
ಧಾರವಾಡ, 09 ಆಗಸ್ಟ್ (ಹಿ.ಸ.):
ಆ್ಯಂಕರ್:
ಧಾರವಾಡ ರಂಗಾಯಣದ ರೆಪರ್ಟರಿಗೆ ಒಂದು ವರ್ಷದ ಅವಧಿಗೆ 12 ಮಂದಿ ಕಲಾವಿದರನ್ನು ಕ್ರೋಢೀಕೃತ ವೇತನದ ಆಧಾರದ ಮೇಲೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ರಂಗಾಯಣ ಸಿದ್ಧಪಡಿಸುವ ನಾಟಕಗಳು ಹಾಗೂ ವಿವಿಧ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ರಂಗಭೂಮಿಯಲ್ಲಿ ಅನುಭವ ಹೊಂದಿರುವ ಆಸಕ್ತ ಕಲಾವಿದರು ಅರ್ಜಿ ಸಲ್ಲಿಸಬಹುದು. ರಾಷ್ಟ್ರೀಯ ನಾಟಕ ಶಾಲೆಯ ಪದವಿ, ರಾಜ್ಯದ ರಂಗಶಿಕ್ಷಣ ಕೇಂದ್ರಗಳಿಂದ ರಂಗಶಿಕ್ಷಣ ಪದವಿ ಅಥವಾ ಡಿಪ್ಲೊಮಾ, ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ನಾಟಕ ವಿಭಾಗದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು.
ಅಭ್ಯರ್ಥಿಗಳ ವಯೋಮಿತಿ 18ರಿಂದ 32 ವರ್ಷ. ಪಾರಂಪರಿಕ ನಾಟಕ ಕಲೆಯ ಕುಟುಂಬಗಳಿಂದ ಬಂದಿದ್ದು, ರಂಗಶಿಕ್ಷಣ ಪದವಿ ಪಡೆದ ಕಲಾವಿದರಿಗೆ ಗರಿಷ್ಠ 5 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗುವುದು.
ಆಯ್ಕೆಯಾದ ಕಲಾವಿದರಿಗೆ ತಿಂಗಳಿಗೆ 18 ಸಾವಿರ ರೂ. ಕ್ರೋಢೀಕೃತ ವೇತನ ನೀಡಲಾಗುತ್ತದೆ. ಇತರೆ ರಂಗಾಯಣಗಳಲ್ಲಿ ಕನಿಷ್ಠ ಒಂದು ವರ್ಷ ರೆಪರ್ಟರಿ ಕಲಾವಿದರಾಗಿ ಸೇವೆ ಸಲ್ಲಿಸಿದವರಿಗೆ ತಿಂಗಳಿಗೆ 20 ಸಾವಿರ ರೂ. ವೇತನ ನೀಡಲಾಗುವುದು. ಇದಕ್ಕೆ ಸಂಬಂಧಿಸಿದ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು.
ಆಸಕ್ತರು ಅರ್ಜಿ ನಮೂನೆಯನ್ನು ರಂಗಾಯಣ ಕಚೇರಿ ಹಾಗೂ ಫೇಸ್‌ಬುಕ್ ಪುಟದಿಂದ ಪಡೆದು ಆಗಸ್ಟ್ 17, 2026ರ ಸಂಜೆ 5 ಗಂಟೆಯೊಳಗೆ ಆಡಳಿತಾಧಿಕಾರಿಗಳು, ರಂಗಾಯಣ, ಪಂ. ಬಸವರಾಜ ಬಯಲು ರಂಗಮಂದಿರ, ಕಾಲೇಜು ರಸ್ತೆ, ಧಾರವಾಡ–580001 ವಿಳಾಸಕ್ಕೆ ಸಲ್ಲಿಸಬೇಕು. ಅಂಚೆ ಅಥವಾ dharwadrangayana@gmail.com ಮೂಲಕವೂ ಅರ್ಜಿ ಕಳುಹಿಸಬಹುದು ಎಂದು ರಂಗಾಯಣ ಆಡಳಿತಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.