
ಹುಬ್ಬಳ್ಳಿ, 30 ಆಗಸ್ಟ್ (ಹಿ.ಸ.)
ಹುಬ್ಬಳ್ಳಿಯ ನೆಹರು ಕ್ರೀಡಾಂಗಣದಲ್ಲಿ ಆ.28ರಿಂದ 30ರವರೆಗೆ ನಡೆದ ಕರ್ನಾಟಕ ರಾಜ್ಯ ಆಹ್ವಾನಿತ 11-ಎ-ಸೈಡ್ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಸಿ.ಆರ್.-7 ಎಫ್.ಸಿ. ಹುಬ್ಬಳ್ಳಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
ಭಾನುವಾರ ನಡೆದ ಅಂತಿಮ ಪಂದ್ಯದಲ್ಲಿ ಸಿ.ಆರ್.-7 ಎಫ್.ಸಿ. ಹುಬ್ಬಳ್ಳಿ ತಂಡವು ಪರ್ಪಲ್ ಎಫ್.ಸಿ. ಹುಬ್ಬಳ್ಳಿಯನ್ನು 1-0 ಗೋಲಿನಿಂದ ಮಣಿಸಿತು. ಪಂದ್ಯದ 30ನೇ ನಿಮಿಷದಲ್ಲಿ ಮಹಬೂಬ್ ನಿರ್ಣಾಯಕ ಗೋಲು ಬಾರಿಸಿ ತಂಡಕ್ಕೆ ಪ್ರಶಸ್ತಿ ತಂದುಕೊಟ್ಟರು. ಮಹಬೂಬ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಪಡೆದರು.
ಮೊದಲ ಸೆಮಿಫೈನಲ್‌ನಲ್ಲಿ ಸಿ.ಆರ್.-7 ಎಫ್.ಸಿ. ಹುಬ್ಬಳ್ಳಿ ತಂಡವು ಕರುನಾಡು ಎಫ್.ಸಿ. ದಾವಣಗೆರೆಯನ್ನು ಟೈ-ಬ್ರೇಕರ್‌ನಲ್ಲಿ 5-4ರಿಂದ ಸೋಲಿಸಿತು. ಎರಡನೇ ಸೆಮಿಫೈನಲ್‌ನಲ್ಲಿ ಪರ್ಪಲ್ ಎಫ್.ಸಿ. ಹುಬ್ಬಳ್ಳಿ ತಂಡವು ಮಿನಿಟ್ಸ್‌ಮೆನ್ ಎಫ್.ಸಿ. ಹುಬ್ಬಳ್ಳಿಯನ್ನು 4-2ರಿಂದ ಮಣಿಸಿತು.
ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಮಿನಿಟ್ಸ್‌ಮೆನ್ ಎಫ್.ಸಿ. ಧಾರವಾಡ ತಂಡವು ಕರುನಾಡು ಎಫ್.ಸಿ. ದಾವಣಗೆರೆಯನ್ನು 2-0ರಿಂದ ಸೋಲಿಸಿತು. ವಿನಾಯಕ್ 18ನೇ ಹಾಗೂ ಜಾಯ್ 19ನೇ ನಿಮಿಷದಲ್ಲಿ ಗೋಲು ಗಳಿಸಿದರು.
ವೈಯಕ್ತಿಕ ಪ್ರಶಸ್ತಿಗಳಲ್ಲಿ ಮಿನಿಟ್ಸ್‌ಮೆನ್ ಎಫ್.ಸಿ. ಧಾರವಾಡದ ಅಜಯ್‌ಗೆ ಗೋಲ್ಡನ್ ಗ್ಲೌಸ್, ಪರ್ಪಲ್ ಎಫ್.ಸಿ. ಹುಬ್ಬಳ್ಳಿಯ ರಾಜೇಶ್‌ಗೆ ಗೋಲ್ಡನ್ ಬೂಟ್ ಹಾಗೂ ಸಿ.ಆರ್.-7 ಎಫ್.ಸಿ. ಹುಬ್ಬಳ್ಳಿಯ ಮಹಬೂಬ್‌ಗೆ ಗೋಲ್ಡನ್ ಬಾಲ್ ಲಭಿಸಿತು.
ತಂಡಗಳ ಅಂತಿಮ ಸ್ಥಾನಗಳಲ್ಲಿ ಕರುನಾಡು ಎಫ್.ಸಿ. ದಾವಣಗೆರೆ ನಾಲ್ಕನೇ, ಮಿನಿಟ್ಸ್‌ಮೆನ್ ಎಫ್.ಸಿ. ಧಾರವಾಡ ಮೂರನೇ, ಪರ್ಪಲ್ ಎಫ್.ಸಿ. ಹುಬ್ಬಳ್ಳಿ ರನ್ನರ್‌ಅಪ್ ಹಾಗೂ ಸಿ.ಆರ್.-7 ಎಫ್.ಸಿ. ಹುಬ್ಬಳ್ಳಿ ಚಾಂಪಿಯನ್ ಆಯಿತು.
ಪಂದ್ಯಾವಳಿಯ ಅಧಿಕಾರಿಗಳಾಗಿ ಎಲಿಸಿಯಸ್, ಸಂತೋಷ್ ಕುಮಾರ್, ವಿನೋದ್ ಪ್ರೇಮ್ ಸಾಗರ್, ಮಣಿಕಂಠ, ವಿಶಾಲ್ ಪಿಳ್ಳೆ ಹಾಗೂ ಯೋಹಾನ್ ಕೊಠಾರಿ ಕಾರ್ಯನಿರ್ವಹಿಸಿದರು. ಅಂತಿಮ ಪಂದ್ಯಕ್ಕೆ ಜಯರಾಮ್ ಶೆಟ್ಟಿ, ಉದಯ್ ಶೆಟ್ಟಿ, ವಸಂತ ಕುಮಾರ್ ಶೆಟ್ಟಿ, ಗುರುರಾಜ್ ಗೊಣದ್, ಆಲ್ಬರ್ಟ್ ಟೈಲರ್, ಅಕ್ರಮ್ ಬಾಷಾ ಬಳ್ಳಾರಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.