
ಇತಿಹಾಸದ ಪುಟಗಳಲ್ಲಿ ಆಗಸ್ಟ್ 27:
ವಿಮಾನಯಾನ ಇತಿಹಾಸದಲ್ಲಿ ಆಗಸ್ಟ್ 27 ಮಹತ್ವದ ದಿನವಾಗಿ ದಾಖಲಾಗಿದೆ. 1939ರ ಇದೇ ದಿನ ಜರ್ಮನಿಯಲ್ಲಿ ಜೆಟ್ ಎಂಜಿನ್‌ನಿಂದ ಚಾಲಿತವಾದ ವಿಶ್ವದ ಮೊದಲ ವಿಮಾನ ಹೆಂಕೆಲ್ ಹೇ-178 ಯಶಸ್ವಿಯಾಗಿ ಮೊದಲ ಹಾರಾಟ ನಡೆಸಿತು. ಈ ಐತಿಹಾಸಿಕ ಹಾರಾಟವು ಆಧುನಿಕ ಜೆಟ್ ವಿಮಾನಯಾನದ ಅಭಿವೃದ್ಧಿಗೆ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿತು.
ಜರ್ಮನ್ ವಿಮಾನ ತಯಾರಕ ಹಾಗೂ ಎಂಜಿನಿಯರ್ ಎರ್ನ್ಸ್ಟ್ ಹೈಂಕೆಲ್ ಅವರ ನೇತೃತ್ವದಲ್ಲಿ ನಿರ್ಮಿಸಲಾದ ಹೇ-178 ವಿಮಾನದಲ್ಲಿ ಟರ್ಬೋಜೆಟ್ ಎಂಜಿನ್ ಬಳಸಲಾಗಿತ್ತು. ಆ ಕಾಲದ ಸಾಂಪ್ರದಾಯಿಕ ವಿಮಾನ ತಂತ್ರಜ್ಞಾನಕ್ಕಿಂತ ಭಿನ್ನವಾಗಿದ್ದ ಈ ವಿಮಾನವು ಭವಿಷ್ಯದ ವೇಗದ ಪ್ರಯಾಣಿಕ ಹಾಗೂ ಯುದ್ಧವಿಮಾನಗಳ ಅಭಿವೃದ್ಧಿಗೆ ಪ್ರಮುಖ ಅಡಿಪಾಯ ಹಾಕಿತು.
ಆದರೆ ಜರ್ಮನ್ ವಾಯುಪಡೆಯು ಹೇ-178 ವಿಮಾನವನ್ನು ತನ್ನ ಬಳಕೆಗೆ ಸೇರಿಸಿಕೊಳ್ಳಲಿಲ್ಲ. ಅಲ್ಲದೆ, ಅಂದಿನ ಸೇನಾ ಅಧಿಕಾರಿಗಳಿಂದ ಇದರ ಅಭಿವೃದ್ಧಿಗೆ ನಿರೀಕ್ಷಿತ ಬೆಂಬಲವೂ ದೊರೆಯಲಿಲ್ಲ. ಆದರೂ ಜೆಟ್ ಎಂಜಿನ್ ತಂತ್ರಜ್ಞಾನದ ಸಂಶೋಧನೆ ಮತ್ತು ಪ್ರಯೋಗಗಳು ಮುಂದುವರಿದವು. ನಂತರದ ವರ್ಷಗಳಲ್ಲಿ ಈ ತಂತ್ರಜ್ಞಾನವು ವಿಮಾನಯಾನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳಿಗೆ ಕಾರಣವಾಯಿತು. ಇಂದು ವಿಶ್ವದ ಬಹುತೇಕ ಆಧುನಿಕ ಪ್ರಯಾಣಿಕ ವಿಮಾನಗಳು ಜೆಟ್ ಎಂಜಿನ್‌ನ ಶಕ್ತಿಯಿಂದ ಹಾರಾಟ ನಡೆಸುತ್ತಿವೆ.
ಪ್ರಮುಖ ಘಟನೆಗಳು
1604 – ಅಮೃತಸರದ ಸ್ವರ್ಣಮಂದಿರದಲ್ಲಿ ಆದಿ ಗುರು ಗ್ರಂಥ ಸಾಹಿಬ್ ಪ್ರತಿಷ್ಠಾಪನೆ ಮಾಡಲಾಯಿತು.
1781 – ಹೈದರ್ ಅಲಿ ಬ್ರಿಟಿಷ್ ಸೇನೆಯ ವಿರುದ್ಧ ಪಲ್ಲಿಲೂರ್ ಯುದ್ಧ ನಡೆಸಿದರು.
1870 – ಭಾರತದ ಮೊದಲ ಕಾರ್ಮಿಕ ಸಂಘಟನೆಗಳಲ್ಲಿ ಒಂದಾದ ಶ್ರಮಜೀವಿ ಸಂಘ ಸ್ಥಾಪನೆಯಾಯಿತು.
1939 – ಜೆಟ್ ಎಂಜಿನ್‌ನಿಂದ ಚಾಲಿತವಾದ ವಿಶ್ವದ ಮೊದಲ ವಿಮಾನ ಜರ್ಮನಿಯಲ್ಲಿ ಮೊದಲ ಹಾರಾಟ ನಡೆಸಿತು.
1970 – ಭಾರತೀಯ ಸಶಸ್ತ್ರ ಪಡೆಗಳ ಮೊದಲ ಮಹಿಳಾ ಜನರಲ್ ಮೇಜರ್ ಜನರಲ್ ಜಿ. ಅಲಿ ರಾಮ್ ಅವರನ್ನು ಮಿಲಿಟರಿ ನರ್ಸಿಂಗ್ ಸೇವೆಯ ನಿರ್ದೇಶಕರಾಗಿ ನೇಮಿಸಲಾಯಿತು.
1979 – ಐರ್ಲೆಂಡ್ ಸಮೀಪ ದೋಣಿಯೊಂದರಲ್ಲಿ ಸ್ಫೋಟ ಸಂಭವಿಸಿತು.
1985 – ನೈಜೀರಿಯಾದಲ್ಲಿ ನಡೆದ ಸೇನಾ ಕ್ರಾಂತಿಯಲ್ಲಿ ಮೇಜರ್ ಜನರಲ್ ಮುಹಮ್ಮದ್ ಬುಹಾರಿ ಅವರ ಸರ್ಕಾರ ಪತನಗೊಂಡು, ಜನರಲ್ ಇಬ್ರಾಹಿಂ ಬಾಬಂಗಿದಾ ಹೊಸ ಸೇನಾ ಆಡಳಿತಗಾರರಾದರು.
1990 – ವಾಷಿಂಗ್ಟನ್‌ನಲ್ಲಿದ್ದ ಇರಾಕ್ ರಾಯಭಾರ ಕಚೇರಿಯ 55 ಸಿಬ್ಬಂದಿಯ ಪೈಕಿ 36 ಮಂದಿಯನ್ನು ಅಮೆರಿಕ ಗಡೀಪಾರು ಮಾಡಿತು.
1991 – ಮೊಲ್ಡೋವಾ ಸೋವಿಯತ್ ಒಕ್ಕೂಟದಿಂದ ಸ್ವಾತಂತ್ರ್ಯ ಘೋಷಿಸಿತು.
1999 – ಸೋನಾಲಿ ಬ್ಯಾನರ್ಜಿ ಭಾರತದ ಮೊದಲ ಮಹಿಳಾ ಮೆರೈನ್ ಎಂಜಿನಿಯರ್ ಆದರು.
1999 – ಕಾರ್ಗಿಲ್ ಸಂಘರ್ಷದ ಸಂದರ್ಭದಲ್ಲಿ ಭಾರತದಲ್ಲಿ ಬಂಧಿತರಾಗಿದ್ದ ಪಾಕಿಸ್ತಾನದ ಯುದ್ಧ ಕೈದಿಗಳನ್ನು ಬಿಡುಗಡೆ ಮಾಡಲಾಯಿತು.
2003 – ಸುಮಾರು 60 ಸಾವಿರ ವರ್ಷಗಳ ಬಳಿಕ ಮಂಗಳ ಗ್ರಹವು ಭೂಮಿಗೆ ಅತ್ಯಂತ ಸಮೀಪಕ್ಕೆ ಬಂದಿತು.
2004 – ಹಣಕಾಸು ಸಚಿವ ಶೌಕತ್ ಅಜೀಜ್ ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಆಯ್ಕೆಯಾದರು.
2008 – ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಕೆ. ಮಾಥುರ್ ಅವರನ್ನು ಸಶಸ್ತ್ರ ಪಡೆಗಳ ನ್ಯಾಯಮಂಡಳಿಯ ಮೊದಲ ಅಧ್ಯಕ್ಷರಾಗಿ ನೇಮಿಸಲಾಯಿತು.
2008 – ಜಾರ್ಖಂಡ್ ಮುಕ್ತಿ ಮೋರ್ಚಾ ಮುಖ್ಯಸ್ಥ ಶಿಬು ಸೊರೆನ್ ಜಾರ್ಖಂಡ್‌ನ ಆರನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
2009 – ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಅವರನ್ನು ಮೂರನೇ ಬಾರಿಗೆ ಪಕ್ಷದ ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಯಿತು.
2013 – ಉತ್ತರ ಪ್ರದೇಶದ ಮುಜಫರ್‌ನಗರದಲ್ಲಿ ಎರಡು ಧಾರ್ಮಿಕ ಸಮುದಾಯಗಳ ನಡುವೆ ಗಲಭೆ ಸಂಭವಿಸಿತು.
ಜನನ
1859 – ದೋರಾಬ್ಜಿ ಟಾಟಾ, ದೇಶದ ಪ್ರಮುಖ ಉದ್ಯಮಿ ಹಾಗೂ ಟಾಟಾ ಸ್ಟೀಲ್ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು.
1908 – ಸರ್ ಡಾನ್ ಬ್ರಾಡ್‌ಮನ್, ಆಸ್ಟ್ರೇಲಿಯಾದ ಶ್ರೇಷ್ಠ ಕ್ರಿಕೆಟ್ ಬ್ಯಾಟರ್‌ಗಳಲ್ಲಿ ಒಬ್ಬರು.
1957 – ಎನ್.ವಿ. ರಮಣ, ಭಾರತದ 48ನೇ ಮುಖ್ಯ ನ್ಯಾಯಮೂರ್ತಿ.
1993 – ಸಿ.ಎ. ಭವಾನಿ ದೇವಿ, ಭಾರತದ ಖ್ಯಾತ ಮಹಿಳಾ ಕತ್ತಿವರಸೆ ಕ್ರೀಡಾಪಟು.
ನಿಧನ
1963 – ಇನಾಯತುಲ್ಲಾ ಖಾನ್ ಮಶ್ರಿಕಿ, ಖಾಕ್ಸಾರ್ ಚಳವಳಿಯ ಸಂಸ್ಥಾಪಕ.
1976 – ಮುಕೇಶ್, ಖ್ಯಾತ ಭಾರತೀಯ ಹಿನ್ನೆಲೆ ಗಾಯಕ.
1979 – ಲಾರ್ಡ್ ಮೌಂಟ್‌ಬ್ಯಾಟನ್, ಬ್ರಿಟಿಷ್ ರಾಜಕಾರಣಿ, ನೌಕಾಪಡೆಯ ಮುಖ್ಯಸ್ಥ ಹಾಗೂ ಭಾರತದ ಕೊನೆಯ ವೈಸರಾಯ್.
1982 – ಆನಂದಮಯಿ ಮಾ.
1997 – ಮಗಂಟಿ ಅಂಕಿನೀಡು, ಮಾಜಿ ಲೋಕಸಭಾ ಸದಸ್ಯ.
1997 – ಆನಂದ್ ಸಿಂಗ್, ಮಾಜಿ ಲೋಕಸಭಾ ಸದಸ್ಯ.
1997 – ಪಿ. ಅಂಕಿನೀಡು ಪ್ರಸಾದ್ ರಾವ್, ಮಾಜಿ ಲೋಕಸಭಾ ಸದಸ್ಯ.
2006 – ಋಷಿಕೇಶ್ ಮುಖರ್ಜಿ, ಖ್ಯಾತ ಭಾರತೀಯ ಚಲನಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕ.
2010 – ರವೀಂದ್ರ ಕೇಲ್ಕರ್, ಕೊಂಕಣಿ ಸಾಹಿತ್ಯದ ಪ್ರಮುಖ ಸಾಹಿತಿ.
ಪ್ರಮುಖ ಆಚರಣೆ
ರಾಷ್ಟ್ರೀಯ ನೇತ್ರದಾನ ದಿನ
---------
ಹಿಂದೂಸ್ತಾನ್ ಸಮಾಚಾರ್ / Rakesh.M.B.