ಬರದ ಭೀತಿಯ ನಡುವೆಯೂ ಈರುಳ್ಳಿ ಬೆಳೆಗಾರರ ಪರದಾಟ; ಕುಸಿದ ಇಳುವರಿಯಿಂದ ಕಂಗಾಲಾದ ರೈತರು
ವಿಜಯಪುರ, 27 ಆಗಸ್ಟ್ (ಹಿ.ಸ.) ಆ್ಯಂಕರ್ : ಬರಗಾಲದ ಭೀಕರತೆ, ತೀವ್ರ ಬಿಸಿಲಿನ ಬೇಗೆ ಹಾಗೂ ನೀರಿನ ಕೊರತೆಯ ನಡುವೆಯೂ ಕೊಳವೆಬಾವಿ ನೀರು ಮತ್ತು ರೈನ್ಪೈಪ್ ಹನಿ ನೀರಾವರಿ ಪದ್ಧತಿ ಬಳಸಿ ಕಷ್ಟಪಟ್ಟು ಈರುಳ್ಳಿ ಬೆಳೆದಿದ್ದ ರೈತರು ಇದೀಗ ಇಳುವರಿ ಕುಸಿತದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಜಯಪುರ ಜ
ಈರುಳ್ಳಿ


ವಿಜಯಪುರ, 27 ಆಗಸ್ಟ್ (ಹಿ.ಸ.)

ಆ್ಯಂಕರ್ : ಬರಗಾಲದ ಭೀಕರತೆ, ತೀವ್ರ ಬಿಸಿಲಿನ ಬೇಗೆ ಹಾಗೂ ನೀರಿನ ಕೊರತೆಯ ನಡುವೆಯೂ ಕೊಳವೆಬಾವಿ ನೀರು ಮತ್ತು ರೈನ್ಪೈಪ್ ಹನಿ ನೀರಾವರಿ ಪದ್ಧತಿ ಬಳಸಿ ಕಷ್ಟಪಟ್ಟು ಈರುಳ್ಳಿ ಬೆಳೆದಿದ್ದ ರೈತರು ಇದೀಗ ಇಳುವರಿ ಕುಸಿತದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನಲ್ಲಿ ಈರುಳ್ಳಿ ಬೆಳೆಗೆ ನಿರೀಕ್ಷಿತ ಇಳುವರಿ ದೊರೆಯದೆ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಬರದ ಪರಿಸ್ಥಿತಿಯ ನಡುವೆಯೂ ಉತ್ತಮ ಇಳುವರಿ ಪಡೆಯುವ ನಿರೀಕ್ಷೆಯಿಂದ ರೈತರು ದುಬಾರಿ ವೆಚ್ಚ ಮಾಡಿ ಈರುಳ್ಳಿ ಬೆಳೆದಿದ್ದರು. ಆದರೆ ಪ್ರತಿಕೂಲ ಹವಾಮಾನ, ಬಿಸಿಲಿನ ತಾಪಮಾನ ಹಾಗೂ ನೀರಿನ ಸಮಸ್ಯೆಯಿಂದಾಗಿ ಬೆಳೆಯ ಬೆಳವಣಿಗೆ ಕುಂಠಿತಗೊಂಡಿದ್ದು, ಎಕರೆಗೆ ಕನಿಷ್ಠ 50 ಕ್ವಿಂಟಲ್ ಇಳುವರಿಯೂ ದೊರೆಯದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಈರುಳ್ಳಿ ಬೆಳೆಗಾರರಿಗೆ ಉತ್ಪಾದನಾ ವೆಚ್ಚವನ್ನೇ ವಾಪಸ್ ಪಡೆಯುವುದು ಕಷ್ಟವಾಗುತ್ತಿದೆ.

ಈರುಳ್ಳಿ ಬೆಳೆಯಲು ಬೀಜ, ಗೊಬ್ಬರ, ಔಷಧ, ಕೂಲಿ, ನೀರಾವರಿ ಸೇರಿದಂತೆ ವಿವಿಧ ಹಂತಗಳಲ್ಲಿ ಹೆಚ್ಚಿನ ಹಣ ಖರ್ಚಾಗುತ್ತದೆ.

ಬೆಳೆ ಉತ್ತಮವಾಗಿ ಬಂದರೆ ಮಾರುಕಟ್ಟೆಯಲ್ಲಿ ಉತ್ತಮ ದರ ಸಿಗುವ ನಿರೀಕ್ಷೆಯಿಂದ ರೈತರು ಸಾಲ ಮಾಡಿ ಕೃಷಿ ಚಟುವಟಿಕೆ ಕೈಗೊಂಡಿದ್ದರು. ಆದರೆ ಕಳೆದ ಮೂರು ವರ್ಷಗಳಿಂದ ಈರುಳ್ಳಿ ಬೆಳೆಗಾರರು ಮಾರುಕಟ್ಟೆ ಏರಿಳಿತದಿಂದ ನಿರಂತರ ನಷ್ಟ ಅನುಭವಿಸುತ್ತಿರುವುದರಿಂದ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ.

ಇದೀಗ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬಂದಿರುವುದರಿಂದ ಬೆಲೆ ನಿರೀಕ್ಷಿತ ಮಟ್ಟದಲ್ಲಿ ದೊರೆಯುತ್ತಿಲ್ಲ. ರೈತರು ಮಾರುಕಟ್ಟೆಗೆ ತಂದ ಈರುಳ್ಳಿಯನ್ನು ದಿನಗಟ್ಟಲೆ ಸಂಗ್ರಹಿಸಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸೂಕ್ತ ಸಂಗ್ರಹಣಾ ವ್ಯವಸ್ಥೆಯ ಕೊರತೆಯಿಂದ ಕೆಲವು ಕಡೆಗಳಲ್ಲಿ ಈರುಳ್ಳಿ ಕೊಳೆತು ಹೋಗುತ್ತಿದೆ. ಕೊಳೆತ ಈರುಳ್ಳಿಯಿಂದ ಮಾರುಕಟ್ಟೆ ಪ್ರದೇಶದಲ್ಲಿ ದುರ್ವಾಸನೆ ಹರಡುತ್ತಿದ್ದರೂ, ಬೆಳೆಗಾರರ ಸಂಕಷ್ಟ ಮಾತ್ರ ಕಡಿಮೆಯಾಗುತ್ತಿಲ್ಲ.

ಇತ್ತೀಚೆಗೆ ಈರುಳ್ಳಿ ಬೆಲೆಯಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡುಬಂದಿದ್ದರೂ, ಅದರ ಪ್ರಯೋಜನ ರೈತರಿಗೆ ಸಂಪೂರ್ಣವಾಗಿ ದೊರೆಯುತ್ತಿಲ್ಲ. ಉತ್ಪಾದನಾ ವೆಚ್ಚ, ಸಾಗಾಟ ವೆಚ್ಚ, ಕೂಲಿ ಹಾಗೂ ಮಾರುಕಟ್ಟೆ ಖರ್ಚುಗಳನ್ನು ಪರಿಗಣಿಸಿದರೆ ದೊರೆಯುವ ಬೆಲೆ ರೈತರಿಗೆ ಸಮರ್ಪಕವಾಗಿಲ್ಲ ಎಂಬುದು ಬೆಳೆಗಾರರ ಅಳಲು.

ಬರಗಾಲದ ಹಿನ್ನೆಲೆಯಲ್ಲಿ ಸರ್ಕಾರ ರೈತರ ನೆರವಿಗೆ ಧಾವಿಸಿ ಈರುಳ್ಳಿ ಬೆಳೆಗಾರರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಬೆಳೆ ನಷ್ಟದ ಕುರಿತು ಸಮರ್ಪಕ ಸಮೀಕ್ಷೆ ನಡೆಸಿ ಪರಿಹಾರ ನೀಡುವುದರ ಜೊತೆಗೆ, ಈರುಳ್ಳಿಗೆ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸಬೇಕು. ಮಾರುಕಟ್ಟೆಯಲ್ಲಿ ಬೆಲೆ ಕುಸಿದ ಸಂದರ್ಭದಲ್ಲಿ ಸರ್ಕಾರವೇ ಮಧ್ಯಪ್ರವೇಶಿಸಿ ರೈತರಿಂದ ಈರುಳ್ಳಿ ಖರೀದಿಸುವ ವ್ಯವಸ್ಥೆ ಮಾಡಬೇಕು ಎಂದು ರೈತ ಸಂಘದ ಮುಖಂಡ ಅರವಿಂದ ಕುಲ್ಕರ್ಣಿ ಒತ್ತಾಯಿಸಿದ್ದಾರೆ.

ಬರ ಹಾಗೂ ಬಿಸಿಲಿನ ಪರಿಣಾಮದಿಂದ ಈರುಳ್ಳಿ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಎಕರೆಗೆ ನಿರೀಕ್ಷಿತ ಇಳುವರಿ ದೊರೆಯದೆ ರೈತರು ನಷ್ಟ ಅನುಭವಿಸುತ್ತಿದ್ದು, ಕಳೆದ ಮೂರು ವರ್ಷಗಳಿಂದ ಮಾರುಕಟ್ಟೆಯಲ್ಲಿನ ಅನಿಶ್ಚಿತತೆಯಿಂದ ಸಾಲದ ಹೊರೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಸರ್ಕಾರ ಹಾಗೂ ಜನಪ್ರತಿನಿಧಿಗಳು ಕೂಡಲೇ ಈರುಳ್ಳಿ ಬೆಳೆಗಾರರ ಸಮಸ್ಯೆಗೆ ಸ್ಪಂದಿಸಿ, ಬೆಳೆ ನಷ್ಟದ ಸಮೀಕ್ಷೆ ನಡೆಸಬೇಕು. ರೈತರಿಗೆ ಸೂಕ್ತ ಪರಿಹಾರ ಹಾಗೂ ಬೆಂಬಲ ಬೆಲೆ ಒದಗಿಸುವ ಮೂಲಕ ಸಂಕಷ್ಟದಲ್ಲಿರುವ ಅನ್ನದಾತರಿಗೆ ನೆರವಾಗಬೇಕು. ಜೊತೆಗೆ ಈರುಳ್ಳಿ ಸಂಗ್ರಹಣೆ ಮತ್ತು ಮಾರುಕಟ್ಟೆ ವ್ಯವಸ್ಥೆಯನ್ನು ಸುಧಾರಿಸಿ, ಮಧ್ಯವರ್ತಿಗಳ ಹಾವಳಿಯಿಂದ ರೈತರನ್ನು ರಕ್ಷಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಬರದ ಹೊಡೆತದ ನಡುವೆಯೂ ಕೃಷಿಯನ್ನೇ ನಂಬಿ ಈರುಳ್ಳಿ ಬೆಳೆದಿರುವ ರೈತರಿಗೆ ಇದೀಗ ಮಾರುಕಟ್ಟೆ ಬೆಲೆ ಹಾಗೂ ಇಳುವರಿ ಕುಸಿತ ಎರಡೂ ಹೊಡೆತ ನೀಡಿವೆ. ಸರ್ಕಾರ ತಕ್ಷಣ ಕ್ರಮ ಕೈಗೊಂಡು ರೈತರ ನೆರವಿಗೆ ಧಾವಿಸದಿದ್ದರೆ, ಈಗಾಗಲೇ ಸಾಲದ ಹೊರೆಯಿಂದ ಬಳಲುತ್ತಿರುವ ಅನೇಕ ಕುಟುಂಬಗಳ ಸಂಕಷ್ಟ ಮತ್ತಷ್ಟು ಗಂಭೀರವಾಗುವ ಆತಂಕ ವ್ಯಕ್ತವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande