
ನವದೆಹಲಿ, 15 ಆಗಸ್ಟ್ (ಹಿ.ಸ.):
ಆ್ಯಂಕರ್:ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೇಶದ ಜನತೆಗೆ ಶುಭಾಶಯ ಕೋರಿದ್ದು, ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳನ್ನು ಸ್ಮರಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸನಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ಸ್ವಾತಂತ್ರ್ಯವು ಕೇವಲ ಬ್ರಿಟಿಷರ ಆಳ್ವಿಕೆಯಿಂದ ಮುಕ್ತಿಯಾಗುವುದಲ್ಲ. ಭಾರತದ ಸಂವಿಧಾನ ಪ್ರತಿಯೊಬ್ಬ ನಾಗರಿಕನಿಗೆ ನೀಡಿರುವ ಸಮಾನತೆ, ಘನತೆ, ನ್ಯಾಯ ಹಾಗೂ ಭಯವಿಲ್ಲದೆ ಮಾತನಾಡುವ ಸ್ವಾತಂತ್ರ್ಯದ ಭರವಸೆಯೇ ನಿಜವಾದ ಸ್ವಾತಂತ್ರ್ಯ ಎಂದು ಖರ್ಗೆ ಹೇಳಿದ್ದಾರೆ.
ಕಳೆದ ಒಂದು ದಶಕದಲ್ಲಿ ಸಂವಿಧಾನದ ಮೌಲ್ಯಗಳು, ಪ್ರಜಾಪ್ರಭುತ್ವ ಸಂಸ್ಥೆಗಳು ಮತ್ತು ಸಾಮಾಜಿಕ ಸಾಮರಸ್ಯ ಗಂಭೀರ ಸವಾಲುಗಳನ್ನು ಎದುರಿಸಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಯುವಕರಿಗೆ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಅಗತ್ಯ ಅವಕಾಶಗಳು ದೊರೆಯಬೇಕು. ರೈತರ ಶ್ರಮಕ್ಕೆ ಗೌರವ ಮತ್ತು ನ್ಯಾಯ ಸಿಗಬೇಕು. ಮಹಿಳೆಯರಿಗೆ ಸಮಾನತೆ, ಸಬಲೀಕರಣ ಹಾಗೂ ದೇಶದ ಭವಿಷ್ಯ ರೂಪಿಸುವಲ್ಲಿ ಸಮಾನ ಧ್ವನಿ ದೊರೆಯಬೇಕು ಎಂದು ಒತ್ತಾಯಿಸಿದ್ದಾರೆ.
ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಹಾಗೂ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸಂವಿಧಾನ ಭರವಸೆ ನೀಡಿರುವ ಸಮಾನತೆ ಮತ್ತು ನ್ಯಾಯ ಸಂಪೂರ್ಣವಾಗಿ ದೊರೆಯಬೇಕು ಎಂದು ಖರ್ಗೆ ಹೇಳಿದ್ದಾರೆ.
ಸ್ವಾತಂತ್ರ್ಯ ದಿನದಂದು ನಮ್ಮ ಅತ್ಯಂತ ದೊಡ್ಡ ಸಂಕಲ್ಪ ಭರವಸೆಯಾಗಿರಬೇಕು ಎಂದು ಅವರು ಕರೆ ನೀಡಿದ್ದು, ದೇಶದ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.