ಸರಕಾರದಿಂದ ವೈದ್ಯಕೀಯ ಸೀಟುಗಳಲ್ಲೂ ಲೂಟಿ:ಅಶೋಕ
ಬೆಂಗಳೂರು, 17 ಆಗಸ್ಟ್ (ಹಿ.ಸ.): ಆ್ಯಂಕರ್:ಜೆನ್‌ ಝಿ ಹೆಸರಿನಲ್ಲಿ ಭಾಷಣ ಮಾಡುತ್ತಾ ದೆಹಲಿಯಲ್ಲಿ ಮೊಸಳೆ ಕಣ್ಣೀರು ಸುರಿಸುವ ಕಾಂಗ್ರೆಸ್ ನಾಯಕರು, ಕರ್ನಾಟಕದಲ್ಲಿ ಮಾತ್ರ ಬಡ ಮತ್ತು ಮಧ್ಯಮ ವರ್ಗದ ಪ್ರತಿಭಾವಂತ ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯವನ್ನು ಖಾಸಗಿ ಸಂಸ್ಥೆಗಳ ಪಾಲು ಮಾಡುತ್ತಿದ್ದಾರೆ ಎಂದು
ಅಶೋಕ


ಬೆಂಗಳೂರು, 17 ಆಗಸ್ಟ್ (ಹಿ.ಸ.):

ಆ್ಯಂಕರ್:ಜೆನ್‌ ಝಿ ಹೆಸರಿನಲ್ಲಿ ಭಾಷಣ ಮಾಡುತ್ತಾ ದೆಹಲಿಯಲ್ಲಿ ಮೊಸಳೆ ಕಣ್ಣೀರು ಸುರಿಸುವ ಕಾಂಗ್ರೆಸ್ ನಾಯಕರು, ಕರ್ನಾಟಕದಲ್ಲಿ ಮಾತ್ರ ಬಡ ಮತ್ತು ಮಧ್ಯಮ ವರ್ಗದ ಪ್ರತಿಭಾವಂತ ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯವನ್ನು ಖಾಸಗಿ ಸಂಸ್ಥೆಗಳ ಪಾಲು ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಆರೋಪಿಸಿದ್ದಾರೆ.

ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ಸಂಸ್ಥೆಗಳ ಹೆಸರಿನಲ್ಲಿ ನಡೆಯುತ್ತಿರುವ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕಾಲೇಜುಗಳಲ್ಲಿ ಸರ್ಕಾರದ ಕೋಟಾದಡಿ ಸಿಗಬೇಕಾದ ಶೇ.15ರಷ್ಟು ಸೀಟುಗಳಿಗೂ ₹11.88 ಲಕ್ಷದವರೆಗೆ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಗಳಿವೆ. ಈ ಕುರಿತು ವೈದ್ಯಕೀಯ ಶಿಕ್ಷಣ ಇಲಾಖೆ ಏಕೆ ಮೌನವಾಗಿದೆ ಎಂದು ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರನ್ನು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿರುವ 13 ಡೀಮ್ಡ್ ವಿಶ್ವವಿದ್ಯಾಲಯಗಳ 3,100 ವೈದ್ಯಕೀಯ ಸೀಟುಗಳಲ್ಲಿ ರಾಜ್ಯ ಕೋಟಾಕ್ಕೆ ಸಿಗುತ್ತಿರುವುದು ಕೇವಲ 189 ಸೀಟುಗಳು. ಸರ್ಕಾರದಿಂದ ಮೂಲಸೌಕರ್ಯ, ಅನುಮತಿ ಹಾಗೂ ನಿರಾಕ್ಷೇಪಣಾ ಪತ್ರಗಳನ್ನು ಪಡೆದುಕೊಂಡು, ವಿದ್ಯಾರ್ಥಿಗಳಿಂದ ₹1 ಕೋಟಿಗೂ ಅಧಿಕ ಶುಲ್ಕ ವಸೂಲಿ ಮಾಡಲಾಗುತ್ತಿದ್ದರೂ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಶೋಕ ಆರೋಪಿಸಿದ್ದಾರೆ.

24 ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ನಿಯಮಾನುಸಾರ ವಿದ್ಯಾರ್ಥಿಗಳಿಗೆ ದೊರೆಯಬೇಕಾದ ಸೀಟುಗಳು ಮತ್ತು ಸೌಲಭ್ಯಗಳ ವಿಚಾರದಲ್ಲೂ ಇಲಾಖೆ ಕಣ್ಣುಮುಚ್ಚಿ ಕುಳಿತಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಕ್ಷಣ ಮಧ್ಯಪ್ರವೇಶಿಸಿ ರಾಜ್ಯ ಕೋಟಾದ ಸೀಟುಗಳ ಸಂಪೂರ್ಣ ವಿವರ ಬಹಿರಂಗಪಡಿಸಬೇಕು, ವಸೂಲಾಗುತ್ತಿರುವ ಶುಲ್ಕದ ಕುರಿತು ಶ್ವೇತಪತ್ರ ಹೊರಡಿಸಬೇಕು, ನಿಯಮ ಉಲ್ಲಂಘಿಸುವ ಕಾಲೇಜುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

₹1 ಕೋಟಿ ನೀಡಿ ವೈದ್ಯರಾಗುವ ಅವಕಾಶ ಎಲ್ಲರಿಗೂ ಇರಲಾರದು. ಆದರೆ ಪ್ರತಿಭೆ ಹೊಂದಿರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ನ್ಯಾಯಯುತ ಅವಕಾಶ ಸಿಗಬೇಕು. ಸರ್ಕಾರ ಖಾಸಗಿ ವೈದ್ಯಕೀಯ ಕಾಲೇಜುಗಳ ಹಿತ ಕಾಯುತ್ತಿದ್ದರೆ, ವಿದ್ಯಾರ್ಥಿಗಳಿಗೆ ಇದಕ್ಕಿಂತ ದೊಡ್ಡ ದ್ರೋಹ ಮತ್ತೊಂದಿಲ್ಲ ಎಂದು ಅಶೋಕ ಹೇಳಿದ್ದಾರೆ.

ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ವಿದ್ಯಾರ್ಥಿಗಳು ಮತ್ತು ಪೋಷಕರ ಪರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande