಯರು ಸಂಕಷ್ಟದಲ್ಲಿದ್ದಾರೆ. ಇದರ ನಡುವೆ ಟೋಲ್ ಶುಲ್ಕವನ್ನೂ ಹೆಚ್ಚಿಸಿರುವುದು ವಾಹನ ಸವಾರರ ಮೇಲಿನ ಹೆಚ್ಚುವರಿ ಹೊರೆಯಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಪ್ರತಿನಿತ್ಯದ ಖರ್ಚು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಟೋಲ್ ದರ ಏರಿಕೆಯಿಂದ ಪ್ರಯಾಣ ವೆಚ್ಚ ಮತ್ತಷ್ಟು ಹೆಚ್ಚಾಗಿದೆ. ರಾಷ್ಟ್ರೀಯ ಹೆದ್ದಾರಿಯನ್ನು ಬಳಸುವ ಸಾಮಾನ್ಯ ವಾಹನ ಸವಾರರ ಸಮಸ್ಯೆಯನ್ನು ಪ್ರಾಧಿಕಾರ ಪರಿಗಣಿಸಬೇಕು,” ಎಂದು ಸವಾರರು ಒತ್ತಾಯಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R