
ಹುಬ್ಬಳ್ಳಿ, 30 ಆಗಸ್ಟ್ (ಹಿ.ಸ.):
ಆ್ಯಂಕರ್:ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕುಗಳನ್ನು ತಕ್ಷಣ ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು. ಸೆಪ್ಟೆಂಬರ್ 8ರೊಳಗೆ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳದಿದ್ದರೆ ರೈತರನ್ನು ಸಂಘಟಿಸಿ ಸರ್ಕಾರದ ವಿರುದ್ಧ ಬೃಹತ್ ಹೋರಾಟ ನಡೆಸಲಾಗುವುದು ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸತತ ಮಳೆ ಕೊರತೆ ಹಾಗೂ ಪ್ರತಿಕೂಲ ಹವಾಮಾನದಿಂದಾಗಿ ಹೆಸರು, ಉದ್ದು, ಹತ್ತಿ, ಗೋವಿನಜೋಳ, ಸೋಯಾಬಿನ್, ಕಬ್ಬು, ಮೆಣಸಿನಕಾಯಿ, ಈರುಳ್ಳಿ, ಶೇಂಗಾ ಸೇರಿದಂತೆ ಹಲವು ಬೆಳೆಗಳು ಹಾನಿಗೀಡಾಗಿವೆ. ಸಾಲ ಮಾಡಿ ಕೃಷಿ ಮಾಡಿರುವ ರೈತರು ಬೆಳೆ ನಷ್ಟದಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ಹೇಳಿದ್ದಾರೆ.
ಸರ್ಕಾರ ಅಧಿಕಾರಿಗಳ ವರದಿಗೆ ಸೀಮಿತವಾಗದೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನೇರವಾಗಿ ರೈತರ ಹೊಲಗಳಿಗೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿ ಪರಿಶೀಲಿಸಬೇಕು. ಪ್ರತಿ ಎಕರೆಗೆ ಕನಿಷ್ಠ ₹50 ಸಾವಿರ ಪರಿಹಾರ ನೀಡಬೇಕು ಹಾಗೂ ತಕ್ಷಣ ಬರಗಾಲ ಘೋಷಿಸಿ ಬರ ಪರಿಹಾರ ಕಾಮಗಾರಿಗಳ ಮೂಲಕ ಗ್ರಾಮೀಣ ಭಾಗದಲ್ಲಿ ಉದ್ಯೋಗ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಳೆದ ಮೂರುವರೆ ವರ್ಷಗಳಿಂದ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ರೈತರ ಸಂಕಷ್ಟಕ್ಕೆ ಸಮರ್ಪಕವಾಗಿ ಸ್ಪಂದಿಸಿಲ್ಲ ಎಂದು ಆರೋಪಿಸಿರುವ ಮುನೇನಕೊಪ್ಪ, ರೈತರ ಬದುಕಿನೊಂದಿಗೆ ಚೆಲ್ಲಾಟವಾಡುವುದನ್ನು ಸರ್ಕಾರ ನಿಲ್ಲಿಸಬೇಕು ಎಂದಿದ್ದಾರೆ.
ಸೆಪ್ಟೆಂಬರ್ 8 ಸರ್ಕಾರಕ್ಕೆ ಕೊನೆಯ ಗಡುವು. ಅಷ್ಟರೊಳಗೆ ಬರಗಾಲ ಘೋಷಣೆ ಹಾಗೂ ಪರಿಹಾರಕ್ಕೆ ಕ್ರಮ ಕೈಗೊಳ್ಳದಿದ್ದರೆ ರೈತ ಸಮುದಾಯವನ್ನು ಒಗ್ಗೂಡಿಸಿ ಸರ್ಕಾರಕ್ಕೆ ತಕ್ಕ ಉತ್ತರ ನೀಡುವ ರೀತಿಯಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.