
ಕೋಲ್ಕತ್ತಾ, 27 ಆಗಸ್ಟ್ (ಹಿ.ಸ.):
ಆ್ಯಂಕರ್:ನೇಪಾಳದಲ್ಲಿ ಸಂಭವಿಸಿದ ಭೀಕರ ಜಲಪ್ರಳಯದ ಬಳಿಕ ಪಶ್ಚಿಮ ಬಂಗಾಳದ ಸುಮಾರು 36 ಮಂದಿ ನಾಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ. ಇವರಲ್ಲಿ ಕೋಲ್ಕತ್ತಾದ 32 ಮಂದಿ ಸೇರಿದ್ದಾರೆ. ಕೈಲಾಸ–ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಈ ತಂಡದಲ್ಲಿ 30 ಯಾತ್ರಿಕರು ಹಾಗೂ ಇಬ್ಬರು ಯಾತ್ರಾ ವ್ಯವಸ್ಥಾಪಕರು ಇದ್ದರು.
ಈ ತಂಡ ಆ.21ರಂದು ಕೋಲ್ಕತ್ತಾದಿಂದ ಪ್ರಯಾಣ ಆರಂಭಿಸಿ ಆ.22ರಂದು ನೇಪಾಳ ತಲುಪಿತ್ತು. ಬುಧವಾರ ಬೆಳಗ್ಗೆ ಟಿಬೆಟ್‌ಗೆ ತೆರಳಲು ರಸುವಾಗಢಿ ತಲುಪಿದ್ದ ತಂಡ ಸುಮಾರು 8.30ಕ್ಕೆ ವಲಸೆ ಕಚೇರಿಯಲ್ಲಿತ್ತು. ಈ ವೇಳೆ ನೇಪಾಳ–ಟಿಬೆಟ್ ಗಡಿಯ ಸಮೀಪ ಏಕಾಏಕಿ ಜಲಪ್ರಳಯ ಸಂಭವಿಸಿದೆ. ಬಳಿಕ ತಂಡದ ಯಾರೊಂದಿಗೂ ಸಂಪರ್ಕ ಸಾಧ್ಯವಾಗಿಲ್ಲ.
ಹೂಗ್ಲಿ ಜಿಲ್ಲೆಯ ಚಂದನನಗರ ಮತ್ತು ತಾರಕೇಶ್ವರ ಹಾಗೂ ಬರ್ಧಮಾನ ಮತ್ತು ಬರಾಸತ್ ನಿವಾಸಿಗಳಾದ ಇನ್ನೂ ನಾಲ್ವರು ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ. ಸಂಪರ್ಕ ವ್ಯವಸ್ಥೆ ತೀವ್ರವಾಗಿ ಹದಗೆಟ್ಟಿರುವುದರಿಂದ ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಅಡಚಣೆಯಾಗಿದೆ.
ಕೋಲ್ಕತ್ತಾದ ಯಾತ್ರಾ ಸಂಸ್ಥೆಯ ಪ್ರತಿನಿಧಿ ದಿವ್ಯಜ್ಯೋತಿ ಬಸು, ಯಾತ್ರಾ ವ್ಯವಸ್ಥಾಪಕರಾದ ಜಯಂತ್ ಸನ್ಯಾಲ್ ಮತ್ತು ನೃಪೇನ್ ಸರ್ಕಾರ್ ಅವರೊಂದಿಗೆ ಬೆಳಗ್ಗೆ ಸುಮಾರು 8 ಗಂಟೆಗೆ ಕೊನೆಯ ಬಾರಿ ಸಂಪರ್ಕವಾಗಿತ್ತು ಎಂದು ತಿಳಿಸಿದ್ದಾರೆ. ನಾಪತ್ತೆಯಾದವರಿಗಾಗಿ ಹೆಲಿಕಾಪ್ಟರ್ ಮೂಲಕ ಶೋಧ ಕಾರ್ಯ ನಡೆಸಲಾಗುತ್ತಿದೆ.
ಪಶ್ಚಿಮ ಬಂಗಾಳ ಸರ್ಕಾರ ಪ್ರಕರಣದ ಮೇಲೆ ನಿಗಾ ಇರಿಸಿದ್ದು, ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ನೇಪಾಳದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ. ನಾಪತ್ತೆಯಾದವರ ಕುಟುಂಬಗಳ ನೆರವಿಗಾಗಿ ಭವಾನಿ ಭವನದಲ್ಲಿರುವ ರಾಜ್ಯ ಪೊಲೀಸ್ ಮುಖ್ಯ ಕಚೇರಿಯಲ್ಲಿ 033-24793311 ಮತ್ತು 9147890181 ದೂರವಾಣಿ ಸಂಖ್ಯೆಗಳ ಮೂಲಕ ಸಹಾಯವಾಣಿ ಆರಂಭಿಸಲಾಗಿದೆ.
ನೇಪಾಳದ ಜಲಪ್ರಳಯದಲ್ಲಿ ಸುಮಾರು 100 ಮಂದಿ ಮೃತಪಟ್ಟಿದ್ದು, 750ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಇವರಲ್ಲಿ 133 ಮಂದಿ ಭಾರತೀಯರು ಎಂದು ತಿಳಿದುಬಂದಿದೆ. ಜಲಪ್ರಳಯದಿಂದ ಹಲವು ಪಟ್ಟಣಗಳು ಮತ್ತು ಗ್ರಾಮಗಳು ತೀವ್ರವಾಗಿ ಹಾನಿಗೊಳಗಾಗಿದ್ದು, ಸೇತುವೆಗಳು ಹಾಗೂ ವಿದ್ಯುತ್ ಯೋಜನೆಗಳಿಗೂ ಭಾರಿ ಹಾನಿಯಾಗಿದೆ.
ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಅವರ ಪ್ರಕಾರ, ಸ್ಥಳೀಯ ಕಾಲಮಾನ ಬೆಳಗ್ಗೆ 8.37ಕ್ಕೆ ಟಿಬೆಟ್ ಪ್ರದೇಶದಲ್ಲಿ ಭೂಕಂಪ ಸಂಭವಿಸಿದ್ದು, ಮೂರು ನಿಮಿಷಗಳ ಬಳಿಕ ಪ್ರವಾಹದ ಮಾಹಿತಿ ಲಭಿಸಿತ್ತು. ಭೂಕಂಪದ ಕಂಪನದಿಂದ ಹಿಮನದಿ ಒಡೆದು ಹಠಾತ್ ಪ್ರವಾಹ ಉಂಟಾಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.