



ಬಳ್ಳಾರಿ, 09 ಆಗಸ್ಟ್ (ಹಿ.ಸ.)
ಆ್ಯಂಕರ್ : ಒತ್ತಡದ ಬದುಕಿನಲ್ಲಿ ಅರಳಿದ, ಪ್ರೀತಿಯ ಪರಿಮಳವನ್ನು ತುಂಬಿದ ಭಾವಗಳು ಕಾವ್ಯದಲ್ಲಿ ಒಡಮೂಡಿವೆ ಎಂದು ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝಬೇರ್.ಎನ್ ಅವರು ಅಭಿಪ್ರಾಯಪಟ್ಟರು.
ಭಾನುವಾರ ನಗರದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ಬಸವ ಪಬ್ಲಿಕೇಷನ್ಸ್, ಸಂಡೂರು ಇವರ ಸಹಯೋಗದಲ್ಲಿ ಆಯೋಜಿಸಿದ್ದ ಕವಯಿತ್ರಿ ಟಿ. ಲೀಲಾವತಿ (ಸಾಯಿಲೀಲಾ) ಅವರ 'ಒಲವು ಮೂಡಿದಾಗ' ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉದ್ಯೋಗದ ನಡುವೆ ಸಾಹಿತ್ಯದ ಪ್ರೀತಿಯನ್ನು ಬೆಳೆಸಿಕೊಂಡಿರುವ ಲೀಲಾವತಿಯವರು ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ಕೊಡುಗೆ ನೀಡಲಿ ಎಂದು ತಿಳಿಸಿದರು.
‘ಒಲವು ಮೂಡಿದಾಗ’ ಕವನ ಸಂಕಲನವನ್ನು ಲೋಕಾರ್ಪಣೆ ಮಾಡಿದ ಕುರುಗೋಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಾಂತಲಾ ಅವರು ಮಾತನಾಡಿ, ಈ ಕವನ ಸಂಕಲನದ ಕವನಗಳೆಲ್ಲವೂ ಸಹ ನಮ್ಮ ಸುತ್ತಮುತ್ತಲಿನ ಘಟನೆಗಳಿಗೆ ಸಂಬಂಧಿಸಿವೆ. ಕೌಟುಂಬಿಕ ಸಾಮರಸ್ಯ, ಒಲವು, ಸಾಮಾಜಿಕ ಕಳಕಳಿ ಕವನಗಳ ಜೀವಾಳವಾಗಿದ್ದು, ಕವಯತ್ರಿ ಲೀಲಾವತಿಯವರ ಅವರ ಸಾಹಿತ್ಯದ ಅಭಿರುಚಿ ಹೀಗೆ ಮುಂದುವರೆಯಲಿ ಎಂದು ಶುಭ ಹಾರೈಸಿದರು.
ಡಾ. ವೇಣುಗೋಪಾಲ ಎನ್.ಎಸ್ ಕೃತಿ ಕುರಿತು ಮಾತನಾಡಿ, ಜ್ಞಾನದ ಹಸಿವನ್ನು ಹೊಂದಿದ ಪ್ರೀತಿಯ ವಿದ್ಯಾರ್ಥಿನಿ ಲೀಲಾವತಿ ಅವರು 'ಒಲವು ಮೂಡಿದಾಗ' ಎಂಬ ಕವನ ಸಂಕಲನವನ್ನು ಹೊರ ತರುತ್ತಿರುವುದು ತುಂಬಾ ಸಂತೋಷದ ಸಂಗತಿ. ಉದ್ಯೋಗ ಮತ್ತು ಸಂಸಾರಗಳ ನಡುವೆ ಸಾಹಿತ್ಯದ ಸದಭಿರುಚಿಯ ಸಹವಾಸ. ಇದರ ಪ್ರತಿಫಲವೇ ಈ ಕವನ ಸಂಕಲನ ಮೂಡಿಬಂದಿದೆ ಎಂದು ಹೇಳಿದರು.
ಇದರಲ್ಲಿ 35 ಕವನಗಳಿದ್ದು ಒಲುಮೆ, ಪುಸ್ತಕ ಪ್ರೀತಿ, ದೈವದ ಸ್ಮರಣೆ, ಹಸಿವು, ವಿಧಿ, ಸ್ನೇಹ, ವ್ಯಕ್ತಿಚಿತ್ರಣ, ನಿರಾಸೆ, ಛಲ ಮುಂತಾದ ಭಾವಗಳನ್ನು ಒಳಗೊಂಡ ಕವನಗಳು ಇವೆ. ಒಲುಮೆಗೆ ಸಂಬಂಧಿಸಿದ ಕವನಗಳೇ ಹೆಚ್ಚಾಗಿರುವುದರಿಂದ ಕವನ ಸಂಕಲನಕ್ಕೆ 'ಒಲವು ಮೂಡಿದಾಗ 'ಎಂಬ ಶೀರ್ಷಿಕೆ ಸೂಕ್ತವೆನಿಸಿದೆ. ಇಲ್ಲಿಯ ಕವನಗಳು ಅತ್ಯಂತ ಶಕ್ತಿಯುತವಾಗಿದ್ದು, ಆರಂಭದ ಕವನ ಸಂಕಲನ ಇದಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಬುದ್ಧವಾದ ಕವನಗಳು ಈಕೆಯಿಂದ ಹೊರಹೊಮ್ಮಲಿ, ನಾಡಿನ ಎಲ್ಲರ ಮನೆ- ಮನಗಳಲ್ಲಿ ಈ ಸಾಹಿತ್ಯದ ಸುಗಂಧ ಹರಡಲಿ ಎಂದು ಶುಭ ಹಾರೈಸಿದರು.
ಕವಿಯತ್ರಿ ಟಿ. ಲೀಲಾವತಿ ಮಾತನಾಡಿ 'ಸಾಯಿಲೀಲಾ' ಕಾವ್ಯನಾಮದಲ್ಲಿ ರಚಿಸಿದ ನನ್ನ ಮೊದಲ ಕವನ ಸಂಕಲನ ಒಲವು ಮೂಡಿದಾಗ ಪ್ರಕಟಗೊಳ್ಳುತ್ತಿರುವುದು ಸಂತಸದ ಸಂಗತಿ. ಈ ಕೃತಿಯ ಪ್ರಕಟಣೆಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಾ. ನಿಷ್ಠಿ ರುದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದ್ದು ಸಾಹಿತ್ಯ ಸಂಸ್ಕೃತಿಯ ಸಂವರ್ಧನೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ, ಇಂತಹ ಕಾರ್ಯಕ್ರಮಗಳ ಆಯೋಜನೆಯ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶವನ್ನು ನೀಡುವ ವೇದಿಕೆಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ, ಜಿಲ್ಲಾ ಪರಿಶಿಷ್ಟ ವರ್ಗಗಳ ಅಧಿಕಾರಿ ಶಾಶು, ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ರಮೇಶ ಬುಜ್ಜಿ, ಮಹಾನಗರ ಪಾಲಿಕೆ ಸದಸ್ಯ ಹನುಮಂತಪ್ಪ, ಮಠಂ ತಿಪ್ಪೇಸ್ವಾಮಿ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು, ಸಾಹಿತಿಗಳು ಮತ್ತು ಕನ್ನಡ ಅಭಿಮಾನಿಗಳು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಡಾ. ತಿಪ್ಪೇರುದ್ರ ಸಂಡೂರು ನಿರೂಪಿಸಿದರು. ನಯನ ಪ್ರಾರ್ಥಿಸಿದರು, ರೇಣುಕಾ ಎಸ್. ಸ್ವಾಗತಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್