
ಕೋಲಾರ: ಆ.೦೩ (ಹಿ.ಸ.):
ಆ್ಯಂಕರ್ : ಇಂದಿನ ಸಮಾಜದಲ್ಲಿ ಹಣದ ಹಿಂದಿನ ಓಟದಲ್ಲಿ ಮಾನವೀಯ ಮೌಲ್ಯಗಳು ಹಾಗೂ ಪ್ರೀತಿ-ವಿಶ್ವಾಸಗಳು ಸಂಪೂರ್ಣವಾಗಿ ನಶಿಸಿ ಹೋಗುತ್ತಿವೆ. ಮನೆಗಳಲ್ಲಿ ಹಿರಿಯರು ಇರಲೇಬಾರದು ಎಂಬ ವಿಲಕ್ಷಣ ಮಾನಸಿಕತೆಗೆ ಯುವಜನಾಂಗ ತಲುಪಿದ್ದಾರೆ. ವಯಸ್ಸಾದ ತಂದೆ-ತಾಯಿಯರನ್ನು ಅನಾಥಾಶ್ರಮಗಳಿಗೆ ತಳ್ಳಲಾಗುತ್ತಿದೆ. ಮುಂದೊಂದು ದಿನ ತಮಗೂ ಮುಪ್ಪಿನ ಕಾಲ ಬರುತ್ತದೆ, ಅನಾರೋಗ್ಯ ಕಾಡುತ್ತದೆ ಮತ್ತು ಆರ್ಥಿಕ ಮುಗ್ಗಟ್ಟು ಎದುರಾಗುತ್ತದೆ ಎಂಬ ನಿತ್ಯಸತ್ಯವನ್ನು ಇಂದಿನ ಯುವಪೀಳಿಗೆ ಸಂಪೂರ್ಣವಾಗಿ ಮರೆತಿದೆ ಎಂದು ಜಿಲ್ಲಾ ಸೆಷನ್ಸ್ ಹೆಚ್ಚುವರಿ ನ್ಯಾಯಾಧೀಶರಾದ ಜಯಶ್ರೀ ಕಳವಳ ವ್ಯಕ್ತಪಡಿಸಿದರು
ಕೋಲಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ 'ಪೋಷಕರ ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ ೨೦೦೭'ರ ಕುರಿತ ಒಂದು ದಿನದ ಕಾರ್ಯಾಗಾರ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂಬಂಧಗಳ ನೈಜ ಬೆಲೆ ಇಂದಿನ ಮಕ್ಕಳಿಗೆ ತಿಳಿದಿಲ್ಲ. ಚಿಕ್ಕಪ್ಪ, ದೊಡ್ಡಪ್ಪ, ಸೋದರ ಸಂಬ0ಧಗಳ0ತಹ ಪದಗಳ ಅರ್ಥವೇ ಗೊತ್ತಿಲ್ಲದಂತೆ ಮಕ್ಕಳನ್ನು ಬೆಳೆಸಲಾಗುತ್ತಿದೆ. ಕೇವಲ ಆಸ್ತಿ ಮತ್ತು ಹಣದ ಹುಟುಕಾಟದಲ್ಲಿರುವವರು, ತಂದೆ-ತಾಯಿಯಿ0ದ ಒಮ್ಮೆ ಆಸ್ತಿ ಬರೆಸಿಕೊಂಡ ನಂತರ ಹೆತ್ತವರನ್ನೇ ನಿರ್ದಾಕ್ಷಿಣ್ಯವಾಗಿ ಬೀದಿಗೆ ತಳ್ಳುತ್ತಿದ್ದಾರೆ. ಇಂತಹ ದಯನೀಯ ಪರಿಸ್ಥಿತಿಯನ್ನು ತಡೆಗಟ್ಟಿ, ಹಿರಿಯರಿಗೆ ರಕ್ಷಣೆ ಒದಗಿಸುವ ಏಕೈಕ ಉದ್ದೇಶದಿಂದಲೇ ೨೦೦೭ರಲ್ಲಿ 'ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ'ಯನ್ನು ಜಾರಿಗೆ ತರಲಾಯಿತು ಎಂದು ತಿಳಿಸಿದರು.
ಈ ಕಾಯ್ದೆಯು ಹಿರಿಯರಿಗೆ ಅತ್ಯಂತ ಬಲವಾದ ಅಸ್ತ್ರವಾಗಿದೆ. ಮಕ್ಕಳು ಅಥವಾ ಸಂಬ0ಧಿಕರು ಆಸ್ತಿಯನ್ನು ದಾನವಾಗಿ ಪಡೆದು, ನಂತರ ಪೋಷಕರನ್ನು ಮನೆಯಿಂದ ಹೊರಹಾಕಿದರೆ ಅಥವಾ ನಿರ್ಲಕ್ಷಿಸಿದರೆ, ಈ ಕಾಯ್ದೆಯಡಿ ಆಸ್ತಿಯನ್ನು ಮರಳಿ ಪಡೆಯುವ ಸುಲಭ ಅವಕಾಶವಿದೆ. ನೊಂದ ಹಿರಿಯರು ನ್ಯಾಯಾಲಯದ ಮೆಟ್ಟಿಲೇರುವ ಬದಲು ಉಪ ವಿಭಾಗಾಧಿಕಾರಿಯ ಮುಂದೆ ಕೇವಲ ಒಂದು ಅರ್ಜಿ ಸಲ್ಲಿಸಿದರೆ ಸಾಕು. ಕೇವಲ ೯೦ ದಿನಗಳ ಕಟ್ಟುನಿಟ್ಟಿನ ಮಿತಿಯೊಳಗೆ ವಿಚಾರಣೆ ನಡೆಸಿ ಗರಿಷ್ಠ ೧೦,೦೦೦ ರೂ.ಗಳವರೆಗೆ ಜೀವನಾಂಶ ನೀಡುವಂತೆ ಆದೇಶಿಸುವ ಅಥವಾ ತಾವು ಬರೆದುಕೊಟ್ಟ ಆಸ್ತಿಯನ್ನು ರದ್ದುಪಡಿಸಿ ವಾಪಸ್ ಕೊಡಿಸುವ ಸಂಪೂರ್ಣ ಅಧಿಕಾರವನ್ನು ತಹಶೀಲ್ದಾರ್ಗೆ ನೀಡಲಾಗಿದೆ ಎಂದು ಅವರು ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಕಾನೂನು ಮತ್ತು ಕಾಯ್ದೆಗಳಿಗಿಂತ ಮನುಷ್ಯನಿಗೆ ಮಾನವೀಯತೆ ಹಾಗೂ ನೈತಿಕ ಶಿಕ್ಷಣ ಅತ್ಯಗತ್ಯ. ಹಿಂದಿನ ಕಾಲದ ಅವಿಭಕ್ತ ಕುಟುಂಬಗಳಲ್ಲಿ ಹಿರಿಯರಿಗೆ ಸಿಗುತ್ತಿದ್ದ ಗೌರವ, ದಿನಚರಿಯ ಶಿಸ್ತು ಇಂದಿನ ದಿನಗಳಲ್ಲಿ ಮರೆಯಾಗಿದೆ. ನಮ್ಮ ತಂದೆ-ತಾಯಿಯರನ್ನು ನೋಡಿಕೊಳ್ಳುವ ಜವಾಬ್ದಾರಿ ನಮ್ಮದೇ ಹೊರತು. ಅದಕ್ಕಾಗಿ ಕಾನೂನಿನ ಮೊರೆ ಹೋಗುವ ಪರಿಸ್ಥಿತಿ ಎಂದಿಗೂ ನಿರ್ಮಾಣವಾಗಬಾರದು. ಹಿರಿಯ ಜೀವಿಗಳಿಗೆ ಕೊನೆಯಗಾಲದಲ್ಲಿ ಬೇಕಿರುವುದು ಕೇವಲ ಪ್ರೀತಿ ಮತ್ತು ಸಾಂತ್ವನದ ನುಡಿಗಳು ಮಾತ್ರ. ಆದ್ದರಿಂದ ಕಾಯ್ದೆಯ ಅರಿವಿನ ಜೊತೆಗೆ, ಮಕ್ಕಳಲ್ಲಿ ಮಾನವೀಯತೆಯನ್ನು ಬೆಳೆಸುವತ್ತ ಪೋಷಕರು ಗಮನ ಹರಿಸಬೇಕು ಎಂದು ಅವರು ಎಲ್ಲರಿಗೂ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು ನೀಲಚಾರಿ ಬಡಿಗೇರ್ ಮಾತನಾಡಿ ನ್ಯಾಯಾಲಯಗಳಲ್ಲಿ ಹಿರಿಯ ನಾಗರಿಕರ ಪ್ರಕರಣಗಳನ್ನು ಪ್ರಥಮ ಆದ್ಯತೆಯ (ಪ್ರಿಫರೆನ್ಸ್) ಮೇರೆಗೆ ಪರಿಗಣಿಸಿ ತ್ವರಿತವಾಗಿ ಇತ್ಯರ್ಥಪಡಿಸಲಾಗುವುದು. ಹಿರಿಯ ನಾಗರಿಕರು ಯಾವುದೇ ಕಾನೂನು ಸಮಸ್ಯೆಗಳಿದ್ದರೂ ನೇರವಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು. ಪ್ರಾಧಿಕಾರವು ಆ ಅರ್ಜಿಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ತ್ವರಿತವಾಗಿ ಸೂಕ್ತ ಪರಿಹಾರ ಒದಗಿಸಲು ಶ್ರಮಿಸಲಿದೆ ಎಂದು ಭರವಸೆ ನೀಡಿದರು ಹಾಗೂ ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವAತೆ ಮನವಿ ಮಾಡಿದರು.
ಸಣ್ಣಪುಟ್ಟ ವ್ಯಾಜ್ಯಗಳಿಗಾಗಿ ನ್ಯಾಯಾಲಯದ ಮೆಟ್ಟಿಲೇರುವ ಬದಲು, ಪ್ರತಿ ಎರಡು ತಿಂಗಳಿಗೊಮ್ಮೆ ನಡೆಯುವ ಲೋಕ ಅದಾಲತ್ ಹಾಗೂ ಮಧ್ಯಸ್ಥಿಕೆ ಕೇಂದ್ರಗಳ (ಮೀಡಿಯೇಶನ್ ಸೆಂಟರ್) ಮೂಲಕ ಬಗೆಹರಿಸಿಕೊಳ್ಳುವುದು ಹೆಚ್ಚು ಸೂಕ್ತ. ಇದೇ ಬರುವ ಸೆಪ್ಟೆಂಬರ್ ೧೨ ರಂದು ಬೃಹತ್ ಲೋಕ ಅದಾಲತ್ ಆಯೋಜಿಸಲಾಗಿದ್ದು, ಸಾರ್ವಜನಿಕರು ಹಾಗೂ ಹಿರಿಯ ನಾಗರಿಕರು ಇದರ ಸದುಪಯೋಗ ಪಡೆದುಕೊಂಡು ತಮ್ಮ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಶೀಘ್ರವಾಗಿ ಇತ್ಯರ್ಥಪಡಿಸಿಕೊಳ್ಳುವಂತೆ ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ನಿರೂಪಣಾಧಿಕಾರಿ ನಾಗರತ್ನ, ಜಿಲ್ಲಾ ವಕೀಲರ ಸಂಘಆ ಅಧ್ಯಕ್ಷರು ಶ್ರೀನಿವಾಸ, ಜಿಲ್ಲ ವಕೀಲರ ಸಂಘ ಉಪಾಧ್ಯಕ್ಷ ಸುಬ್ರಮಣಿ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿಕೆ ವಿ ಆದರ್ಶ, ಗೋಪಾಲ್ ರೆಡ್ಡಿ, ಸಂಪನ್ಮೂಲ ವ್ಯಕ್ತಿ ಗೋವಿಂದಪ್ಪ, ಜಿಲ್ಲಾ ವಿಕಲಚೇತನರ ಕಲ್ಯಾಣ ಅಧಿಕಾರಿ ಆರ್ ಮಂಜುಳಾ, ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್