ಅಭಿವೃದ್ಧಿ ಹೊಂದಿದ ಭಾರತ ಗುರಿ ಸಾಕಾರಕ್ಕೆ ಸಪ್ತಶಕ್ತಿಗೆ ಒತ್ತು: ಪ್ರಧಾನಿ ಮೋದಿ
ದೇಶದ ಯುವಕರು ಬೌದ್ಧಿಕ ನಕ್ಸಲರಿಂದ ಎಚ್ಚರಿಕೆಯಿಂದಿರಬೇಕು:ಪ್ರಧಾನಿ ಮೋದಿ
प्रधानमंत्री मोदी राष्ट्र के नाम संबोधन करते हुए


ನವದೆಹಲಿ, 15 ಆಗಸ್ಟ್ (ಹಿ.ಸ.):

ಆ್ಯಂಕರ್:2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ಗುರಿಯನ್ನು ಸಾಕಾರಗೊಳಿಸಲು ದೇಶದ ಅಭಿವೃದ್ಧಿಗೆ ವೇಗ ನೀಡಬೇಕಿದ್ದು, ಇದಕ್ಕಾಗಿ ‘ಸಪ್ತಶಕ್ತಿ’ಯನ್ನು ಬಲಪಡಿಸುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ಸ್ವಾತಂತ್ರ್ಯೋತ್ಸವದ ಅಂಗವಾಗಿ ಶನಿವಾರ ಕೆಂಪುಕೋಟೆಯಿಂದ ರಾಷ್ಟ್ರವನ್ನುದ್ದೇಶಿಸಿ ಸುಮಾರು 75 ನಿಮಿಷಗಳ ಕಾಲ ಮಾತನಾಡಿದ ಪ್ರಧಾನಿ ಮೋದಿ, ಉತ್ಪಾದನೆ, ಕೃಷಿ ಮತ್ತು ಆಹಾರ ಸಂಸ್ಕರಣೆ, ತಂತ್ರಜ್ಞಾನ ಮತ್ತು ನವೋದ್ಯಮ, ಗತಿಶಕ್ತಿ, ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರತೆ, ಹಸಿರು ಆರ್ಥಿಕತೆ ಹಾಗೂ ಭಾರತದ ಸಾಫ್ಟ್ ಪವರ್‌ಗಳನ್ನು ಸಪ್ತಶಕ್ತಿಗಳೆಂದು ವಿವರಿಸಿದರು.

ಕನಸುಗಳನ್ನು ಸಂಕಲ್ಪವಾಗಿ, ಸಂಕಲ್ಪವನ್ನು ಸಾಮರ್ಥ್ಯವಾಗಿ ಹಾಗೂ ಸಾಮರ್ಥ್ಯವನ್ನು ಯಶಸ್ಸಾಗಿ ಪರಿವರ್ತಿಸಬೇಕು ಎಂದು ಅವರು ಹೇಳಿದರು. ಕಳೆದ 12 ವರ್ಷಗಳಲ್ಲಿ ಸರ್ಕಾರ ಕೈಗೊಂಡ ವಿವಿಧ ಯೋಜನೆಗಳ ಫಲವಾಗಿ ದೇಶವು ಹಲವು ಕ್ಷೇತ್ರಗಳಲ್ಲಿ ಸ್ವಾವಲಂಬನೆಯತ್ತ ಸಾಗುತ್ತಿದೆ. ಪಶ್ಚಿಮ ಏಷ್ಯಾದಂತಹ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ದೇಶ ದೃಢವಾಗಿ ನಿಲ್ಲಲು ಆತ್ಮನಿರ್ಭರತೆಯ ಪ್ರಯತ್ನಗಳು ನೆರವಾಗಿವೆ ಎಂದರು.

ಜಾಗತೀಕರಣದ ಬದಲು ಪೂರೈಕೆ ಸರಪಳಿ ಬಲ

ಜಗತ್ತು ಜಾಗತೀಕರಣದ ಮೋಹದಿಂದ ಹೊರಬಂದು ಪೂರೈಕೆ ಸರಪಳಿಯನ್ನೇ ಅಸ್ತ್ರವನ್ನಾಗಿ ಬಳಸುತ್ತಿರುವ ಸಂದರ್ಭದಲ್ಲಿ ಭಾರತ ಸ್ವಾವಲಂಬಿಯಾಗುವುದು ಅತ್ಯಂತ ಅಗತ್ಯವಾಗಿದೆ ಎಂದು ಪ್ರಧಾನಿ ಹೇಳಿದರು.

ತೈಲ ಮತ್ತು ಖನಿಜ ಸಂಪತ್ತಿನ ಶೋಧನೆಗಾಗಿ ₹85 ಸಾವಿರ ಕೋಟಿ ವೆಚ್ಚದಲ್ಲಿ ‘ಸಮುದ್ರ ಮಂಥನ’ ಯೋಜನೆ ಆರಂಭಿಸಲಾಗಿದೆ. ಸಮುದ್ರದ ಶೇ.99ರಷ್ಟು ಪ್ರದೇಶದಲ್ಲಿ ಖನಿಜ ಸಂಪತ್ತಿನ ಶೋಧನೆಯ ಕುರಿತು ಈವರೆಗೆ ಯೋಚನೆಯೇ ನಡೆದಿರಲಿಲ್ಲ. ಇದು ಚಿಂತನೆಯ ಕೊರತೆಯ ಪರಿಣಾಮ ಎಂದು ಅವರು ಹೇಳಿದರು.

ಬೌದ್ಧಿಕ ನಕ್ಸಲರಿಂದ ಯುವಕರು ಎಚ್ಚರ

ದೇಶದ ಯುವಕರು ‘ಬೌದ್ಧಿಕ ನಕ್ಸಲರಿಂದ’ ಎಚ್ಚರಿಕೆಯಿಂದಿರಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದರು. ದಶಕಗಳ ಕಾಲ ಅಧಿಕಾರದಲ್ಲಿದ್ದ ಇಂತಹವರು ಈಗ ಅವಕಾಶಕ್ಕಾಗಿ ಕಾಯುತ್ತಿದ್ದು, ಅರಾಜಕತೆಯ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಸಮಾಜವನ್ನು ತಪ್ಪು ದಾರಿಗೆ ಎಳೆಯಲು ವಿವಿಧ ತಂತ್ರಗಳನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಹಿಂಸಾತ್ಮಕ ನಕ್ಸಲಿಸಂ ಅನ್ನು ನಿಯಂತ್ರಿಸುವಲ್ಲಿ ದೇಶ ಯಶಸ್ವಿಯಾಗಿದೆ. ಈಗ ಬೌದ್ಧಿಕ ನಕ್ಸಲರನ್ನು ಗುರುತಿಸಿ ಅವರನ್ನು ಸಮಾಜದಿಂದ ಪ್ರತ್ಯೇಕಿಸುವ ಅಗತ್ಯವಿದೆ ಎಂದು ಹೇಳಿದರು.

ವರ್ಷಕ್ಕೆ ಒಂದು ಕೋಟಿ ಯುವಕರಿಗೆ ಕೃತಕ ಬುದ್ಧಿಮತ್ತೆ ತರಬೇತಿ

ದೇಶದಲ್ಲಿ ಪ್ರತಿವರ್ಷ ಒಂದು ಕೋಟಿ ಯುವಕರಿಗೆ ಕೃತಕ ಬುದ್ಧಿಮತ್ತೆ (ಎಐ) ಕುರಿತು ತರಬೇತಿ ನೀಡುವ ಗುರಿಯನ್ನು ಪ್ರಧಾನಿ ಘೋಷಿಸಿದರು. 2036ರ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸುವ ಹಿನ್ನೆಲೆಯಲ್ಲಿ, ಭಾರತ ಇನ್ನೂ ಭಾಗವಹಿಸದ ಕ್ರೀಡೆಗಳಲ್ಲಿಯೂ 5ರಿಂದ 15 ವರ್ಷದೊಳಗಿನ ಮಕ್ಕಳ ಪ್ರತಿಭೆ ಗುರುತಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಅನೇಕ ಕುಟುಂಬಗಳು ದೊಡ್ಡ ಮೊತ್ತದ ಹಣ ವ್ಯಯಿಸುತ್ತಿವೆ. ದೇಶದ ಡಿಜಿಟಲ್ ಮೂಲಸೌಕರ್ಯವನ್ನು ಬಳಸಿಕೊಂಡು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆನ್‌ಲೈನ್ ತರಬೇತಿ ವ್ಯವಸ್ಥೆ ರೂಪಿಸಿ ವಿದ್ಯಾರ್ಥಿಗಳಿಗೆ ನೆರವು ನೀಡಲಾಗುವುದು ಎಂದು ತಿಳಿಸಿದರು.

ದೇಶದ ಆಂತರಿಕ ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ನಾಗರಿಕರಿಗೆ ನಾಗರಿಕ ರಕ್ಷಣೆಯ ತರಬೇತಿ ನೀಡಲಾಗುವುದು ಎಂದೂ ಅವರು ಘೋಷಿಸಿದರು.

ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ಸಹಕಾರ ನೀಡಿ

ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆ ಅಂಗೀಕಾರಕ್ಕೆ ಎಲ್ಲ ರಾಜಕೀಯ ಪಕ್ಷಗಳು ಸಹಕರಿಸಬೇಕು ಎಂದು ಪ್ರಧಾನಿ ಮನವಿ ಮಾಡಿದರು.

ಮುಂಬರುವ ಜನಗಣತಿಯಲ್ಲಿ ನಾಗರಿಕರು ತಮ್ಮ ಸಮಯ ಮೀಸಲಿಟ್ಟು ಭಾಗವಹಿಸಬೇಕು ಹಾಗೂ ಕೇಳಲಾಗುವ ಎಲ್ಲ ಪ್ರಶ್ನೆಗಳಿಗೆ ಸಿದ್ಧರಾಗಿರಬೇಕು ಎಂದು ಕರೆ ನೀಡಿದರು.

ಜಾಗತಿಕ ಮಾರುಕಟ್ಟೆ ವಿಸ್ತರಿಸಿಕೊಳ್ಳಲು ಸಣ್ಣ ಕೈಗಾರಿಕೆಗಳಿಗೆ ಕರೆ

ವಿವಿಧ ದೇಶಗಳೊಂದಿಗೆ ಭಾರತ ಮಾಡಿಕೊಂಡಿರುವ ಮುಕ್ತ ವ್ಯಾಪಾರ ಸೇರಿದಂತೆ ಹಲವು ಒಪ್ಪಂದಗಳ ಲಾಭವನ್ನು ದೇಶದ ಸಣ್ಣ ಕೈಗಾರಿಕೆಗಳು ಪಡೆದುಕೊಳ್ಳಬೇಕು. ಜಾಗತಿಕ ಮಾರುಕಟ್ಟೆಯಲ್ಲಿ ತಮ್ಮ ಉತ್ಪನ್ನಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಹೇಳಿದರು.

2047ರ ಅಭಿವೃದ್ಧಿ ಹೊಂದಿದ ಭಾರತದ ಗುರಿಯ ಅತಿ ದೊಡ್ಡ ಫಲಾನುಭವಿಗಳು ದೇಶದ ಯುವಕರಾಗಿದ್ದು, ಅವರನ್ನು ಈ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಗುರಿಯೊಂದಿಗೆ ಬೆಸೆದುಕೊಳ್ಳುವುದು ಅತ್ಯಂತ ಅಗತ್ಯ ಎಂದು ಅವರು ಪ್ರತಿಪಾದಿಸಿದರು.

ಪ್ರಸ್ತುತ ದೇಶವು 80ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದ್ದು, ಮುಂದಿನ ಪೀಳಿಗೆಯ ಭಾರತಕ್ಕಾಗಿ ಇಂದಿನಿಂದಲೇ ದೃಢ ಸಂಕಲ್ಪದೊಂದಿಗೆ ಮುನ್ನಡೆಯಬೇಕಾಗಿದೆ ಎಂದು ಪ್ರಧಾನಿ ಕರೆ ನೀಡಿದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande