
ಬೆಂಗಳೂರು, 27 ಆಗಸ್ಟ್ (ಹಿ.ಸ.):
ಆ್ಯಂಕರ್:
ಮುಂಗಾರು ಮಳೆಯ ಅಭಾವದಿಂದ ಅನ್ನದಾತರು ಅನುಭವಿಸುತ್ತಿರುವ ಸಂಕಷ್ಟಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕರ್ನಾಟಕ ಸರ್ಕಾರವು, ರಾಜ್ಯದ 101 ತಾಲೂಕುಗಳನ್ನು ತಕ್ಷಣವೇ ಜಾರಿಗೆ ಬರುವಂತೆ ಕೆಂದು ಬರಪೀಡಿತ ಎಂದು ಅಧಿಕೃತವಾಗಿ ಘೋಷಿಸಿರುವುದಾಗಿ ಮುಖ್ಯಮಂತ್ರಿ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಜೂನ್ 1 ರಿಂದ ಆಗಸ್ಟ್ 21, 2026 ರವರೆಗಿನ ಅವಧಿಯಲ್ಲಿ ಮಳೆ ಕೊರತೆ ತೀವ್ರವಾಗಿದೆ. ಸರ್ಕಾರದ ದತ್ತಾಂಶದ ಪ್ರಕಾರ, ರಾಜ್ಯದ 29 ಜಿಲ್ಲೆಗಳಲ್ಲಿ ಮಳೆ ಕೊರತೆ ದಾಖಲಾಗಿದ್ದು, ಕೇವಲ 2 ಜಿಲ್ಲೆಗಳಲ್ಲಿ ಮಾತ್ರ ಸಾಮಾನ್ಯ ಮಳೆಯಾಗಿದೆ. ತಾಲೂಕು ಮಟ್ಟದಲ್ಲಿ ನೋಡಿದರೆ, 176 ತಾಲೂಕುಗಳು ಮಳೆ ಕೊರತೆ ಹಾಗೂ 15 ತಾಲೂಕುಗಳು ತೀವ್ರ ಮಳೆ ಕೊರತೆಯ ವರ್ಗಕ್ಕೆ ಸೇರಿವೆ. ಕೇವಲ 49 ತಾಲೂಕುಗಳಲ್ಲಿ ಮಾತ್ರ ಸಾಮಾನ್ಯ ಅಥವಾ ಅಧಿಕ ಮಳೆಯಾಗಿದೆ.
ವೈಜ್ಞಾನಿಕ ಮೌಲ್ಯಮಾಪನ ಮತ್ತು ನಿಗದಿತ ಮಾರ್ಗಸೂಚಿಗಳ ಆಧಾರದ ಮೇಲೆ, ಈ ಆದೇಶದಲ್ಲಿ 89 ತಾಲೂಕುಗಳನ್ನು ತೀವ್ರವಾಗಿ ಬಾದಿತ ಹಾಗೂ 12 ತಾಲೂಕುಗಳನ್ನು ಮಧ್ಯಮವಾಗಿ ಬರ ಪೀಡಿತ ಎಂದು ವರ್ಗೀಕರಿಸಲಾಗಿದೆ. ಸರ್ಕಾರದ ಮುಂದಿನ ಆದೇಶದವರೆಗೆ ಈ ಕರಾರು ಆರು ತಿಂಗಳ ಕಾಲ ಜಾರಿಯಲ್ಲಿರುತ್ತದೆ.
ಎಸ್ಡಿಆರ್ಎಫ್ ನಿಯಮಗಳಡಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಮತ್ತು ಜಂಟಿ ಬೆಳೆ ಹಾನಿ ಸಮೀಕ್ಷೆಯನ್ನು ತುರ್ತಾಗಿ ನಡೆಸಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಮಳೆಯ ಮುನ್ಸೂಚನೆ ಹಾಗೂ ಬೆಳೆ ಪರಿಸ್ಥಿತಿಯನ್ನು ಅವಲೋಕಿಸಿ, ಸರ್ಕಾರವು ಪ್ರತಿ ವಾರ ಈ ಪರಿಸ್ಥಿತಿಯನ್ನು ಪರಿಶೀಲಿಸಲಿದೆ. ಪರಿಸ್ಥಿತಿಗೆ ತಕ್ಕಂತೆ ಮುಂದಿನ ದಿನಗಳಲ್ಲಿ ಹೆಚ್ಚಿನ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲಾಗುವುದು.ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿರುವ ಸರ್ಕಾರ, ಈ ಕಷ್ಟದ ಸಮಯದಲ್ಲಿ ರೈತಬಂಧುಗಳ ಬೆನ್ನೆಲುಬಾಗಿ ನಿಲ್ಲುವುದಾಗಿ ಭರವಸೆ ನೀಡಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R