ಕಠಿಣ ಪರಿಶ್ರಮ, ಸಮಯ ಪ್ರಜ್ಞೆಯೇ ಯಶಸ್ಸಿನ ಮೂಲ: ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ, 09 ಆಗಸ್ಟ್ (ಹಿ.ಸ.): ಆ್ಯಂಕರ್: ಜೀವನದಲ್ಲಿ ಸಾಧನೆ ಮಾಡಲು ಕಠಿಣ ಪರಿಶ್ರಮ, ಸಮಯ ಪ್ರಜ್ಞೆ ಹಾಗೂ ನಿರಂತರ ತರಬೇತಿ ಅತ್ಯಗತ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಹುಬ್ಬಳ್ಳಿಯ ಆರ್‌.ಎನ್‌. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹುಬ್ಬಳ್ಳಿ ಕನಕ ನೌಕರರ ಬಳಗದ ವತ
ಬೊಮ್ಮಾಯಿ


ಹುಬ್ಬಳ್ಳಿ, 09 ಆಗಸ್ಟ್ (ಹಿ.ಸ.):

ಆ್ಯಂಕರ್:

ಜೀವನದಲ್ಲಿ ಸಾಧನೆ ಮಾಡಲು ಕಠಿಣ ಪರಿಶ್ರಮ, ಸಮಯ ಪ್ರಜ್ಞೆ ಹಾಗೂ ನಿರಂತರ ತರಬೇತಿ ಅತ್ಯಗತ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಹುಬ್ಬಳ್ಳಿಯ ಆರ್‌.ಎನ್‌. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹುಬ್ಬಳ್ಳಿ ಕನಕ ನೌಕರರ ಬಳಗದ ವತಿಯಿಂದ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಾಧನೆ ಸುಲಭವಾಗಿ ಒಲಿಯುವುದಿಲ್ಲ. ನಿರಂತರ ಪರಿಶ್ರಮ, ನಿಯಮಿತ ತರಬೇತಿ ಹಾಗೂ ಶ್ರದ್ಧೆಯಿಂದ ಮಾತ್ರ ದೊಡ್ಡ ಗುರಿಗಳನ್ನು ತಲುಪಲು ಸಾಧ್ಯ. ಸಾಧಕರ ಬೆಳವಣಿಗೆಯಲ್ಲಿ ತಾಯಿಯ ಆಶೀರ್ವಾದ, ಪ್ರೇರಣೆ ಹಾಗೂ ಕುಟುಂಬದ ಪ್ರೋತ್ಸಾಹ ಮಹತ್ವದ ಪಾತ್ರ ವಹಿಸುತ್ತದೆ ಎಂದರು.

ಕನಕದಾಸರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕಿನ ಹಾದಿ ಸುಗಮವಾಗುತ್ತದೆ. ಕಷ್ಟಪಟ್ಟು ದುಡಿಯುವ ಪ್ರವೃತ್ತಿ ಮತ್ತು ದುಡಿಮೆಯಲ್ಲೇ ದೇವರನ್ನು ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾಯಕ ವರ್ಗ ದೇಶದ ಬೆನ್ನೆಲುಬು

ಕನಕದಾಸರು, ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ಸುಭಾಷ್‌ಚಂದ್ರ ಬೋಸ್ ಹಾಗೂ ಭಗತ್‌ಸಿಂಗ್ ಅವರ ಜೀವನವನ್ನು ಉದಾಹರಿಸಿದ ಬೊಮ್ಮಾಯಿ, ಅಸಾಧ್ಯವನ್ನು ಸಾಧ್ಯವಾಗಿಸುವ ಸಾಹಸ ಹಾಗೂ ಕಠಿಣ ಪರಿಶ್ರಮದಿಂದಲೇ ಇತಿಹಾಸ ಸೃಷ್ಟಿಸಲು ಸಾಧ್ಯ ಎಂದರು.

ಮಳೆ, ಗಾಳಿ, ಬಿಸಿಲಿನ ನಡುವೆಯೂ ಕಾಯಕದಲ್ಲಿ ತೊಡಗಿರುವ ಕುರಿಗಾಹಿಗಳು ಸಮಾಜಕ್ಕೆ ಕಾಯಕ ಪ್ರಜ್ಞೆ ಕಲಿಸಿದ್ದಾರೆ. ರೈತರು, ಕುರಿಗಾಹಿಗಳು, ಮೀನುಗಾರರು ಹಾಗೂ ಕೋಳಿ ಸಾಕಣೆದಾರರು ದೇಶದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ದುಡಿಯುವ ವರ್ಗದ ಏಳಿಗೆಗೆ ಸರ್ಕಾರ ಮತ್ತು ಸಮಾಜ ಬೆಂಬಲವಾಗಿ ನಿಲ್ಲಬೇಕು ಎಂದು ಹೇಳಿದರು.

ತಮ್ಮ ಅವಧಿಯಲ್ಲಿ ಸುಮಾರು 236 ಕೋಟಿ ರೂ. ವೆಚ್ಚದಲ್ಲಿ ಅಮೃತ ಕುರಿಗಾಹಿ ಯೋಜನೆ ರೂಪಿಸಿ, ರಾಜ್ಯದ ಸುಮಾರು 20 ಸಾವಿರ ಕುರಿಗಾಹಿ ಕುಟುಂಬಗಳಿಗೆ ನೇರ ಹಣಕಾಸಿನ ನೆರವು ನೀಡಲಾಗಿದೆ ಎಂದು ತಿಳಿಸಿದರು.

ಸೋಲಿನಲ್ಲೂ ಗೆಲುವು ಕಂಡ ಕನಕದಾಸರು

ಕನಕದಾಸರು ದಾಸ ಪರಂಪರೆಯ ಶ್ರೇಷ್ಠ ಸಾಧಕರಾಗಿದ್ದು, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಚಿಂತನೆಗಳ ಮೂಲಕ ಸಮಾಜವನ್ನು ತಿದ್ದಿ ತೀಡಿದರು. ಸೋಲಿನಲ್ಲಿಯೇ ಗೆಲುವನ್ನು ಕಂಡ ಅವರ ಚಿಂತನೆ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ ಎಂದು ಬೊಮ್ಮಾಯಿ ಹೇಳಿದರು.

ಸಾಧನೆ ಮಾಡಿದ ಮಕ್ಕಳನ್ನು ಗೌರವಿಸುವುದು ಉತ್ತಮ ಪರಂಪರೆ. ಇದು ವಿದ್ಯಾರ್ಥಿಗಳಿಗೆ ಮತ್ತಷ್ಟು ಸಾಧನೆ ಮಾಡಲು ಪ್ರೇರಣೆ ನೀಡುತ್ತದೆ. 21ನೇ ಶತಮಾನ ಜ್ಞಾನದ ಶತಮಾನವಾಗಿದ್ದು, ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣವೇ ಅತಿದೊಡ್ಡ ಅಸ್ತ್ರ. ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೂ ಪೂರ್ಣಗೊಳ್ಳುವವರೆಗೆ ನಿರಂತರವಾಗಿ ಶ್ರಮಿಸಬೇಕು ಎಂದರು.

ಕಾಗಿನೆಲೆ ಕನಕ ಗುರುಪೀಠದ ವತಿಯಿಂದ 13ರಿಂದ 14 ಕೊಠಡಿಗಳ ಶಾಲಾ ಕಟ್ಟಡವನ್ನು ಕೇವಲ 180 ದಿನಗಳಲ್ಲಿ ಪೂರ್ಣಗೊಳಿಸಿರುವುದನ್ನು ಶ್ಲಾಘಿಸಿದ ಅವರು, ಕಾಮಗಾರಿಯ ನಂತರ ಖರ್ಚು-ವೆಚ್ಚದ ಸಂಪೂರ್ಣ ಲೆಕ್ಕವನ್ನು ಪಾರದರ್ಶಕವಾಗಿ ಸಾರ್ವಜನಿಕರಿಗೆ ನೀಡಿರುವುದು ಶಿಸ್ತು ಮತ್ತು ಪ್ರಾಮಾಣಿಕತೆಗೆ ಮಾದರಿ ಎಂದರು.

“ಎಲ್ಲಿ ಪ್ರಾಮಾಣಿಕತೆ ಇರುತ್ತದೆಯೋ ಅಲ್ಲಿ ಸಾತ್ವಿಕತೆ ಹಾಗೂ ನಿಷ್ಠೆ ಇರುತ್ತದೆ. ಪ್ರಾಮಾಣಿಕತೆ ಮತ್ತು ನಿಷ್ಠೆಯ ಸೇವೆ ಎಂದಿಗೂ ಶ್ರೇಷ್ಠ” ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande