
ಮುಂಬೈ, 16 ಆಗಸ್ಟ್ (ಹಿ.ಸ.):
ಆ್ಯಂಕರ್:
ಮಹಾರಾಷ್ಟ್ರದ ಕೊಲಾಬಾ ಪ್ರದೇಶದ ನೇವಿ ನಗರದಲ್ಲಿರುವ ನೌಕಾಪಡೆ ವಸತಿಗೃಹದಲ್ಲಿ ಭಾರತೀಯ ನೌಕಾಪಡೆಯ ಸಿಬ್ಬಂದಿ, ಅವರ ಪತ್ನಿ ಹಾಗೂ ಇಬ್ಬರು ಮಕ್ಕಳ ಮೃತದೇಹಗಳು ಪತ್ತೆಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆ ಆರಂಭಿಸಲಾಗಿದೆ.
ಮೃತ ಮಕ್ಕಳ ಪೈಕಿ ಒಬ್ಬರಿಗೆ ಎರಡು ತಿಂಗಳು ಹಾಗೂ ಮತ್ತೊಬ್ಬರಿಗೆ ಮೂರು ವರ್ಷ ವಯಸ್ಸಾಗಿದೆ ಎಂದು ತಿಳಿದುಬಂದಿದೆ. ನೇವಿ ನಗರ ಪೊಲೀಸರು ನಾಲ್ವರ ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ನೌಕಾಪಡೆಯ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮಕ್ಕಳ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ವಿಷಪ್ರಾಶನವಾಗಿರುವ ಸಾಧ್ಯತೆಯ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ಹಾಗೂ ವಿಧಿವಿಜ್ಞಾನ ಪರೀಕ್ಷೆಯ ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ತಿಳಿದುಬರಲಿದೆ.
ಪೊಲೀಸರು ಘಟನಾ ಸ್ಥಳದಿಂದ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಕುಟುಂಬದ ಸದಸ್ಯರು, ನೆರೆಹೊರೆಯವರು ಹಾಗೂ ಸಂಬಂಧಪಟ್ಟವರ ಹೇಳಿಕೆಗಳನ್ನು ದಾಖಲಿಸುತ್ತಿದ್ದಾರೆ.
ಘಟನೆ ಕುರಿತು ಭಾರತೀಯ ನೌಕಾಪಡೆ ವಿಷಾದ ವ್ಯಕ್ತಪಡಿಸಿದ್ದು, ಆಗಸ್ಟ್ 15ರಂದು ನೇವಿ ನಗರದಲ್ಲಿ ನೌಕಾಪಡೆಯ ಸಿಬ್ಬಂದಿಯೊಬ್ಬರು ಕುಟುಂಬ ಸಮೇತ ಮನೆಯಲ್ಲಿ ಮೃತಪಟ್ಟಿರುವುದು ಪತ್ತೆಯಾಗಿದೆ ಎಂದು ತಿಳಿಸಿದೆ. ಪ್ರಕರಣದ ತನಿಖೆಗೆ ಪೊಲೀಸರು ಮುಂದಾಗಿದ್ದು, ನೌಕಾಪಡೆಯು ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿದೆ ಎಂದು ಹೇಳಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.