ಇಂದಿನಿಂದ ಪ್ರಧಾನಿ ನರೇಂದ್ರ ಮೋದಿ ಉಜ್ಬೇಕಿಸ್ತಾನ, ಕಿರ್ಗಿಸ್ತಾನ ಪ್ರವಾಸ
ಕೇಂದ್ರ ಏಷ್ಯಾದೊಂದಿಗಿನ ಕಾರ್ಯತಂತ್ರದ ಸಹಭಾಗಿತ್ವ ಮತ್ತಷ್ಟು ಬಲಪಡಿಸುವ ವಿಶ್ವಾಸ: ಮೋದಿ
ಪ್ರಧಾನಮಂತ್ರಿ ಎಕ್ಸನಲ್ಲಿ ಹಂಚಿಕೊಂಡಿರುವ ಪೋಟೋ


ನವದೆಹಲಿ, 29 ಆಗಸ್ಟ್ (ಹಿ.ಸ.):

ಆ್ಯಂಕರ್:

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದಿನಿಂದ ಸೆ.1ರವರೆಗೆ ಉಜ್ಬೇಕಿಸ್ತಾನ ಹಾಗೂ ಕಿರ್ಗಿಸ್ತಾನಕ್ಕೆ ಅಧಿಕೃತ ಪ್ರವಾಸ ಕೈಗೊಳ್ಳಲಿದ್ದಾರೆ.

ಪ್ರವಾಸಕ್ಕೂ ಮುನ್ನ ಎಕ್ಸ್‌ನಲ್ಲಿ ಹೇಳಿಕೆ ನೀಡಿರುವ ಅವರು, ಉಜ್ಬೇಕಿಸ್ತಾನದ ಅಧ್ಯಕ್ಷ ಶವ್ಕತ್ ಮಿರ್ಜಿಯೋಯೆವ್ ಅವರ ಆಹ್ವಾನದ ಮೇರೆಗೆ ಆ.29-30ರಂದು ತಾಷ್ಕೆಂಟ್‌ಗೆ ರಾಜ್ಯ ಪ್ರವಾಸ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಭಾರತ-ಉಜ್ಬೇಕಿಸ್ತಾನ ಕಾರ್ಯತಂತ್ರದ ಸಹಭಾಗಿತ್ವವು ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ವಿಸ್ತರಿಸಿದ್ದು, ವ್ಯಾಪಾರ ಮತ್ತು ಹೂಡಿಕೆ, ಡಿಜಿಟಲ್ ಸಂಪರ್ಕ, ರಕ್ಷಣಾ ಹಾಗೂ ಇಂಧನ ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಕುರಿತು ಅಧ್ಯಕ್ಷ ಮಿರ್ಜಿಯೋಯೆವ್ ಅವರೊಂದಿಗೆ ಚರ್ಚಿಸುವುದಾಗಿ ಹೇಳಿದ್ದಾರೆ.

ತಾಷ್ಕೆಂಟ್‌ನಲ್ಲಿ ಶಾಸ್ತ್ರಿ ಸ್ಮಾರಕ ಹಾಗೂ ತಾಷ್ಕೆಂಟ್ ಸ್ಟೇಟ್ ಯೂನಿವರ್ಸಿಟಿ ಆಫ್ ಓರಿಯೆಂಟಲ್ ಸ್ಟಡೀಸ್‌ನ ಮಹಾತ್ಮ ಗಾಂಧಿ ಕೇಂದ್ರಕ್ಕೂ ಭೇಟಿ ನೀಡುವುದಾಗಿ ಮೋದಿ ತಿಳಿಸಿದ್ದಾರೆ.

ಬಳಿಕ ಕಿರ್ಗಿಸ್ತಾನದ ಅಧ್ಯಕ್ಷ ಸಾದಿರ್ ಜಪರೋವ್ ಅವರ ಆಹ್ವಾನದ ಮೇರೆಗೆ ಬಿಷ್ಕೆಕ್‌ಗೆ ತೆರಳಿ 26ನೇ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ. ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ಉಗ್ರವಾದದಿಂದ ಮುಕ್ತವಾದ ಪ್ರದೇಶ ನಿರ್ಮಾಣಕ್ಕೆ ಸದಸ್ಯ ರಾಷ್ಟ್ರಗಳೊಂದಿಗೆ ಕಾರ್ಯನಿರ್ವಹಿಸುವುದಾಗಿ ತಿಳಿಸಿದ್ದಾರೆ.

ಜತೆಗೆ ಆರನೇ ವಿಶ್ವ ಅಲೆಮಾರಿ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದು, ಕಿರ್ಗಿಸ್ತಾನ ಅಧ್ಯಕ್ಷರು ಸೇರಿದಂತೆ ವಿವಿಧ ಶಾಂಘೈ ಸಹಕಾರ ಸಂಘಟನೆ ನಾಯಕರನ್ನು ಭೇಟಿಯಾಗುವುದಾಗಿ ಮೋದಿ ಹೇಳಿದ್ದಾರೆ.

ಈ ಪ್ರವಾಸವು ಕೇಂದ್ರ ಏಷ್ಯಾದೊಂದಿಗಿನ ಭಾರತದ ಕಾರ್ಯತಂತ್ರದ ಸಹಭಾಗಿತ್ವವನ್ನು ಬಲಪಡಿಸುವುದರ ಜೊತೆಗೆ, ನಾಗರಿಕತೆ ಹಾಗೂ ಜನರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯ ಹಂಚಿಕೆಯ ಗುರಿಯನ್ನು ಮುನ್ನಡೆಸಲಿದೆ ಎಂಬ ವಿಶ್ವಾಸವನ್ನು ಪ್ರಧಾನಿ ವ್ಯಕ್ತಪಡಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande