ಐಪಿಸಿ ಕಂಪನಿಯಿಂದ 83 ಸಾವಿರ ಕೋಟಿ ಹೂಡಿಕೆಗೆ ಒಲವು:ಎಂ.ಬಿ.ಪಾಟೀಲ
1,000 ಎಕರೆ ಭೂಮಿಗೆ ಬೇಡಿಕೆ
Banglore tumkur


ಬೆಂಗಳೂರು, 25 ಆಗಸ್ಟ್ (ಹಿ.ಸ.)

ಆ್ಯಂಕರ್:

ಡಿಜಿಟಲ್ ಮೂಲಸೌಕರ್ಯ, ನವೀಕರಿಸಬಹುದಾದ ಇಂಧನ ಹಾಗೂ ಗ್ರೀನ್ ಹೈಡ್ರೋಜನ್ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಲಕ್ಸಂಬರ್ಗ್ ಮೂಲದ 'ಇನ್ನೋವೇಶನ್ ಪ್ಲಾಟ್ಫಾರ್ಮ್ ಕ್ಯಾಪಿಟಲ್' ಕಂಪನಿಯು ಕರ್ನಾಟಕದಲ್ಲಿ ಒಟ್ಟು ₹83,000 ಕೋಟಿ ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸಚಿವ ಎಂ.ಬಿ. ಪಾಟೀಲ ಅವರನ್ನು ಭೇಟಿಯಾದ ಕಂಪನಿಯ ಉನ್ನತ ಮಟ್ಟದ ನಿಯೋಗವು ಈ ಕುರಿತು ಅಧಿಕೃತ ಪ್ರಸ್ತಾವನೆ ಸಲ್ಲಿಸಿದ್ದು, ಬೆಂಗಳೂರು-ತುಮಕೂರು ಪ್ರದೇಶದಲ್ಲಿ 1,000 ಎಕರೆ ಜಮೀನು ಒದಗಿಸುವಂತೆ ಬೇಡಿಕೆ ಇಟ್ಟಿದೆ.

ಡೇಟಾ ಸೆಂಟರ್: ಮೊದಲ ಹಂತದಲ್ಲಿ ತಲಾ 200 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಡೇಟಾ ಸೆಂಟರ್ಗಳು ಸೇರಿದಂತೆ ಒಟ್ಟು 1,000 ಮೆಗಾವ್ಯಾಟ್ ಸಾಮರ್ಥ್ಯದ ಹೈಪರ್ಸ್ಕೇಲ್ ಡೇಟಾ ಸೆಂಟರ್ಗಳನ್ನು ಸ್ಥಾಪಿಸಲಾಗುತ್ತದೆ.

ಗ್ರೀನ್ ಹೈಡ್ರೋಜನ್: ಇಂಟಿಗ್ರೇಟೆಡ್ ಗ್ರೀನ್ ಹೈಡ್ರೋಜನ್ ಯೋಜನೆ ಹಾಗೂ 500 ಮೆಗಾವ್ಯಾಟ್ ಸಾಮರ್ಥ್ಯದ ಗ್ರೀನ್ ಹೈಡ್ರೋಜನ್ ಸ್ಥಾವರ ಮತ್ತು ಇಂಧನ ಸಂಕೀರ್ಣ ನಿರ್ಮಿಸಲಾಗುವುದು.

ನೀರಿನ ಬಳಕೆ: ಈ ಬೃಹತ್ ಯೋಜನೆಗಳಿಗೆ ಪ್ರತಿದಿನ ಅಂದಾಜು 13 ದಶಲಕ್ಷ ಲೀಟರ್ ನೀರು ಬೇಕಾಗಿದ್ದು, ಇದರಲ್ಲಿ ಶೇಕಡಾ 85ರಷ್ಟು ನೀರನ್ನು ಸಂಸ್ಕರಿತ ಮೂಲಗಳಿಂದಲೇ ಪಡೆದುಕೊಳ್ಳಲು ಕಂಪನಿ ನಿರ್ಧರಿಸಿದೆ.

ಈ ಬೃಹತ್ ಹೂಡಿಕೆಯಿಂದ ರಾಜ್ಯದಲ್ಲಿ ಡಿಜಿಟಲ್ ಮೂಲಸೌಕರ್ಯಗಳು ಬಲಗೊಳ್ಳುವುದಲ್ಲದೆ, ನವೀಕರಿಸಬಹುದಾದ ಇಂಧನ ಮತ್ತು ಹಸಿರು ಇಂಧನ ಕ್ಷೇತ್ರದಲ್ಲಿ ಕರ್ನಾಟಕವು ದೇಶದಲ್ಲೇ ಮುಂಚೂಣಿ ಸ್ಥಾನ ಪಡೆಯಲಿದೆ ಎಂದು ಸಚಿವರು ಸಾಮಾಜಿಕ ಜಾಲತಾಣ ಎಕ್ಸನಲ್ಲಿ ಹೇಳಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande