ಕೋಲಾರ ಜಿಲ್ಲೆಯಲ್ಲಿ ಕರಡು ಮತದಾರರ ಪಟ್ಟಿಯಿಂದ ೧.೭೧ ಲಕ್ಷ ಮತದಾರರ ಹೆಸರುಗಳು ರದ್ದು
ಕೋಲಾರ ಜಿಲ್ಲೆಯಲ್ಲಿ ಕರಡು ಮತದಾರರ ಪಟ್ಟಿಯಿಂದ ೧.೭೧ ಲಕ್ಷ ಮತದಾರರ ಹೆಸರುಗಳು ರದ್ದು
ಕೋಲಾರ ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್


ಕೋಲಾರ: ಆಗಸ್ಟ್ ೨೪ (ಹಿ.ಸ.)

ಆ್ಯಂಕರ್ : ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಪ್ರತಿಯೊಬ್ಬ ಅರ್ಹ ನಾಗರಿಕರೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿ, ಭಾವಚಿತ್ರವಿರುವ ಗುರುತಿನ ಚೀಟಿ ಪಡೆಯಬೇಕು. ಈ ಮೂಲಕ ಪ್ರಜಾಪ್ರಭುತ್ವದ ಬಲವರ್ಧನೆಯಲ್ಲಿ ಸರ್ವರೂ ಪಾಲ್ಗೊಳ್ಳಬೇಕು. ಸಮಗ್ರ ಮತದಾರರ ಪಟ್ಟಿಯ ಪರಿಷ್ಕರಣೆಯ ನಂತರ ೧.೭೧ ಲಕ್ಷ ಮತದಾರರನ್ನು ವಿವಿಧ ಕಾರಣಗಳಿಂದ ಮತದಾರರ ಪಟ್ಟಿಯಿಂದ ಅಳಿಸಿ ಹಾಕಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಂ.ಆರ್. ರವಿಕುಮಾರ್ ಮಾಧ್ಯಮಗಳಿಗೆ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆಯ ಕರಡು ಮತದಾರರ ಪಟ್ಟಿ ಪ್ರಕಟಣೆಯ ಬಗ್ಗೆ ಮಾಹಿತಿ ನೀಡಿದರು.

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಸಿದ್ಧಪಡಿಸಲಾಗಿರುವ ಈ ಕರಡು ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ ಪ್ರಸ್ತುತ ಒಟ್ಟು ೧೧,೨೪,೨೩೧ ಮತದಾರರಿದ್ದಾರೆ. ಈ ಪೈಕಿ ೫,೫೮,೬೮೦ ಪುರುಷರು, ೫,೬೫,೪೬೧ ಮಹಿಳೆಯರು ಹಾಗೂ ೯೦ ಇತರ ಮತದಾರರಿದ್ದು, ಜಿಲ್ಲೆಯ ಒಟ್ಟು ಲಿಂಗಾನುಪಾತ ೧೦೧೨ ಆಗಿದೆ ಎಂದರು.

ಜೂನ್ ೧೬ ರಂದು ಜಿಲ್ಲೆಯಲ್ಲಿ ೧೨.೯೫ ಲಕ್ಷ ಮತದಾರರಿದ್ದರು, ಆದರೆ ಮತದಾರರ ಪಟ್ಟಿಯನ್ನು ದೋಷರಹಿತಗೊಳಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಒಟ್ಟು ೧,೭೧,೦೩೪ ಜನರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಇದರಲ್ಲಿ ಶಾಶ್ವತವಾಗಿ ವರ್ಗಾವಣೆಗೊಂಡ ೮೬,೯೯೨, ಗೈರು ಹಾಜರಾದ ೩೭,೫೨೭, ಮರಣ ಹೊಂದಿದ ೨೯,೦೦೬ ಹಾಗೂ ದ್ವಿಮುದ್ರಣಗೊಂಡ ೧೬,೨೮೫ ಮತದಾರರ ಹೆಸರುಗಳನ್ನು ಅಳಿಸಲಾಗಿದೆ. ಇದೇ ವೇಳೆ ಬಿಎಲ್ಒ ಗಳಿಂದ ಶೇ. ೮೬.೮೦ ರಷ್ಟು ಗಣತಿ ನಮೂನೆಗಳ ಡಿಜಿಟೈಸೇಷನ್ ಕಾರ್ಯ ಮುಕ್ತಾಯವಾಗಿದೆ ಹಾಗೂ ೬,೪೪೯ ನಮೂನೆಗಳು ಆನ್ಲೈನ್ ಮೂಲಕ ಸಲ್ಲಿಕೆಯಾಗಿವೆ ಎಂದು ಅವರು ಮಾಹಿತಿ ಹಂಚಿಕೊಂಡರು.

ಜಿಲ್ಲೆಯ ೬ ವಿಧಾನಸಭಾ ಕ್ಷೇತ್ರಗಳ ಅಂಕಿ-ಅ0ಶಗಳನ್ನು ಮಾಧ್ಯಮಗಳ ಮುಂದಿಟ್ಟ ಜಿಲ್ಲಾಧಿಕಾರಿಗಳು, ಕೋಲಾರ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ ೧,೦೩,೭೧೦ ಪುರುಷರು ಮತ್ತು ೧,೦೪,೭೩೨ ಮಹಿಳೆಯರು ಸೇರಿ ೨,೦೮,೪೬೬ ಮತದಾರರಿದ್ದಾರೆ ಎಂದರು. ಅಂತೆಯೇ ಶ್ರೀನಿವಾಸಪುರದಲ್ಲಿ ೧,೯೭,೦೪೪, ಮುಳಬಾಗಿಲಿನಲ್ಲಿ ೧,೯೬,೩೮೦, ಕೆ.ಜಿ.ಎಫ್ನಲ್ಲಿ ೧,೬೩,೩೨೬, ಬಂಗಾರಪೇಟೆಯಲ್ಲಿ ೧,೮೦,೮೮೫ ಹಾಗೂ ಮಾಲೂರು ಕ್ಷೇತ್ರದಲ್ಲಿ ೧,೭೮,೧೩೦ ಮತದಾರರಿದ್ದಾರೆ ಎಂದು ವಿವರಿಸಿದರು.

ಇದೇ ವೇಳೆ, ಮತದಾರರ ಅನುಕೂಲಕ್ಕಾಗಿ ೧೨೦೦ಕ್ಕೂ ಹೆಚ್ಚು ಜನರಿರುವ ಮತಗಟ್ಟೆಗಳನ್ನು ವಿಭಜಿಸಿ ಜಿಲ್ಲೆಯಲ್ಲಿ ಹೊಸದಾಗಿ ೪೦ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಸ್ಥಾಪಿಸಲಾಗಿದೆ. ಶ್ರೀನಿವಾಸಪುರದಲ್ಲಿ ೪, ಮುಳಬಾಗಿಲಿನಲ್ಲಿ ೧೦, ಕೆ.ಜಿ.ಎಫ್ನಲ್ಲಿ ೩, ಬಂಗಾರಪೇಟೆಯಲ್ಲಿ ೬, ಕೋಲಾರದಲ್ಲಿ ೯ ಹಾಗೂ ಮಾಲೂರಿನಲ್ಲಿ ೮ ಹೊಸ ಮತಗಟ್ಟೆಗಳ ಸೇರ್ಪಡೆಯೊಂದಿಗೆ ಜಿಲ್ಲೆಯ ಒಟ್ಟು ಮತಗಟ್ಟೆಗಳ ಸಂಖ್ಯೆ ೧,೫೩೮ ರಿಂದ ೧,೫೭೮ ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದರು. ಇನ್ನು ಜಿಲ್ಲೆಯಲ್ಲಿ ೧೪,೦೭೫ ಯುವ, ೧,೦೪೬ ಸೇವಾ, ೧೩,೭೫೪ ವಿಶೇಷ ಚೇತನ ಹಾಗೂ ೧೧,೧೧೨ ಹಿರಿಯ ನಾಗರೀಕ ಮತದಾರರಿದ್ದಾರೆ ಎಂದರು.

ಕರಡು ಪಟ್ಟಿಯಲ್ಲಿ ಮೃತಪಟ್ಟವರ ಹೆಸರುಗಳು ಇನ್ನೂ ಉಳಿದುಕೊಂಡಿದ್ದಲ್ಲಿ ಸೂಕ್ತ ದಾಖಲಾತಿಗಳನ್ನು ಒದಗಿಸಿ ಆ ಹೆಸರುಗಳನ್ನು ಕೈಬಿಡಲು ಜಿಲ್ಲೆಯಲ್ಲಿ ನೇಮಕವಾಗಿರುವ ೪೦೦೬ ಬೂತ್ ಮಟ್ಟದ ಏಜೆಂಟರು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

ಅಕ್ಟೋಬರ್ ೧, ೨೦೨೬ ಕ್ಕೆ ೧೮ ವರ್ಷ ವಯಸ್ಸು ಪೂರೈಸುವವರು ಮೊದಲ ಬಾರಿಗೆ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಅವಕಾಶ ಕಲ್ಪಿಸಲಾಗಿದೆ. ಕರಡು ಮತದಾರರ ಪಟ್ಟಿಗಳ ಪ್ರಕಟಣೆ ನಂತರದ ಚಟುವಟಿಕೆಗಳ ಭಾಗವಾಗಿ ಮತದಾರರ ಪಟ್ಟಿಗೆ ಸೇರ್ಪಡೆ, ತಿದ್ದುಪಡಿ ಹಾಗೂ ಆಕ್ಷೇಪಣೆಗಳ ಸಲ್ಲಿಕೆಗೆ ಆಗಸ್ಟ್ ೨೪, ೨೦೨೬ ರಿಂದ ಸೆಪ್ಟೆಂಬರ್ ೨೩, ೨೦೨೬ ರವರೆಗೆ ಅವಕಾಶವಿರುತ್ತದೆ. ಹೊಸ ಸೇರ್ಪಡೆಗಾಗಿ ನಮೂನೆ-೬ ನ್ನು ಜನನ ಪ್ರಮಾಣಪತ್ರ, ಆಧಾರ್, ಪಾನ್ಕಾರ್ಡ್, ಚಾಲನಾ ಪರವಾನಗಿ, ಎಸ್ಎಸ್ಎಲ್ಸಿ ಅಂಕಪಟ್ಟಿ ಅಥವಾ ಪಾಸ್ಪೋರ್ಟ್ ಮುಂತಾದ ವಯಸ್ಸು ದೃಢೀಕರಣ ದಾಖಲೆಗಳೊಂದಿಗೆ ಸಲ್ಲಿಸಬೇಕು.

ಆಕ್ಷೇಪಣೆಗಳಿಗಾಗಿ ನಮೂನೆ-೭ ಮತ್ತು ತಿದ್ದುಪಡಿ ಹಾಗೂ ವರ್ಗಾವಣೆಗಾಗಿ ನಮೂನೆ-೮ ನ್ನು ವಿದ್ಯುತ್ ಅಥವಾ ನೀರಿನ ಬಿಲ್, ಆಧಾರ್, ಬ್ಯಾಂಕ್ ಪಾಸ್ಬುಕ್, ಕಂದಾಯ ಇಲಾಖೆ ದಾಖಲೆ, ನೋಂದಾಯಿತ ಬಾಡಿಗೆ ಕರಾರು ಅಥವಾ ಮಾರಾಟ ಪತ್ರ ಮುಂತಾದ ವಿಳಾಸ ದೃಢೀಕರಣ ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಜಾಲತಾಣ ಅಥವಾ ಕೋಲಾರ ಜಿಲ್ಲಾಡಳಿತದ ವೆಬ್ಸೈಟ್ ಪರಿಶೀಲಿಸಬಹುದು ಹಾಗೂ ಆನ್ಲೈನ್ ಮೂಲಕ ವೋಟರ್ಸ್ ಪೋರ್ಟಲ್, ವೋಟರ್ ಹೆಲ್ಪ್ಲೈನ್ ಆಪ್ ಮತ್ತು ಬಿಎಲ್ಒ ಗಳ ಮೂಲಕವೂ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande