
ಗದಗ, 05 ಆಗಸ್ಟ್ (ಹಿ.ಸ.)
ಆ್ಯಂಕರ್:- ಗದಗ ಜಿಲ್ಲೆಯ ರೋಣ ತಾಲೂಕಿನ ಮಲ್ಲಾಪೂರ ಗ್ರಾಮದ ಸಮೀಪದ ಹೊಲವೊಂದರಲ್ಲಿ ಅನಾಮಧೇಯ ಮಹಿಳೆಯ ಶವ ಪತ್ತೆಯಾಗಿರುವ ಘಟನೆ ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣವಾಗಿದೆ. ಮಹಿಳೆಯನ್ನು ದುಷ್ಕರ್ಮಿಗಳು ಅತ್ಯಂತ ಬರ್ಬರವಾಗಿ ಹತ್ಯೆಗೈದು, ಬಳಿಕ ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಉದ್ದೇಶದಿಂದ ಶವವನ್ನು ಕೃಷಿ ಹೊಂಡಕ್ಕೆ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ರೋಣ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಮಲ್ಲಾಪೂರ ಗ್ರಾಮದ ನಿವಾಸಿ ಹಾಗೂ ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್ ಆಗಿರುವ ಮಲ್ಲಿಕಾರ್ಜುನ ಶಿವಪುತ್ರಪ್ಪ ಅರಹುಣಸಿ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ದೂರಿನ ಪ್ರಕಾರ, ಆಗಸ್ಟ್ 3ರ ಬೆಳಿಗ್ಗೆ 9.30 ಗಂಟೆಯಿಂದ ಆಗಸ್ಟ್ 4ರ ಬೆಳಿಗ್ಗೆ 8.20 ಗಂಟೆಯ ನಡುವಿನ ಅವಧಿಯಲ್ಲಿ ಸುಮಾರು 25 ರಿಂದ 28 ವರ್ಷದ ಅನಾಮಧೇಯ ಮಹಿಳೆಯನ್ನು ಯಾರೋ ದುಷ್ಕರ್ಮಿಗಳು ಕಲ್ಲಿನಿಂದ ತಲೆಗೆ ಜಜ್ಜಿ ಕೊಲೆ ಮಾಡಿದ್ದಾರೆ. ಅಲ್ಲದೆ ಕುತ್ತಿಗೆಯಲ್ಲಿದ್ದ ತಾಳಿ ಸರವನ್ನು ಬಲವಂತವಾಗಿ ಎಳೆದಿರುವ ಗುರುತುಗಳೂ ಕಂಡುಬಂದಿದ್ದು, ಹತ್ಯೆಯ ಹಿಂದೆ ದರೋಡೆ ಅಥವಾ ಇನ್ನಾವುದೇ ಉದ್ದೇಶವಿದೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕೊಲೆ ನಡೆದ ಬಳಿಕ ಶವವನ್ನು ಮಲ್ಲಾಪೂರ ಗ್ರಾಮದ ಅಂದಪ್ಪ ಭೀಮಪ್ಪ ಕೌಜಗೇರಿ ಅವರ ಹೊಲದಲ್ಲಿರುವ ಕೃಷಿ ಹೊಂಡಕ್ಕೆ ಎಸೆದು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಬೆಳಕಿಗೆ ಬಂದ ನಂತರ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ.
ಮೃತ ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ. ಮಹಿಳೆ ಸುಮಾರು 25 ರಿಂದ 28 ವರ್ಷದವರಾಗಿದ್ದು, 5 ಅಡಿ ಎತ್ತರ, ಸಾಧಾರಣ ಮೈಬಣ್ಣ ಹಾಗೂ ದುಂಡು ಮುಖ ಹೊಂದಿದ್ದಾರೆ. ಅವರು ಕಪ್ಪು ಬಣ್ಣದ ಜಂಪರ್ ಹಾಗೂ ಕೆಂಪು ಬಣ್ಣದ ಲಂಗ ಧರಿಸಿದ್ದರು. ಕೊರಳಲ್ಲಿ ಬಂಗಾರದ ಮಾದರಿಯ ತಾಳಿ, ಕಪ್ಪು ಬಣ್ಣದ ದಾರದಲ್ಲಿ ಕಲಾವತಿ ಮಾತೆಯ ಲಾಕೆಟ್, ಎರಡೂ ಕೈಗಳಲ್ಲಿ ಹಸಿರು ಬಳೆಗಳು ಹಾಗೂ ಬಂಗಾರದ ಮಾದರಿಯ ಎರಡು ಬಳೆಗಳು, ಎರಡೂ ಕಾಲುಗಳಲ್ಲಿ ಬೆಳ್ಳಿಯ ಕಾಲುಚೈನ್ ಹಾಗೂ ಕಾಲುಂಗುರಗಳು, ಕಿವಿಗಳಲ್ಲಿ ಬಂಗಾರದ ಮಾದರಿಯ ಓಲೆಗಳು ಇದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಗುನ್ನಾ ಸಂಖ್ಯೆ 150/2026ರಡಿ ಬಿಎನ್ಎಸ್-2023ರ ಕಲಂ 103(1) ಹಾಗೂ 238 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಮೃತೆಯ ಗುರುತು ಪತ್ತೆಯಾಗದಿರುವ ಹಿನ್ನೆಲೆಯಲ್ಲಿ ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಪೊಲೀಸ್ ಠಾಣೆಗಳಿಗೆ ಮಾಹಿತಿ ರವಾನಿಸಲಾಗಿದ್ದು, ಕಾಣೆಯಾಗಿರುವ ಮಹಿಳೆಯರ ಕುರಿತು ದಾಖಲಾಗಿರುವ ಪ್ರಕರಣಗಳ ಮಾಹಿತಿಯನ್ನೂ ಪರಿಶೀಲಿಸಲಾಗುತ್ತಿದೆ.
ಮೃತ ಮಹಿಳೆಯ ಗುರುತು ಅಥವಾ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ತಿಳಿದಿರುವ ಸಾರ್ವಜನಿಕರು ತಕ್ಷಣ ರೋಣ ಪೊಲೀಸ್ ಠಾಣೆಯ ಪಿಎಸ್ಐ ಪ್ರಕಾಶ ಬಣಕಾರ (ಮೊ. 9480804457), ರೋಣ ವೃತ್ತದ ಸಿಪಿಐ ವಿಜಯಕುಮಾರ (ಮೊ. 9480804434) ಅಥವಾ ಗದಗ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ (ಮೊ. 9480804400) ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP