
ಬೆಂಗಳೂರು, 09 ಆಗಸ್ಟ್ (ಹಿ.ಸ.):
ಆ್ಯಂಕರ್:
ಕಾಂಗ್ರೆಸ್ ಹೈಕಮಾಂಡ ನಾಯಕರಿಗೆ ಹಣ ಕೊಡಲು ಬಿಡದಿ ಟೌನ್ಶಿಪ್ ಯೋಜನೆ ಜಾರಿಗೆ ಸರಕಾರ ಮುಂದಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಡದಿ ಟೌನ್ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್-ಬಿಜೆಪಿ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಗೆ ಭೈರಮಂಗಲ ಗ್ರಾಮದಲ್ಲಿ ಚಾಲನೆ ನೀಡಲಾಯಿತು.
ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ರೈತರ ಹಿತಕ್ಕಾಗಿ ಜೆಡಿಎಸ್ ಪಾದಯಾತ್ರೆ ನಡೆಸುತ್ತಿದೆ. ಕಳೆದ 515 ದಿನಗಳಿಂದ ರೈತರು ಹೋರಾಟ ನಡೆಸುತ್ತಿದ್ದರೂ ಯಾವುದೇ ಬೆದರಿಕೆಗೆ ಬಗ್ಗದೆ ಹೋರಾಟ ಮುಂದುವರಿಸಿದ್ದಾರೆ ಎಂದರು. ಪಾದಯಾತ್ರೆ ರಾಜಕೀಯ ಸ್ವಾರ್ಥಕ್ಕಾಗಿ ಅಲ್ಲ, ರೈತರ ಹಿತಕ್ಕಾಗಿ ಎಂದು ಸ್ಪಷ್ಟಪಡಿಸಿದರು.
ಬಿಡದಿ ಟೌನ್ಶಿಪ್ ಯೋಜನೆ ಕುರಿತು ಕಾಂಗ್ರೆಸ್ ಜೆಡಿಎಸ್ ವಿರುದ್ಧ ಆರೋಪ ಮಾಡುತ್ತಿದೆ. 2006ರಲ್ಲಿ ಯೋಜನೆ ಆರಂಭಿಸಿದಾಗಿನ ತೀರ್ಮಾನವೇ ಬೇರೆ ಆಗಿತ್ತು. ತಮ್ಮ ಅವಧಿಯಲ್ಲಾಗಲಿ, ಬಿಜೆಪಿ ಸರ್ಕಾರದ ಅವಧಿಯಲ್ಲಾಗಲಿ ಪ್ರಾಥಮಿಕ ಹಾಗೂ ಅಂತಿಮ ಅಧಿಸೂಚನೆ ಹೊರಡಿಸಿರಲಿಲ್ಲ ಎಂದು ಹೇಳಿದರು.
“ರೈತರ ಜಮೀನಿಗೆ ಮೊದಲು 2 ಕೋಟಿ ರೂ. ಕೊಡುತ್ತೇವೆ ಎಂದವರು ಈಗ 3 ಕೋಟಿ ರೂ. ಎನ್ನುತ್ತಿದ್ದಾರೆ. ಏನು ವ್ಯಾಪಾರ ಮಾಡುತ್ತಿದ್ದೀರಾ?” ಎಂದು ಪ್ರಶ್ನಿಸಿದ ಅವರು, ಪೊಲೀಸ್ ಬಲ ಬಳಸಿ ರೈತರ ಭೂಮಿ ವಶಪಡಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
2006ರಲ್ಲಿ 2,600 ಎಕರೆ ಸರ್ಕಾರಿ ಜಮೀನು ಇತ್ತು. ಅದು ಈಗ ಎಲ್ಲಿಗೆ ಹೋಯಿತು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನಿಸಿದ ಕುಮಾರಸ್ವಾಮಿ, ಟೌನ್‌ಶಿಪ್ ಯೋಜನೆ ಕುರಿತು ಸರ್ಕಾರ ರಚಿಸಿರುವ ಸಮಿತಿಯ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದರು. 2006ರಲ್ಲೇ ಸತ್ಯಶೋಧನಾ ಸಮಿತಿ ರಚಿಸಲಾಗಿತ್ತು. ಆ ಸಮಿತಿ ನೀಡಿದ ವರದಿ ಏನಾಯಿತು ಎಂದು ಪ್ರಶ್ನಿಸಿದರು.
ಸಚಿವ ಎಚ್.ಸಿ. ಬಾಲಕೃಷ್ಣ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಬಾಲಕೃಷ್ಣ ಅವರು ಜೆಡಿಎಸ್‌ನಲ್ಲಿ ಮೂರು ಬಾರಿ, ಬಿಜೆಪಿಯಲ್ಲಿ ಒಂದು ಬಾರಿ ಹಾಗೂ ಕಾಂಗ್ರೆಸ್‌ನಲ್ಲಿ ಒಂದು ಬಾರಿ ಗೆದ್ದಿದ್ದಾರೆ. ಈಗ ಬಿಜೆಪಿ-ಜೆಡಿಎಸ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಯೋಜನೆಗೆ ಕೆಲ ದಲ್ಲಾಳಿಗಳು ಮಾತ್ರ ಒಪ್ಪಿ ಜಮೀನು ನೀಡುತ್ತಿದ್ದಾರೆ. ಆದರೆ ಪಿತ್ರಾರ್ಜಿತ ಆಸ್ತಿ ಹೊಂದಿರುವ ರೈತರು ಹಾಗೂ ಸ್ವಾಭಿಮಾನಿ ರೈತ ಮಹಿಳೆಯರು ಯೋಜನೆ ವಿರೋಧಿಸಿ ಹೋರಾಟ ನಡೆಸುತ್ತಿದ್ದಾರೆ. ರೈತರು ಇಂತಹವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಕುಮಾರಸ್ವಾಮಿ ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.