
ಸನಾ (ಯೆಮೆನ್), 07 ಆಗಸ್ಟ್ (ಹಿ.ಸ.):
ಆ್ಯಂಕರ್:ಯೆಮನ್‌ನಲ್ಲಿ ಹೂತಿ (ಅನ್ಸಾರ್ ಅಲ್ಲಾಹ್) ಬಂಡುಕೋರರು ಗುರುವಾರ ನಡೆಸಿದ ಭಾರೀ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಡ್ರೋನ್ ದಾಳಿಯಲ್ಲಿ ಸರ್ಕಾರಿ ಸೇನೆಯ ಕನಿಷ್ಠ 30ರಿಂದ 45 ಯೋಧರು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮಾರಿಬ್ ಮತ್ತು ಹದ್ರಮೌತ್ ಪ್ರಾಂತ್ಯಗಳಲ್ಲಿರುವ ಸರ್ಕಾರಿ ಸೇನಾ ಶಿಬಿರಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ. ಹೂತಿ ಸಂಘಟನೆ ಮಾತ್ರ ನೂರಾರು ಯೋಧರು ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಂಡಿದೆ.
2022ರ ಏಪ್ರಿಲ್‌ನಲ್ಲಿ ಜಾರಿಯಾದ ಯುದ್ಧ ವಿರಾಮದ ಬಳಿಕ ಯೆಮನ್‌ನಲ್ಲಿ ನಡೆದ ಅತ್ಯಂತ ಮಾರಕ ದಾಳಿಗಳಲ್ಲಿ ಇದೂ ಒಂದೆಂದು ಪರಿಗಣಿಸಲಾಗಿದೆ. ಹೂತಿ ಬಂಡುಕೋರರು ಸರ್ಕಾರಿ ಸೇನಾ ನೆಲೆಗಳ ಮೇಲೆ ಎಂಟು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ ಡ್ರೋನ್‌ಗಳನ್ನು ಹಾರಿಸಿದ್ದು, ಶಿಬಿರಗಳಲ್ಲಿ ಭಾರೀ ಹಾನಿ ಉಂಟಾಗಿದೆ.
ಯೆಮನ್ ಸರ್ಕಾರದ ಪ್ರಾಥಮಿಕ ಮಾಹಿತಿಯ ಪ್ರಕಾರ ಮೊದಲಿಗೆ 30 ಯೋಧರು ಸಾವನ್ನಪ್ಪಿದ್ದಾರೆ ಎಂದು ತಿಳಿಸಲಾಗಿತ್ತು. ಬಳಿಕ ಮೃತರ ಸಂಖ್ಯೆ 38ರಿಂದ 45ಕ್ಕೆ ಏರಿಕೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡಿರುವ 50ಕ್ಕೂ ಹೆಚ್ಚು ಯೋಧರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ.
ಹೂತಿ ಸಂಘಟನೆಯ ಸೇನಾ ವಕ್ತಾರ ಯಾಹ್ಯಾ ಸರೀ, ಈ ದಾಳಿಯಲ್ಲಿ ನೂರಾರು ಸರ್ಕಾರಿ ಯೋಧರು ಸಾವನ್ನಪ್ಪಿದ್ದು, ಶಸ್ತ್ರಾಸ್ತ್ರ ಸಂಗ್ರಹಾಗಾರಗಳು, ಸೇನಾ ವಾಹನಗಳು ಮತ್ತು ಶಿಬಿರಗಳಿಗೆ ಭಾರೀ ಹಾನಿಯಾಗಿದೆ ಎಂದು ಹೇಳಿಕೊಂಡಿದ್ದಾರೆ.
ಯೆಮನ್ ಸೇನೆಯು ದಾಳಿಯನ್ನು ದೃಢಪಡಿಸಿದ್ದು, ಅಲ್-ಜೌಫ್ ಪ್ರಾಂತ್ಯದಿಂದ ಎಂಟು ಕ್ಷಿಪಣಿಗಳನ್ನು ಉಡಾಯಿಸಲಾಗಿದೆ ಎಂದು ತಿಳಿಸಿದೆ. ಹೂತಿ ಪಡೆಗಳು ಹೋಮ್‌ಲ್ಯಾಂಡ್ ಶೀಲ್ಡ್ ಫೋರ್ಸ್, ಎಮರ್ಜೆನ್ಸಿ ಫೋರ್ಸ್ ಹಾಗೂ ಹದ್ರಮೌತ್‌ನ ಫಸ್ಟ್ ಮಿಲಿಟರಿ ರೀಜನ್ ಶಿಬಿರಗಳನ್ನು ಗುರಿಯಾಗಿಸಿದ್ದವು.
ಸೌದಿ ಅರೇಬಿಯಾದ ಬೆಂಬಲದೊಂದಿಗೆ 2022ರಲ್ಲಿ ಹೋಮ್‌ಲ್ಯಾಂಡ್ ಶೀಲ್ಡ್ ಫೋರ್ಸ್ ಸ್ಥಾಪನೆಯಾಗಿದ್ದು, ಮಾರಿಬ್–ಹದ್ರಮೌತ್ ಹಾಗೂ ಸೌದಿ ಗಡಿಭಾಗದ ಭದ್ರತೆಯ ಹೊಣೆ ಹೊತ್ತಿದೆ. 2025ರ ಅಂತ್ಯದಲ್ಲಿ ರಚನೆಯಾದ ಎಮರ್ಜೆನ್ಸಿ ಫೋರ್ಸ್ ಹೂತಿ ವಿರುದ್ಧದ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ. ದಾಳಿಯ ವೇಳೆ ಯೋಧರು ತರಬೇತಿ ಶಿಬಿರಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಒಂದೇ ಸ್ಥಳದಲ್ಲಿ ಸೇರಿದ್ದರಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಯೆಮನ್ ಅಧ್ಯಕ್ಷೀಯ ನಾಯಕತ್ವ ಮಂಡಳಿಯ ಅಧ್ಯಕ್ಷ ಹಾಗೂ ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಡಾ. ರಶಾದ್ ಮೊಹಮ್ಮದ್ ಅಲ್-ಅಲೀಮಿ ಅವರ ಕಚೇರಿ ದಾಳಿಯನ್ನು ಖಚಿತಪಡಿಸಿದ್ದು, ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ತಿಳಿಸಿದೆ.
ಸೌದಿ ನೇತೃತ್ವದ ಮೈತ್ರಿಕೂಟದ ವಕ್ತಾರ ಬ್ರಿಗೇಡಿಯರ್ ಜನರಲ್ ತುರ್ಕಿ ಅಲ್-ಮಲಿಕಿ ಮೃತ ಯೋಧರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಯೆಮನ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯೂ ಈ ದಾಳಿಯನ್ನು ಖಂಡಿಸಿ, ಮೃತ ಯೋಧರ ಕುಟುಂಬಗಳಿಗೆ ಸಾಂತ್ವನ ವ್ಯಕ್ತಪಡಿಸಿದೆ.
ಹೂತಿ (ಅನ್ಸಾರ್ ಅಲ್ಲಾಹ್) ಸಂಘಟನೆ ಯೆಮನ್‌ನ ಉತ್ತರ ಭಾಗದ ಜೈದಿ ಶಿಯಾ ಸಮುದಾಯವನ್ನು ಪ್ರತಿನಿಧಿಸುವ ರಾಜಕೀಯ ಹಾಗೂ ಸಶಸ್ತ್ರ ಸಂಘಟನೆಯಾಗಿದ್ದು, ಇದಕ್ಕೆ ಇರಾನ್ ಬೆಂಬಲವಿದೆ ಎಂದು ಅಮೆರಿಕ, ಸೌದಿ ಅರೇಬಿಯಾ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ಆರೋಪಿಸುತ್ತಿವೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.