

ಕೊಪ್ಪಳ, 05 ಆಗಸ್ಟ್ (ಹಿ.ಸ.)
ಆ್ಯಂಕರ್ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸಂಪುಟದಲ್ಲಿ ಏಕಕಾಲಕ್ಕೆ ಜಿಲ್ಲೆಯ ಇಬ್ಬರು ಸಚಿವರಾಗಿದ್ದನ್ನು ಬಲ್ಡೋಟ ಹಟಾವೋ, ಕೊಪ್ಪಳ ಬಚಾವೋ ಹೋರಾಟ ವೇದಿಕೆ ಸಂತಸ ವ್ಯಕ್ತಪಡಿಸಿದೆ.
ಇಲ್ಲಿನ ನಗರಸಭೆ ಆವರಣದಲ್ಲಿ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ (ಜಂಟಿ ಕ್ರಿಯಾ ವೇದಿಕೆ)ಯಿಂದ 279ನೇ ದಿನ ಪೂರ್ಣಗೊಳಿಸಿದ ಧರಣಿಯಿಂದ ನೂತನ ಸಚಿವರಾಗಿ ಪ್ರತಿಜ್ಞೆ ಸ್ವೀಕರಿಸಿದ ಬಸವರಾಜ ರಾಯರಡ್ಡಿ, ಶಿವರಾಜ ಎಸ್. ತಂಗಡಗಿ ಅವರಿಗೆ ಅಭಿನಂದನೆ ಸಲ್ಲಿಸಿತು.
ಕೊಪ್ಪಳ ಜನರ ಜೀವ, ಆರೋಗ್ಯಕ್ಕೆ ಕಂಟಕವಾಗಿರುವ ಇಲ್ಲಿನ ಮಾಲಿನ್ಯಕಾರಿ ಕಾರ್ಖಾನೆಗಳನ್ನು ಶಾಶ್ವತವಾಗಿ ಮುಚ್ಚಬೇಕು ಮತ್ತು ಬಲ್ಡೋಟ ಬೃಹತ್ ಹೂಡಿಕೆಗೆ ತಡೆ ಆದೇಶ ಮಾಡಬೇಕು ಎಂದು ಪತ್ರ ಬರೆಯಲಾಯಿತು. ತುಂಗಭದ್ರಾ ನದಿ, ಜಲಾಶಯ ರಕ್ಷಿಸಲು ತಕ್ಷಣದಿಂದಲೇ ಮಾಲಿನ್ಯ ನಿಯಂತ್ರಣ ಮಾಡಬೇಕು ಎಂದು ಒತ್ತಾಯಿಸಿತು.
ಜಿಲ್ಲೆಗೆ ಇಬ್ಬರು ಸಚಿವರಾಗಿದ್ದು ನಮ್ಮ ಜನರ ಕಷ್ಟ ಕೇಳಲು ಮತ್ತು ಸರ್ಕಾರದ ಮೇಲೆ ಪ್ರಭಾವ ಬೀರಿ ಕಾರ್ಖಾನೆ ಮಾಲಿನ್ಯಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ವೇದಿಕೆ ಆಗ್ರಹಿಸಿದೆ.
ಬಲ್ಡೋಟ ತನ್ನ ಗೂಂಡಾಗಿರಿಯಿಂದ ಬಸಾಪುರ ಕೆರೆಯನ್ನು ಪೊಲೀಸ್ ಕಾವಲು ಪಡೆದು ವಶದಲ್ಲಿಟ್ಟುಕೊಂಡು ರೈತರು ತೆರವುಗೊಳಿಸಿದ್ದ ಕೆರೆ ರಸ್ತೆಗೆ ಅಕ್ರಮ ಕಾಂಪೌಂಡನ್ನು ಪುನಃ ಕಟ್ಟಿಕೊಂಡಿರುವುದನ್ನು ಸಚಿವರು ಕಣ್ಣಾಯಿಸಿ ನೋಡಬೇಕು. ಇದೊಂದು ರೀತಿಯಲ್ಲಿ ನೈಸರ್ಗಿಕ ನ್ಯಾಯದ ಮೇಲೆ ಮಾಡಿದ ಗಧಾ ಪ್ರಹಾರವಾಗಿದೆ ಎಂದು ವೇದಿಕೆ ಖಂಡಿಸಿದೆ. ಈ ವರ್ಷದ ಬರಗಾಲ, ಜಾನುವಾರುಗಳಿಗೆ ಉಂಟಾದ ನೀರು, ಮೇವಿನ ಕೊರತೆಯನ್ನು ಸರ್ಕಾರ ಗಮನಿಸದೆ ಹೋಯಿತು.
ಹೋರಾಟ ವೇದಿಕೆಯ ಗಂಭೀರ ಬೇಡಿಕೆಗಳಾದ ಬಲ್ಡೋಟ ತೊಲಗಿಸಿ, ಮಾಲಿನ್ಯ ನಿಯಂತ್ರಿಣ ಮಾಡಲಾಗದ ಕಾರ್ಖಾನೆ ಬಂದ್ ಮಾಡಿ, ತುಂಗಭದ್ರಾ ನೀರು ಕಾರ್ಖಾನೆಗೆ ಕೊಡುವುದನ್ನು ನಿಲ್ಲಿಸಿ ಕೃಷಿಗೆ ಮೀಸಲಿಡಬೇಕು ಎಂದು ಶೀಘ್ರ ಸರ್ಕಾರದ ಗಮನ ಸೆಳೆದು ನ್ಯಾಯ ಕೊಡಿಸುವ ಜವಾಬ್ದಾರಿಯನ್ನು ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಜಿಲ್ಲೆಯ ಇಬ್ಬರು ಸಚಿವರುಗಳ ಹೆಗಲಿಗೆ ಹಾಕಲು ವೇದಿಕೆ ನಿರ್ಧಾರ ಮಾಡಿತು.
ಧರಣಿಯಲ್ಲಿ ನಿವೃತ್ತ ಅಂಚೆ ಅಧಿಕಾರಿ ರವಿ ಕಾಂತನವರ, ಸಂಚಾಲಕ ಮಲ್ಲಿಕಾರ್ಜುನ ಬಿ.ಗೋನಾಳ, ಪ್ರಕಾಶಕ ಡಿ.ಎಂ. ಬಡಿಗೇರ, ಮೂಕಪ್ಪ ಮೇಸ್ತ್ರಿ ಬಸಾಪುರ, ರಾಜಶೇಖರ ಏಳುಭಾವಿ, ಪಂಪಣ್ಣ ಚಿಂತಪಲ್ಲಿ, ಮಹಾದೇವಪ್ಪ ಮಾವಿನಮಡು, ಮುರಡಪ್ಪ ತಿಮ್ಮಾಪುರ, ಶಿವಪ್ಪ ಜಲ್ಲಿ, ವೆಂಕಣ್ಣಾಚಾರ ಕಟ್ಟಿ ಮುಂತಾದವರು ಇದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್