ಕೋಲಾರದ ಆರ್. ಎಲ್. ಜಾಲಪ್ಪ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಕ್ಯಾಥ್ ಲ್ಯಾಬ್ ಲೋಕಾರ್ಪಣೆ
ಕೋಲಾರದ ಆರ್. ಎಲ್. ಜಾಲಪ್ಪ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಕ್ಯಾಥ್ ಲ್ಯಾಬ್ ಲೋಕಾರ್ಪಣೆ
ಕೋಲಾರ ನಗರದ ಹೊರ ವಲಯದ ಟಮಕ ಕೋಲಾರದ ಆರ್. ಎಲ್. ಜಾಲಪ್ಪ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಅತ್ಯಾಧುನಿಕ ಕ್ಯಾಥ್ ಲ್ಯಾಬ್ ಲೋಕಾರ್ಪಣೆ ಮಾಡಲಾಯಿತು.


ಕೋಲಾರ, 28 ಆಗಸ್ಟ್ (ಹಿ.ಸ.)

ಆ್ಯಂಕರ್ : ಕೋಲಾರ ಮತ್ತು ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನರಿಗೆ ವಿಶೇಷ ಹೃದ್ರೋಗ ಚಿಕಿತ್ಸೆಯನ್ನು ಸುಲಭವಾಗಿ ತಲುಪಿಸುವಲ್ಲಿ ಈ ಕ್ಯಾಥ್ ಲ್ಯಾಬ್ ಉದ್ಘಾಟನೆ ಮಹತ್ವದ್ದಾಗಿದೆ. ಹಲವು ವರ್ಷಗಳಿಂದ ಬಲಿಷ್ಠ ವೈದ್ಯಕೀಯ ಬುನಾದಿ ಹೊಂದಿರುವ ಈ ಕೇಂದ್ರದಲ್ಲಿ ಸುಧಾರಿತ ತಂತ್ರಜ್ಞಾನದ ಮೇಲಿನ ಹೂಡಿಕೆಯು ಸಂಕೀರ್ಣ ಚಿಕಿತ್ಸೆಗಳನ್ನು ಗರಿಷ್ಠ ನಿಖರತೆಯಿಂದ ಕೈಗೊಳ್ಳಲು ನೆರವಾಗಲಿದೆ. ರೋಗಿಗಳಿಗೆ ಅವರ ಮನೆ ಸಮೀಪದಲ್ಲೇ ತಜ್ಞ ವೈದ್ಯರ ನೆರವಿನೊಂದಿಗೆ ಸುಧಾರಿತ ಆರೈಕೆ ಕಲ್ಪಿಸುವುದೇ ನಮ್ಮ ಪ್ರಮುಖ ಗುರಿಯಾಗಿದೆ ಎಂದು ನಾರಾಯಣ ಹೆಲ್ತ್ ನ ಕರ್ನಾಟಕ ಕ್ಲಸ್ಟರ್ ಮತ್ತು ಕಾರ್ಪೊರೇಟ್ ಗ್ರೋತ್ ಇನಿಶಿಯೇಟಿವ್ಸ್ ನಿರ್ದೇಶಕ ಡಾ. ವಿಜಯ್ ಸಿಂಗ್ ತಿಳಿಸಿದರು.

ಕೋಲಾರ ಹೊರವಲಯದ ಟಮಕದಲ್ಲಿರುವ ಎಸ್ಡಿಯುಎಂಸಿ ಕ್ಯಾಂಪಸ್ ನ ಆರ್.ಎಲ್. ಜಾಲಪ್ಪ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ನೂತನ ಅತ್ಯಾಧುನಿಕ ಕ್ಯಾಥ್ ಲ್ಯಾಬ್ ಅನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಿ ಮಾತನಾದರು. ನಾರಾಯಣ ಹೆಲ್ತ್ ಸಂಸ್ಥೆಯು, ಗ್ರಾಮೀಣ ಹಾಗೂ ನೆರೆಹೊರೆಯ ಜಿಲ್ಲೆಗಳ ಜನರಿಗೆ ಅತ್ಯಾಧುನಿಕ ಹಾಗೂ ಗುಣಮಟ್ಟದ ಹೃದ್ರೋಗ ಚಿಕಿತ್ಸೆಯನ್ನು ಅವರ ಸಮೀಪದಲ್ಲೇ ಒದಗಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದು ತಿಳಿಸಿದರು.

ಜಾಗತಿಕ ವೈದ್ಯಕೀಯ ತಂತ್ರಜ್ಞಾನ ಸಂಸ್ಥೆ ಜಿಇ ಹೆಲ್ತ್ ಕೇರ್ ನ ಅತ್ಯಾಧುನಿಕ ಅಲಿಯಾ ಐಜಿಎಸ್ ೩ ಮತ್ತು ಅಲಿಯಾ ಐಜಿಎಸ್ ೫ ವ್ಯವಸ್ಥೆಗಳನ್ನು ಒಳಗೊಂಡಿರುವ ಈ ಸೌಲಭ್ಯವು, ಇಮೇಜ್- ಮಾರ್ಗದರ್ಶಿತ ಹೃದಯ ಶಸ್ತ್ರಚಿಕಿತ್ಸಾ ಪ್ರಕ್ರಿಯೆಗಳನ್ನು ಅತ್ಯುನ್ನತ ನಿಖರತೆ ಹಾಗೂ ದಕ್ಷತೆಯೊಂದಿಗೆ ನಿರ್ವಹಿಸಲು ವೈದ್ಯಕೀಯ ತಂಡಕ್ಕೆ ಹೊಸ ಶಕ್ತಿ ತುಂಬಿದೆ ಎಂದು ತಿಳಿಸಿದರು.

ನಾರಾಯಣ ಹೆಲ್ತ್ ನ ಡಾ. ಮಂಜುನಾಥ್ ಬಾಬು ಮಾತನಾಡಿ ಜಿಇ ಹೆಲ್ತ್ ಕೇರ್ ನ ಅಲಿಯಾ ಐಜಿಎಸ್ ಪ್ಲಾಟ್ಫಾರ್ಮ್ ಅತ್ಯಾಧುನಿಕ ಇಮೇಜಿಂಗ್, ಆಟೊಮೇಷನ್ ಮತ್ತು ರೇಡಿಯೇಷನ್ ಡೋಸ್ ಆಪ್ಟಿಮೈಸೇಶನ್ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಇದರಲ್ಲಿರುವ ಆಟೋರೈಟ್ ಎಐ ಆಧಾರಿತ ವ್ಯವಸ್ಥೆಯು ಚಿಕಿತ್ಸೆಯ ವೇಳೆ ಚಿತ್ರದ ಗುಣಮಟ್ಟ ಮತ್ತು ವಿಕಿರಣದ ಪ್ರಮಾಣವನ್ನು ನೈಜ ಸಮಯದಲ್ಲಿ ಸ್ವಯಂಚಾಲಿತವಾಗಿ ನಿಯಂತ್ರಿಸುತ್ತದೆ. ಹಾಗೆಯೇ ಇನ್ನೋವಾಸೆನ್ಸ್ ತಂತ್ರಜ್ಞಾನವು ವಿಕಿರಣದ ಪ್ರಮಾಣವನ್ನು ಶೇ. ೨೫ ರಷ್ಟು ತಗ್ಗಿಸಲಿದ್ದು, ರೋಗಿಗಳು ಹಾಗೂ ವೈದ್ಯರಿಗೆ ಗರಿಷ್ಠ ಸುರಕ್ಷತೆ ಒದಗಿಸುತ್ತದೆ. ಇದರ ಸರಳ ಇಂಟರ್ಫೇಸ್ ವೈದ್ಯರಿಗೆ ಚಿಕಿತ್ಸಾ ಪ್ರಕ್ರಿಯೆಯನ್ನು ತ್ವರಿತವಾಗಿ ಮತ್ತು ಸುಲಭವಾಗಿ ನಿರ್ವಹಿಸಲು ನೆರವಾಗಲಿದೆ ಎಂದು ತಿಳಿಸಿದರು.

ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಸಕಾಲಿಕ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಆಸ್ಪತ್ರೆಯ ೧೫ ಕಿಲೋಮೀಟರ್ ವ್ಯಾಪ್ತಿಯಲ್ಲಿ ಉಚಿತ ಆಂಬ್ಯುಲೆನ್ಸ್ ಸೇವೆಯನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು. ಹೃದಯಾಘಾತದಂತಹ ತುರ್ತು ಸಂದರ್ಭಗಳಲ್ಲಿ ಗೋಲ್ಡನ್ ಅವರ್ ನಲ್ಲಿ ರೋಗಿಗಳನ್ನು ಆಸ್ಪತ್ರೆಗೆ ತಲುಪಿಸುವುದು ಅತ್ಯಂತ ಮುಖ್ಯ. ಉಚಿತ ಆಂಬ್ಯುಲೆನ್ಸ್ ಮತ್ತು ಹೊಸ ಕ್ಯಾಥ್ ಲ್ಯಾಬ್ ಸೌಲಭ್ಯವು ಸಕಾಲಿಕ ರೋಗನಿರ್ಣಯ ಹಾಗೂ ಶೀಘ್ರ ಚಿಕಿತ್ಸೆಗೆ ದಾರಿಯಾಗಲಿದೆ ಎಂದು ಹೇಳಿದರು.

ನಾರಾಯಣ ಹೆಲ್ತ್ ನ ಫೆಸಿಲಿಟಿ ಡೈರೆಕ್ಟರ್ ಎಫ್. ಡಿ. ನಾಗರಾಜ್ ಮಾತನಾಡಿ, ಕಳೆದ ೧೬ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನಮ್ಮ ಸಂಸ್ಥೆಯು ಮೂಲಸೌಕರ್ಯ ಅಭಿವೃದ್ಧಿಗೆ ಸದಾ ಮುಂಚೂಣಿ ಆದ್ಯತೆ ನೀಡಿದೆ. ಈ ನೂತನ ಕ್ಯಾಥ್ ಲ್ಯಾಬ್ ನಮ್ಮ ಚಿಕಿತ್ಸಾ ಸಾಮರ್ಥ್ಯವನ್ನು ಹೆಚ್ಚಿಸಿದ್ದು, ಕೋಲಾರ ಜಿಲ್ಲೆಯ ರೋಗಿಗಳಿಗೆ ಅತ್ಯುತ್ತಮ ವೈದ್ಯಕೀಯ ಸೇವೆ ಒದಗಿಸಲು ನೆರವಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆರ್. ಎಲ್. ಜಾಲಪ್ಪ ನಾರಾಯಣ ಹೃದಯ ಕೇಂದ್ರವು ಕಳೆದ ೧೬ ವರ್ಷಗಳಿಂದ ಕೋಲಾರ ಹಾಗೂ ಸುತ್ತಮುತ್ತಲಿನ ಭಾಗದ ರೋಗಿಗಳಿಗೆ ವಿಶ್ವಾಸಾರ್ಹ ಹೃದ್ರೋಗ ಚಿಕಿತ್ಸಾ ಸೇವೆ ಸಲ್ಲಿಸುತ್ತಾ ಬಂದಿದೆ ಎಂದು ತಿಳಿಸಿದರು.

ಡಾ. ದೇವಿ ಶೆಟ್ಟಿ ಸ್ಥಾಪಿಸಿರುವ ನಾರಾಯಣ ಹೆಲ್ತ್ ಸಂಸ್ಥೆಯ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದೆ ಮತ್ತು ಈ ಸಂಸ್ಥೆಯು ಜಾಗತಿಕ ಮಟ್ಟದ ವೈದ್ಯಕೀಯ ಸೇವಾ ಕ್ಷೇತ್ರದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಭಾರತದ ಅತಿದೊಡ್ಡ ವೈದ್ಯಕೀಯ ಸೇವೆ ಒದಗಿಸುವ ಸಂಸ್ಥೆಗಳಲ್ಲಿ ಒಂದಾಗಿರುವ ನಾರಾಯಣ ಹೆಲ್ತ್ ಸಂಸ್ಥೆಯು ಭಾರತ ಮತ್ತು ಕೆರಿಬಿಯನ್ ಪ್ರದೇಶಗಳಲ್ಲಿ ಪ್ರಾಥಮಿಕ, ದ್ವಿತೀಯ ಹಂತದ ಮತ್ತು ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತಾ ಬಂದಿದೆ. ಸಂಸ್ಥೆಯು ವಿವಿಧ ವೈದ್ಯಕೀಯ ವಿಭಾಗಗಳಲ್ಲಿ ಗುಣಮಟ್ಟದ ಕೇಂದ್ರಗಳು ಮತ್ತು ೧೮,೮೨೨ರಷ್ಟು ವೃತ್ತಿಪರರ ತಂಡವನ್ನು ಹೊಂದಿದೆ. ಇದರಲ್ಲಿ ೩,೮೬೮ ನುರಿತ ವೈದ್ಯರು ಮತ್ತು ತಜ್ಞರು ಇದ್ದಾರೆ. ಅತ್ಯುತ್ತಮ ಸೌಲಭ್ಯ ಮತ್ತು ತಂಡಗಳ ಮೂಲಕ ಉತ್ಕೃಷ್ಟ ಮಟ್ಟದ ವೈದ್ಯಕೀಯ ಸೇವೆ ಒದಗಿಸುತ್ತಿದೆ.

ದೇವರಾಜ್ ಅರಸು ಎಜುಕೇಷನಲ್ ಟ್ರಸ್ಟ್ ನ ಅಧ್ಯಕ್ಷರು ಹಾಗೂ ಕುಲಾಧಿಪತಿ ಜಿ. ಎಚ್. ನಾಗರಾಜ ಮತ್ತು ನಾರಾಯಣ ಹೆಲ್ತ್ ನ ಕರ್ನಾಟಕ ಕ್ಲಸ್ಟರ್ ಮತ್ತು ಕಾರ್ಪೊರೇಟ್ ಗ್ರೋತ್ ಇನಿಶಿಯೇಟಿವ್ಸ್ ನಿರ್ದೇಶಕ ಡಾ. ವಿಜಯ್ ಸಿಂಗ್, ಡಾ. ಮಂಜುನಾಥ್ ಬಾಬು ಹಾಗೂ ಆರ್. ಎಲ್. ಜಾಲಪ್ಪ ನಾರಾಯಣ ಹೆಲ್ತ್ ನ ಫೆಸಿಲಿಟಿ ಡೈರೆಕ್ಟರ್ ಎಫ್. ಡಿ. ನಾಗರಾಜ್ ಸೇರಿದಂತೆ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande