
ಬೆಂಗಳೂರು, 15 ಆಗಸ್ಟ್ (ಹಿ.ಸ.):
ಆ್ಯಂಕರ್:
2047ರ ವೇಳೆಗೆ ಕರ್ನಾಟಕದ ಆರ್ಥಿಕತೆಯನ್ನು 3 ಟ್ರಿಲಿಯನ್ ಡಾಲರ್‌ಗೆ ಕೊಂಡೊಯ್ಯುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದರು.
80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಾಣಿಕ್ ಶಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಶಿಕ್ಷಣ, ಉದ್ಯೋಗ, ಕೃಷಿ, ಕೈಗಾರಿಕೆ, ಮೂಲಸೌಕರ್ಯ, ನಗರಾಭಿವೃದ್ಧಿ ಹಾಗೂ ಜನಸೇವಾ ಕ್ಷೇತ್ರಗಳಲ್ಲಿ ಹಲವು ಮಹತ್ವದ ಯೋಜನೆಗಳನ್ನು ಪ್ರಕಟಿಸಿದರು.
ರಾಜ್ಯದ ಎಲ್ಲ ಶಾಲೆಗಳಲ್ಲಿ 6ನೇ ತರಗತಿಯಿಂದ ಕೃತಕ ಬುದ್ಧಿಮತ್ತೆ ಶಿಕ್ಷಣ ಪರಿಚಯಿಸಲಾಗುವುದು. ‘ಎಐ ಅಕ್ಷರ ಅಭಿಯಾನ’ ಹಾಗೂ ‘ಕೋಡಿಂಗ್ ಗುರುಕುಲ’ ಆರಂಭಿಸಲಾಗುವುದು. ಬೆಂಗಳೂರಿನಲ್ಲಿ ದೇಶದ ಪ್ರಪ್ರಥಮ ಸರ್ಕಾರಿ ಸ್ವಾಮ್ಯದ ಕೃತಕ ಬುದ್ಧಿಮತ್ತೆ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು. ರಾಜ್ಯದ ವಿವಿಧೆಡೆ ಎಐ ಕೇಂದ್ರಗಳನ್ನು ನಿರ್ಮಿಸಲಾಗುವುದು ಎಂದರು.
ಯುವಕರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ‘ಮುಖ್ಯಮಂತ್ರಿ ಉದ್ಯೋಗ ಸಂಕಲ್ಪ’ ಹಾಗೂ ‘ಯುವ ಉದ್ಯೋಗ ಸೇತು’ ಯೋಜನೆಗಳನ್ನು ಜಾರಿಗೊಳಿಸಲಾಗುವುದು. ಸರ್ಕಾರಿ ವಲಯದ 72 ಸಾವಿರ ಪ್ರಮುಖ ಖಾಲಿ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭವಾಗಿದ್ದು, ಮುಂದಿನ ಆರು ತಿಂಗಳಲ್ಲಿ ಎಲ್ಲ ಸರ್ಕಾರಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗುವುದು. ಮುಂದಿನ ಎರಡು ವರ್ಷಗಳಲ್ಲಿ ಒಂದು ಲಕ್ಷ ಹೊಸ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ. ಪ್ರತಿ ಹೊಸ ಉದ್ಯೋಗಕ್ಕೆ ತಿಂಗಳಿಗೆ ₹2,500 ಪ್ರೋತ್ಸಾಹಧನ ನೀಡಲಾಗುವುದು ಎಂದು ತಿಳಿಸಿದರು.
ರೈತರಿಗಾಗಿ ‘ಮುಖ್ಯಮಂತ್ರಿ ರೈತ ಚೈತನ್ಯ’ ಯೋಜನೆ ಜಾರಿಗೊಳಿಸಲಾಗುವುದು. ಡ್ರೋನ್ ಮತ್ತು ಉಪಗ್ರಹದ ಮೂಲಕ ಬೆಳೆ ಸಮೀಕ್ಷೆ ಹಾಗೂ ನೈಜ ಸಮಯದ ಮಾಹಿತಿ ಒದಗಿಸಲಾಗುವುದು. ‘ರೈತ ಮಿತ್ರ’ ಕಾರ್ಯಕ್ರಮದಡಿ 3 ಎಕರೆ ಅಥವಾ ಕಡಿಮೆ ಭೂಮಿ ಹೊಂದಿರುವ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಾಡಿಗೆ ಶುಲ್ಕದಲ್ಲಿ ಶೇ.50ರಷ್ಟು ಸಹಾಯಧನ ನೀಡಲಾಗುವುದು ಎಂದರು.
ದೊಡ್ಡಬಳ್ಳಾಪುರದಲ್ಲಿ ಮುಂದುವರಿದ ಉತ್ಪಾದನಾ ಸಮೂಹ ಸ್ಥಾಪಿಸಿ ₹20 ಸಾವಿರ ಕೋಟಿ ಹೂಡಿಕೆ ಆಕರ್ಷಿಸುವ ಹಾಗೂ ಸುಮಾರು ಒಂದು ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ. ‘ಬೆಂಗಳೂರು ಹೊರತುಪಡಿಸಿ’ ಯೋಜನೆಯಡಿ ಐದು ಜಾಗತಿಕ ತಂತ್ರಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದರು.
ಗ್ರಾಮೀಣ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳಲ್ಲಿ ಶೇ.7.5ರಷ್ಟು ಮೀಸಲಾತಿ ಕಲ್ಪಿಸಲಾಗುವುದು. ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ‘ಸಹಾಯ ಹಸ್ತ’ ಯೋಜನೆ ಜಾರಿಗೊಳಿಸಲಾಗುವುದು ಎಂದು ಹೇಳಿದರು.
ರಾಜ್ಯದ ಪಟ್ಟಣ ಹಾಗೂ ನಗರಗಳಲ್ಲಿ ವರ್ತುಲ ರಸ್ತೆ ಮತ್ತು ಸಂಚಾರ ಜಾಲ ಅಭಿವೃದ್ಧಿಪಡಿಸಲಾಗುವುದು. ಬೆಂಗಳೂರಿನ 117 ಕಿ.ಮೀ. ವರ್ತುಲ ರಸ್ತೆ ಒಳಗೊಂಡ ‘ಬೆಂಗಳೂರು ಬಿಸಿನೆಸ್ ಕಾರಿಡಾರ್’ ಯೋಜನೆಗೆ ಚಾಲನೆ ನೀಡಲಾಗುವುದು. ಬೆಂಗಳೂರಿನಲ್ಲಿ ಐದು ಹೊಸ ಪೊಲೀಸ್ ಆಯುಕ್ತಾಲಯಗಳು, ರೌಡಿ ನಿಗ್ರಹ ಪಡೆ, ಐದು ಬೃಹತ್ ವೃಕ್ಷೋದ್ಯಾನಗಳು ಹಾಗೂ ಏಳು ಪ್ರಮುಖ ಕೆರೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಘೋಷಿಸಿದರು.
ವಾಹನ ಮಾಲೀಕರಿಗೆ ಸರಳ ವಿಮಾ ಸೇವೆ ಒದಗಿಸಲು ಕರ್ನಾಟಕ ರಾಜ್ಯ ಮೋಟಾರು ವಾಹನ ವಿಮಾ ಸಂಸ್ಥೆ ಸ್ಥಾಪಿಸಲಾಗುವುದು. ಜನರ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಜಾಸೇವೆ ಇಲಾಖೆ ರಚಿಸಲಾಗುವುದು ಎಂದರು.
ಮೇಕೆದಾಟು ಯೋಜನೆಗೆ ಚಾಲನೆ ನೀಡುವ ಜೊತೆಗೆ 112 ಪ್ರಮುಖ ಜಲಸಂಪನ್ಮೂಲ ಯೋಜನೆಗಳಿಗೆ ₹16 ಸಾವಿರ ಕೋಟಿ ಅನುಮೋದನೆ ನೀಡಲಾಗಿದೆ. ಭೂ-ಖಾತರಿ ಮೂಲಕ ಆಸ್ತಿ ಮಾಲೀಕತ್ವದ ಗೊಂದಲ ಪರಿಹರಿಸಲಾಗುವುದು ಹಾಗೂ ಇ-ಖಾತಾ ವ್ಯವಸ್ಥೆಯ ಮೂಲಕ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ಶಿಕ್ಷಣ, ತಂತ್ರಜ್ಞಾನ ಮತ್ತು ಉದ್ಯೋಗದಿಂದ ಹಿಡಿದು ಕೃಷಿ, ಕೈಗಾರಿಕೆ ಹಾಗೂ ಮೂಲಸೌಕರ್ಯದವರೆಗೆ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ 2047ರ ವೇಳೆಗೆ ಕರ್ನಾಟಕವನ್ನು ಶಕ್ತಿಶಾಲಿ ಆರ್ಥಿಕತೆಯನ್ನಾಗಿ ರೂಪಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಅವರು ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.